Advertisement

7ನೇ ತರಗತಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಗೊಂದಲ

04:59 PM Mar 09, 2020 | Naveen |

ಸಾಗರ: ಈ ವರ್ಷದಿಂದ ಶಿಕ್ಷಣ ಇಲಾಖೆ ಏಳನೇ ತರಗತಿಯ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆಯ ಶೈಲಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಿದ್ದು, ಈ ಪ್ರಶ್ನೆ ಪತ್ರಿಕೆಯ ಮಾದರಿಯ ಬಗ್ಗೆ ಖಾಸಗಿ ಶಾಲೆಯ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ಪಠ್ಯ ಪುಸ್ತಕಗಳ ಆಯ್ಕೆ ಹಾಗೂ ಮಾಹಿತಿಯ ಕೊರತೆಯಿಂದ ಈ ಗೊಂದಲ ಕೇವಲ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಈ ಬಾರಿಯ ಪಬ್ಲಿಕ್‌ ಪರೀಕ್ಷೆಯನ್ನು ಎದುರಿಸಲು ಹೆಚ್ಚು ಸಿದ್ಧವಾಗಿರುವುದು ವ್ಯಕ್ತವಾಗುತ್ತಿದೆ.

Advertisement

ಸತತವಾಗಿ ಶಾಲಾ ಆಂತರಿಕ ಪರೀಕ್ಷೆ ಹಾಗೂ ಅನುತ್ತೀರ್ಣತೆಯ ಸಂಕೋಲೆ ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯದ ವಾಸ್ತವತೆಯ ನಿಜ ಚಿತ್ರಣ ಪಡೆಯಲಿಕ್ಕಾಗಿಯೇ ಈ ಬಾರಿ ಏಳನೇ ತರಗತಿಗೆ ಎಸ್‌ಸಿಆರ್‌ಟಿ ಆಧಾರಿತ ಪಠ್ಯಪುಸ್ತಕಗಳನ್ನು ಆಧರಿಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ರೂಪಿಸಲಾಗಿದೆ.

ಇದರಲ್ಲಿ ವಿದ್ಯಾರ್ಥಿಗಳು ತಮ್ಮ ತರ್ಕ ಶಕ್ತಿ ಹಾಗೂ ತೊಡಗಿಸಿಕೊಳ್ಳುವ ಶಕ್ತಿ ಆಧರಿಸಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಪತ್ರಿಕೆಯನ್ನು ರೂಪಿಸಲಾಗಿದೆ. ಹಾಗಾಗಿ ಹಲವು ಪ್ರಶ್ನೆಗಳು ಪಠ್ಯದ ಆಧಾರದ ಮೇಲೆ ಹೊರಗಡೆಯೂ ಕೇಳುವ ಕ್ರಮ ಇದರಲ್ಲಿ ಕಾಣಬಹುದು ಎಂದು ಶಿಕ್ಷಣ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಾರಿ 7ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಸರ್ಕಾರಿ ಶಾಲೆಗಳು ಸರ್ವ ರೀತಿಯಲ್ಲಿ ಸಜ್ಜುಗೊಂಡಿವೆ. ಎನ್‌ ಸಿಆರ್‌ಟಿ ಪಠ್ಯದ ಬಗ್ಗೆ ಡಯಟ್‌ ಮೂಲಕ ಸರ್ಕಾರಿ ಶಾಲಾ ಶಿಕ್ಷಕರು ಪಡೆದ ತರಬೇತಿ ಹಾಗೂ ಪರೀಕ್ಷೆ ಕುರಿತಾಗಿ ಸಿಕ್ಕ ಸ್ಪಷ್ಟ ಚಿತ್ರಣದಿಂದ ಅವರು ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲಗಳು ಆಗದಂತೆ ನೋಡಿಕೊಳ್ಳುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೆ, ಇಂತಹ ವಾರ್ಷಿಕ ಪರೀಕ್ಷೆ ಎದುರಿಸಲು ಭಾನುವಾರ ಕೂಡ ಕೆಲವು ಶಾಲೆಗಳಲ್ಲಿ ಪೂರ್ವ ತಯಾರಿ ಪರೀಕ್ಷೆಯನ್ನು ತಾಲೂಕಿನಲ್ಲಿ ಕೆಲವೆಡೆ ನಡೆಸಲಾಗುತ್ತಿದೆ.

Advertisement

ಖಾಸಗಿ ಶಾಲೆಗಳಲ್ಲಿಯೇ ಸಮಸ್ಯೆ!: ಹಲವು ಖಾಸಗಿ ಶಾಲೆಗಳಲ್ಲಿ ಎನ್‌ ಸಿಆರ್‌ಟಿ ಪಠ್ಯ ಪುಸ್ತಕವನ್ನು ಅನುಸರಿಸದೆ ತಮ್ಮದೇ ಆಯ್ಕೆಯ ಖಾಸಗಿ ಮುದ್ರಕರ ಪಠ್ಯ ಪುಸ್ತಕಗಳನ್ನು ಆಧರಿಸಿ ಪಾಠ ಮಾಡುತ್ತಿರುವುದರಿಂದ ಪಬ್ಲಿಕ್‌ ಪರೀಕ್ಷೆ ಆ ಶಾಲೆಯ ಮಕ್ಕಳಿಗೆ ಸಮಸ್ಯೆ ತಂದೊಡ್ಡಬಹುದು ಎಂಬ ಅಭಿಪ್ರಾಯವಿದೆ. ಅವರಲ್ಲಿ ಈ ಬಾರಿಯ ಪಬ್ಲಿಕ್‌ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯ ಲಭ್ಯತೆಯೂ ಅನುಮಾನಾಸ್ಪದವಾಗಿರುವ ಪ್ರಕರಣಗಳಿದ್ದು ಅಂತಹ ಶಾಲೆಯ ಮಕ್ಕಳು ಸಂಪೂರ್ಣ ಅಂಧಕಾರದಲ್ಲಿದ್ದಾರೆ.

ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಕೂಡ ತನ್ನ ಶೈಕ್ಷಣಿಕ ಉನ್ನತಿಗಾಗಿ ನಡೆಸುವ ತರಬೇತಿಗಳಲ್ಲಿ ಅವಕಾಶ ನೀಡುವುದಿಲ್ಲವಾದ್ದರಿಂದ ಅವರ ಶೈಕ್ಷಣಿಕ ನಿರ್ವಹಣೆ ಗೊಂದಲಕಾರಿಯಾಗಿದೆ. ಅಪ್‌ಡೇಟ್‌ ಆಗದ ಶಿಕ್ಷಕರ ಕಾರಣಕ್ಕಾಗಿಯೇ ಮಕ್ಕಳಲ್ಲಿ ಗೊಂದಲ ಉಳಿದಿದೆ ಎಂಬ ಪ್ರತಿಪಾದನೆ ಶಿಕ್ಷಣ ಇಲಾಖೆ ಮೂಲಗಳಿಂದ ಬಂದಿದೆ.

ಆತಂಕ ಅನಗತ್ಯ: ಏಳನೇ ತರಗತಿಗೆ ನಡೆಯುತ್ತಿರುವುದು ವಾಸ್ತವವಾಗಿ ಎಸ್‌ ಎಸ್‌ಎಲ್‌ಸಿ ತರಹದ ಪಬ್ಲಿಕ್‌ ಪರೀಕ್ಷೆ ಅಲ್ಲ. ಜಿಲ್ಲಾ ಮಟ್ಟದಲ್ಲಿ ಸಿದ್ಧಗೊಳ್ಳುವ ಪ್ರಶ್ನೆ ಪತ್ರಿಕೆಯ ಮೌಲ್ಯಮಾಪನ ಆಯಾ ಶಾಲೆಗಳಲ್ಲಿ ಅಲ್ಲಿನ ಶಿಕ್ಷಕರ ಮೂಲಕವೇ ಆಗುತ್ತದೆ. ಆದರೆ ಭಿನ್ನ ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಯುವುದು ಮತ್ತು ಇದರ ದತ್ತಾಂಶವನ್ನು ಶಿಕ್ಷಣ ಇಲಾಖೆಗೆ ಆನ್‌ಲೈನ್‌ನಲ್ಲಿ ಒದಗಿಸುವುದರಿಂದ ವಿದ್ಯಾರ್ಥಿಗಳ ವಾಸ್ತವ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗುತ್ತದೆ. ಆದರೆ ಇಂತಹ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅದೇ ಶಾಲೆಯ ಶಿಕ್ಷಕರಿಂದ ನಡೆಯುತ್ತದೆ ಮತ್ತು ವಿದ್ಯಾರ್ಥಿಗಳ ಈ ಹಿಂದಿನ ಫಲಿತಾಂಶಗಳನ್ನು ಆಧರಿಸಿ ಅವರನ್ನು ಮುಂದಿನ ತರಗತಿಗೆ ಅರ್ಹತೆ ಘೋಷಿಸುವುದರಿಂದ ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕರೊಬ್ಬರು ತಿಳಿಸಿದರು.

ಏಳನೆಯ ತರಗತಿ ಓದುತ್ತಿರುವ ನನ್ನ ಮಗನ ಸಲುವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಂಟರ್‌ನೆಟ್‌ನಲ್ಲಿ ಹುಡುಕುವಾಗ ವ್ಯತ್ಯಾಸವಾಗಿರುವ ಬಗ್ಗೆ ಗಮನಕ್ಕೆ ಬಂದಿತು. ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡನ್ನೂ ಪ್ರಥಮ ಭಾಷೆ ಎಂದು ಹೇಳಲಾಗಿದೆ. ಕನ್ನಡ ಭಾಷೆಗೆ ಸಿರಿ ಕನ್ನಡ ಪಠ್ಯಪುಸ್ತಕ ನೀಡಿದ್ದಾರೆ. ನನ್ನ ಮಗ ಅದನ್ನೇ ಅಭ್ಯಾಸ ಮಾಡಿದ್ದಾನೆ. ಈಗ ಮಾಡೆಲ್‌ ಪೇಪರ್‌ ಗಮನಿಸಿದಾಗ ಕನ್ನಡ ದ್ವಿತೀಯ ಭಾಷೆಯಾಗಿದ್ದು, ತಿಳಿ ಕನ್ನಡ ಪಠ್ಯ ಪುಸ್ತಕ ಆಧರಿಸಿದ ಪ್ರಶ್ನೆಪತ್ರಿಕೆ ನೀಡುವ ವಿಷಯ ಗಮನಕ್ಕೆ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿದಾಗ, 6 ತಿಂಗಳುಗಳ ಹಿಂದೆ ಈ ಸಂಬಂಧ ಸಭೆ ಕರೆಯಲಾಗಿತ್ತು. ಆಗ ಆ ಶಾಲೆಯವರು ಈ ವಿಷಯ ತಿಳಿಸಿದ್ದರೆ ಸೂಕ್ತ ಪ್ರಶ್ನೆ ಪತ್ರಿಕೆ ನೀಡುವ ವ್ಯವಸ್ಥೆ ಮಾಡಬಹುದಿತ್ತು ಎನ್ನುತ್ತಾರೆ. ನನ್ನ ಮಗ ಅಭ್ಯಾಸ ಮಾಡುತ್ತಿರುವ ಶಾಲೆಯ ಮುಖ್ಯಸ್ಥರ ಗಮನಕ್ಕೆ ಈ ವಿಷಯ ತರಲಾಗುವುದು.
ಹೆಸರು ಹೇಳಲಿಚ್ಛಿಸದ ಪೋಷಕಿ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next