ಮತ್ಸ್ಯೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಯುವಜನಾಂಗವನ್ನು ಈ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ 3,477 “ಸಾಗರ್ ಮಿತ್ರ’ ಹಾಗೂ 500 ಮೀನುಗಾರರ ಸಂಘಗಳ ಸ್ಥಾಪನೆ ಮಾಡುತ್ತಿದೆ. ಮೀನು ಉತ್ಪಾದನೆಗೆ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದು, ಸಮುದ್ರದ ದಡದಲ್ಲಿ ಪಾಚಿಗಳು, ಸಮುದ್ರ ಕಳೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಮತ್ತು ಮೀನುಗಳ ಆಹಾರದ ಗೋದಾಮು ಸಂಸ್ಕೃತಿ ಉತ್ತೇಜಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆ ಮೂಲಕ 2022-23ರ ಆರ್ಥಿಕ ಸಾಲಿನಲ್ಲಿ ಮೀನುಗಳ ಉತ್ಪಾದನೆಯನ್ನು 200 ಲಕ್ಷ ಟನ್‌ಗಳಿಗೆ ಹಾಗೂ 2024-25ರ ಆರ್ಥಿಕ ಸಾಲಿನಲ್ಲಿ ಮೀನುಗಳ ರಫ್ತು ಪ್ರಮಾಣವನ್ನು 1 ಲಕ್ಷ ಕೋಟಿ ಟನ್‌ಗಳಿಗೆ ಏರಿಸುವ ಗುರಿ ಹೊಂದಿದೆ.
ರೈತನಿಗೆ ಸೌರಶಕ್ತಿ: “ರೈತರು ಕೇವಲ ಅನ್ನದಾತರು ಮಾತ್ರವಲ್ಲ, ವಿದ್ಯುತ್‌ದಾತರೂ ಹೌದು’ ಎನ್ನುವ ಮೂಲಕ ಸಚಿವರು, ರೈತರ ಸೇವೆಯನ್ನು ಶ್ಲಾ ಸಿದ್ದಾರೆ. ಹೆಚ್ಚು ನೀರನ್ನು ಆಶ್ರಯಿಸುವ ಬೆಳೆಗಳ ಬದಲಿಗೆ ವೈವಿಧ್ಯಮಯ ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು, ಬರಡು ಭೂಮಿಯಲ್ಲಿ ಸಾವಯವ ಕೃಷಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಕೃಷಿ ಪರ ಯೋಜನೆಗಳು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ ಎಂದ ನಿರ್ಮಲಾ ಸೀತಾರಾಮನ್, ಪಂಪ್‌ಸೆಟ್‌ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಘೋಷಿಸಿದ್ದಾರೆ.
ಬರಡು ಭೂಮಿ ಹೊಂದಿರುವ ರೈತರು, ತಮ್ಮ ಹೊಲಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಸಹಾಯ ಕಲ್ಪಿಸುವುದರ ಜೊತೆಗೆ, ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ನ್ನು ಗ್ರಿಡ್ ಮೂಲಕ ಸರಕಾರವೇ ಖರೀದಿಸಲಿದೆ ಎಂದು ತಿಳಿಸಿದ್ದಾರೆ. ಆ ಮೂಲಕ ರೈತನಿಗೆ ಬರಡು ಭೂಮಿಯಲ್ಲೂ ಆದಾಯ ಗಳಿಸುವ ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ವಿಸ್ತರಣೆ ಮೂಲಕ 20 ಲಕ್ಷ ಕೃಷಿಕರಿಗೆ ಸೋಲಾರ್ ಪಂಪ್‌ಸೆಟ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಗೃಹಲಕ್ಷ್ಮೀಯರಿಗೆ “ಧಾನ್ಯಲಕ್ಷ್ಮೀ’
ದೇಶದ ಆರ್ಥಿಕ ಬೆನ್ನೆಲುಬು, ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತು ನೀಡಿದ್ದಾರೆ. ಮಹಿಳಾ ಕೃಷಿಕರನ್ನು ಉತ್ತೇಜಿಸಲು “ಧಾನ್ಯಲಕ್ಷ್ಮೀ’ ಯೋಜನೆಯನ್ನು ಮಂಡಿಸಿದ್ದಾರೆ. ಈ ಯೋಜನೆಯಡಿ ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಧನ ಸಹಾಯ ಮಾಡಲಾಗುವುದು. ಅಲ್ಲದೆ, ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿ ನೆರವು ನೀಡುವ ಭರವಸೆ ನೀಡಿದ್ದಾರೆ.