ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಹನುಮ ಧ್ವಜ ಹಾಕಬಹುದು. ಕೇಸರಿ ಧ್ವಜ ಹಾಕುವುದು ತಪ್ಪಲ್ಲ, ಅದು ನಮ್ಮ ಹಕ್ಕು. ಕೇಸರಿ ಧ್ವಜ ಧರ್ಮದ ದೃಷ್ಟಿಯಿಂದ ಅಲ್ಲ, ಅದು ಪರಂಪರೆಯಿಂದ ಬಂದಿದ್ದು. ರಾಮನ ಹೆಸರು ಇಟ್ಟುಕೊಂಡ ಸಿದ್ದರಾಮಯ್ಯ ಹನುಮಂತನಿಗೆ ಅಪಮಾನ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಸಮಯದಲ್ಲೂ ಸರಕಾರಿ ರಜೆ ಕೊಟ್ಟಿಲ್ಲ. ಇದೀಗ ಹನುಮ ಭಕ್ತರು ಹಾಕಿದ ಧ್ವಜವನ್ನು ಅಧಿಕಾರಿಗಳ ಮೂಲಕ ತೆಗೆಸಿ, ಹಿಂದೂ ಸಮಾಜ ಮತ್ತು ರಾಮಭಕ್ತರಿಗೆ ಅಪಮಾನ ಮಾಡಿದೆ. ಹೋರಾಟ ಮಾಡಿದ ರಾಮ ಮತ್ತು ಹನುಮ ಭಕ್ತರ ಲಾಠಿ ಚಾರ್ಜ್ ಮಾಡಿ, ದಬ್ಟಾಳಿಕೆ- ದೌರ್ಜನ್ಯದ ಮೂಲಕ ಹಿಂದೂ ಹೋರಾಟವನ್ನು ದಮನ ಮಾಡುವ ಯತ್ನ ಮಾಡಿದೆ ಎಂದರು.
ಸಿದ್ದರಾಮಯ್ಯ ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದಾಗ “ರಾವಣ’ನಂತೆ ಆಡಳಿತ ಮಾಡಿದವರು. ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಸಮಾಜದ ಮೇಲೆ ದೌರ್ಜನ್ಯ ಮಾಡಿದ್ದಾರೆ. ಗೋ ಹತ್ಯೆ ನಿಷೇಧ ವಾಪಸ್ ಯತ್ನ, ಗೋ ರಕ್ಷಕರನ್ನು ಜೈಲಿಗಟ್ಟುವ ಕೆಲಸ ಮಾಡಿದ್ದು, ಗೋ ಹಂತಕರಿಗೆ ಪರಿಹಾರ ಕೊಡುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿದ್ದರು ಎಂದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಇಂಥ ಹೋರಾಟ ನಡೆದಿತ್ತು. ಯಾವುದೇ ಪರಿಸ್ಥಿತಿಯಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಸರಕಾರದ ಕರ್ತವ್ಯ. ಆದರೆ ಮಂಡ್ಯದಲ್ಲಿ ಅಧಿಕಾರಿಗಳ ಮೂಲಕ ಹಿಂದೂಗಳನ್ನು ಭಯ ಪಡಿಸುವ ಕೆಲಸ ಮಾಡಿದೆ. ಈ ವಿಚಾರವಾಗಿ ಅಧಿಕಾರಿಗಳನ್ನೂ ಬಲಿಪಶುಗಳಾಗಿ ಮಾಡಲಾಗುತ್ತಿದೆ ಎಂದರು.
ನಾಳೆ ಹನುಮಧ್ವಜ ಅಭಿಯಾನ
ಮಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ರಾಮಭಕ್ತರು ಹಾಕಿದ ಹನುಮಧ್ವಜವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಫೆ. 1ರಂದು ರಾಜ್ಯದಾದ್ಯಂತ ಧ್ವಜಕಟ್ಟೆ, ಸರ್ಕಲ್, ಕಾರ್ಯಕರ್ತರ ಮನೆಗಳಲ್ಲಿ ಹನುಮಾನ್ ಧ್ವಜ ಹಾಕುವ ಅಭಿಯಾನ ನಡೆಯಲಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ತಿಳಿಸಿದ್ದಾರೆ.