Advertisement

ಪ್ರಧಾನಿ ಮೋದಿ ಆಗಮನ; ಕೇಸರಿಮಯವಾದ ಸಕ್ಕರೆ ನಗರ: ರಾತ್ರೋರಾತ್ರಿ ದ್ವಾರ ಬದಲಾವಣೆ

09:43 AM Mar 12, 2023 | Team Udayavani |

ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸುವ ಮಂಡ್ಯ ನಗರ ಸಂಪೂರ್ಣ ಕೇಸರಿ ಮಯವಾಗಿದೆ.

Advertisement

ಮೈಸೂರು ವಿಮಾನ ನಿಲ್ದಾಣದಿಂದ ಮಂಡ್ಯ ನಗರಕ್ಕೆ ಆಗಮಿಸುವ ಮೋದಿ ಅವರು, ನಗರದ ಪಿಇಟಿ ಕ್ರೀಡಾಂಗಣದ ಹೆಲಿಪ್ಯಾಡ್‌ ಗೆ ಬೆಳಿಗ್ಗೆ 11.20ಕ್ಕೆ ಬಂದಿಳಿಯಲಿದ್ದಾರೆ. ನಂತರ ನಗರದ ಪ್ರವಾಸಿ ಮಂದಿರದ ವೃತ್ತದಿಂದ ಎಸ್.ಡಿ.ಜಯರಾಂ ವೃತ್ತದವರೆಗೆ 1.5 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ.

ಮೋದಿ ಆಗಮನ ಹಿನ್ನೆಲೆಯಲ್ಲಿ ಮಂಡ್ಯ ನಗರದಿಂದ ಗೆಜ್ಜಲಗೆರೆ ಕಾಲೋನಿಯ ಬೃಹತ್ ವೇದಿಕೆವರೆಗೂ ಕೇಸರಿ ಬಾವುಟಗಳು, ಬಿಜೆಪಿ ಪಕ್ಷದ ಬಾವುಗಳು ಹಾರಾಡುತ್ತಿವೆ.

ನಗರದಲ್ಲಿ ನಾಲ್ಕು ಕಡೆ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ನಗರದ ಪ್ರವಾಸಿ ಮಂದಿರ ವೃತ್ತದಿಂದ ಪ್ರಾರಂಭವಾಗುವ ರೋಡ್ ಶೋ ಹಿನ್ನೆಲೆಯಲ್ಲಿ ವೃತ್ತದಲ್ಲಿಯೇ ಸರ್ ಎಂ.ವಿಶ್ವೇಶ್ವರಯ್ಯ ಮಹಾದ್ವಾರ ಎಂದು ಮೊದಲ ದ್ವಾರ ಹಾಕಲಾಗಿದೆ. ಇನ್ನುಳಿದಂತೆ ಜೆ.ಸಿ.ವೃತ್ತದಲ್ಲಿ ಕೆಂಪೇಗೌಡ ಮಹಾದ್ವಾರ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಗೂ ಮೈಷುಗರ್ ವೃತ್ತದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರಗಳನ್ನು ಅಳವಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಾಗುವ ರಸ್ತೆಯುದ್ದಕ್ಕೂ ಜನರನ್ನು ನಿಯಂತ್ರಿಸುವ ಹಾಗೂ ರಸ್ತೆಗೆ ಸಾರ್ವಜನಿಕರು ಬರದಂತೆ ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡ್‌ ಗಳ ನಿರ್ಮಾಣ ಮಾಡಲಾಗಿದೆ. ಹೆದ್ದಾರಿಯ ಎರಡು ಇಕ್ಕೆಲಗಳಲ್ಲಿ ಮರದ ಬ್ಯಾರಿಕೇಡ್‌ ಗಳನ್ನು ಅಳವಡಿಸಿ ಕ್ರಮ ವಹಿಸಲಾಗಿದೆ.

Advertisement

ಎಸ್‌ ಬಿಜಿ ತಂಡದಿಂದ ಪರಿಶೀಲನೆ: ಜಿಲ್ಲೆಗೆ ಆಗಮಿಸುವ ಪ್ರಧಾನಿಗೆ ಯಾವುದೇ ರೀತಿಯ ಭದ್ರತಾ ಲೋಪ ಆಗದಂತೆ ನೋಡಿಕೊಳ್ಳುವ ಹಿನ್ನೆಲೆ ವಿಶೇಷ ರಕ್ಷಣಾ ಪಡೆಯ ಅಧಿಕಾರಿಗಳು ಮಂಡ್ಯ ನಗರದಿಂದ ಗೆಜ್ಜಲಗೆರೆ ಕಾಲೋನಿಯ ವೇದಿಕೆಯವರೆಗೂ ಸಂಚರಿಸಿ ಭದ್ರತಾ ಪರಿಶೀಲನೆ ನಡೆಸಿದರು. ರಸ್ತೆಯುದ್ದಕ್ಕೂ ಎಲ್ಲೆಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದವರು ಪರಿಶೀಲನೆ ನಡೆಸಿ ಹೆದ್ದಾರಿಯನ್ನು ಸಂಪೂರ್ಣ ಎಸ್‌ಬಿಜಿ ಅವರ ವಶಕ್ಕೆ ಪಡೆದಿದ್ದಾರೆ.

ಭದ್ರತೆಗಾಗಿ ಮಂಡ್ಯ ಹಾಗೂ ವಿವಿಧ ಹೊರ ಜಿಲ್ಲೆಗಳಿಂದಲೂ 2500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೆದ್ದಾರಿಯುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅಲ್ಲದೆ, ಯಾವುದೇ ರೀತಿಯ ಡ್ರೋಣ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ. 5 ಮಂದಿ ಎಸ್ಪಿ, 17 ಮಂದಿ ಡಿವೈಎಸ್ಪಿ, ಪೊಲೀಸ್ ಇನ್ಸ್ಪೆಕ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ರಾತ್ರೋರಾತ್ರಿ ದ್ವಾರ ಬದಲಾವಣೆ: ನೆಲೆ ಇಲ್ಲದ ಮಂಡ್ಯದಲ್ಲಿ ಬಿಜೆಪಿ ಹಿಂದುತ್ವ ಅಜೆಂಡಾ ಮೂಲಕ ಬೇರೂರಲು ಪ್ರಯತ್ನಿಸುತ್ತಿರುವ ಕೇಸರಿಪಾಳೇಯ ಟಿಪ್ಪು ಕೊಂದರು ಎನ್ನಲಾದ ಉರಿಗೌಡ, ದೊಡ್ಡನಂಜೇಗೌಡ ಅವರ ಹೆಸರಿನಲ್ಲಿ ಮಹಾದ್ವಾರವನ್ನು ಮೈಷುಗರ್ ವೃತ್ತದಲ್ಲಿ ಅಳವಡಿಸಲಾಗಿತ್ತು.

ಇದರ ವಿರುದ್ಧ ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಐಟಿಯು ಸಂಘಟನೆಗಳು ವಿರೋಧಿಸಿದ್ದವು. ಅಲ್ಲದೆ, ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದವು. ಇದಕ್ಕೆ ಬೆದರಿದ ಬಿಜೆಪಿ ರಾತ್ರೋ ರಾತ್ರಿ ಉರಿಗೌಡ, ನಂಜೇಗೌಡ ಮಹಾದ್ವಾರ ತೆರವುಗೊಳಿಸಿ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next