ಸಂಗಂನೇರ್: ಚುನಾವಣೆಯಲ್ಲಿ ಬಿಜೆಪಿಯ ಜತೆ ನಾವು ಕೇಸರಿ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮೈತ್ರಿಯನ್ನು ಟೀಕಿಸುವವರು ಟೀಕಿಸುತ್ತಾ ಇರಲಿ, ಕೇಸರಿಯನ್ನು ಕೆಳಗೆ ಇಳಿಸಲು 56 ಪಕ್ಷಗಳು ಒಟ್ಟಾಗಿವೆ. 56 ಪಕ್ಷಗಳೂ ಒಂದಾಗಿ ಬಂದರೂ ಕೂಡ ಕೇಸರಿಯನ್ನು ಕೆಳಗೆ ಇಳಿಸಲು ಅಸಾಧ್ಯವೆಂದು ಮಹಾಮೈತ್ರಿ ಮೇಲೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ಧಾಳಿ ನಡೆಸಿದ್ದಾರೆ.
ಶಿರ್ಡಿ ಲೋಕಸಭೆ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ಸದಾಶಿವ್ ಲೋಖಂಡೆ ಅವರ ಪ್ರಚಾರ ಸಭೆ ಸಂಗಂನೇರ್‌ನಲ್ಲಿ ಆಯೋಜಿಸಲಾಯಿತು. ಈ ವೇಳೆ ಮಾತನಾಡಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಬಾಳ ಸಾಹೇಬ್ ಠಾಕ್ರೆ, ಗೋಪಿನಾಥ ಮುಂಢೆ, ಪ್ರಮೋದ್ ಮಹಾಜನ್ ಅವರಂಥ ದಿಗ್ಗಜ ನಾಯಕರು ತಮ್ಮ ಜೀವನವನ್ನು ಕೇಸರಿಗಾಗಿ ಮುಡಿಪಾಗಿ ಇರಿಸಿದ್ದರು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ನಿರ್ಮಿಸಲಾದ ಕಾಂಗ್ರೆಸ್, ಪ್ರಸಕ್ತ ಅದೇ ಕಾಂಗ್ರೆಸ್ ಆಗಿ ಉಳಿಯಲಿಲ್ಲ. ಪ್ರಸಕ್ತ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ದೇಶದ್ರೋಹ ನಿಯಮ ಮಾಡುವ ಭಾಷೆ ಆಡುತ್ತಿದೆ. ದೇಶದ್ರೋಹದ ನಿಯಮ ಮಾಡಲು ಇವರಿಗೆ ನಾಚಿಕೆ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಯನ್ನು ಉದ್ಧವ್ ಠಾಕ್ರೆ ಮಾಡಿದರು.
ಈ ಚುನಾವಣೆಯು ದೇಶದ ಚುನಾವಣೆ ಆಗಿದೆ. ನಾವು 370ರ ನಿಯಮ ತೆಗೆದು ಹಾಕಲಿದ್ದೇವೆ. ಪಾಕಿಸ್ಥಾನದ ಹೆದರಿಕೆ ನಮಗಿಲ್ಲ. ನಾವು ಪರಮಾಣು ವ್ಯವಸ್ಥೆಯನ್ನು ದೀಪಾವಳಿಗಾಗಿ ಇರಿಸಿಕೊಳ್ಳಲಿಲ್ಲ ಎಂದು ಹೇಳುವ ಮೋದಿ ಅವರು ದೇಶದ ಮೊದಲ ಪ್ರಧಾನಮಂತ್ರಿ ಆಗಿದ್ದಾರೆಂದು ಠಾಕ್ರೆ ಹೇಳಿದ್ದಾರೆ.
ಆದಿವಾಸಿಗರ ಮೀಸಲಾತಿಗೆ ಯಾವುದೇ ಸಮಸ್ಯೆನೀಡದೆ, ನಾವು ಇತರರಿಗೂ ಮೀಸಲಾತಿ ನೀಡಲಿದ್ದೇವೆ ಎಂಬ ಆಶ್ವಾಸನೆ ಪೂರ್ಣ ಗೊಳಿಸಲಿದ್ದೇವೆ. ನಾವು ಶರದ್ ಪವಾರ್ ಅವರಂತೆ ಕೇವಲ ಭರವಸೆ ನೀಡುವವರಲ್ಲ ಎಂದು ಶಿವಸೇನೆ ಮುಖ್ಯಸ್ಥ ಠಾಕ್ರೆ ಹೇಳಿದ್ದಾರೆ.
ಸರ್ಜಿಕಲ್ ದಾಳಿಯ ಮೇಲೆ ಸಂಶಯ ಪಡುವವರು, ನಮ್ಮ ದೇಶದ ಸೈನಿಕರ ಮೇಲೆ ವಿಶ್ವಾಸವಿಲ್ಲದವರು ಪ್ರಧಾನಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆಂದು ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಟೀಕೆ ಮಾಡಿದರು.