Advertisement

ಸಿಟಿ ಸ್ಮಾರ್ಟ್‌ ಜತೆಗೆ ಸೇಫ್ಟಿ ಅತಿ ಮುಖ್ಯ

06:12 PM Nov 21, 2017 | Team Udayavani |

ದಾವಣಗೆರೆ: ದಾವಣಗೆರೆ ಸ್ಮಾರ್ಟ್‌ ಜತೆಗೆ ಸೇಫ್ಟಿ ಸಿಟಿ ಆಗಿರುವಂತೆ ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ದಾವಣಗೆರೆ ಸ್ಮಾರ್ಟ್‌ಸಿಟಿ ಆಗುತ್ತಿರುವುದು ಸಂತೋಷದ ವಿಚಾರ. ಸ್ಮಾರ್ಟ್‌ಗಿಂತ ಸೇಫ್ಟಿ ಸಿಟಿ ಆಗುವುದು ಬಹಳ ಮುಖ್ಯ. ತಮ್ಮ ಗಮನಕ್ಕೆ ಬಂದಿರುವಂತೆ ದಾವಣಗೆರೆಯಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿವೆ. ಜನರಿಗೆ ಸೂಕ್ತ ರಕ್ಷಣೆ, ಕಾನೂನು, ಶಾಂತಿ ಸುವ್ಯವಸ್ಥೆ ವಾತಾವರಣಕ್ಕೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಉಜ್ಜೆಶ್‌ಗೆ ಸೂಚಿಸಿದರು.

ಪೊಲೀಸ್‌ ಠಾಣೆಗೆ ಬಂದವರಿಗೆ ಕುಳಿತುಕೊಳ್ಳುವಂತೆ ಹೇಳಿ, ಅವರು ಯಾವ ಕಾರಣಕ್ಕೆ ಠಾಣೆಗೆ ಬಂದಿದ್ದಾರೆ ಎಂಬುದ
ವಿಚಾರಿಸಿ, ದೂರು ಸ್ವೀಕರಿಸಿ, ಸಮಸ್ಯೆ ಬಗೆಹರಿಯುವ ಭರವಸೆ ನೀಡಿ ಕಳಿಸಿದರೆ ಸಾರ್ವಜನಿಕರಲ್ಲೂ ಪೊಲೀಸ್‌ರ ಬಗ್ಗೆ ನಂಬಿಕೆ, ವಿಶ್ವಾಸ ಬರುತ್ತದೆ. ಆದರೆ, ತಮ್ಮ ಗಮನಕ್ಕೆ ಬಂದಿರುವಂತೆ ಪೊಲೀಸ್‌ ಇಲಾಖೆ ಜನಸ್ನೇಹಿ ಆಗಿಲ್ಲ. ಬರೀ ಅಪರಾಧ ತಡೆ ಮಾಸಾಚರಣೆ ನಡೆಸಿದ ಮಾತ್ರಕ್ಕೆ ಅಪರಾಧ ತಡೆಗಟ್ಟಲು ಸಾಧ್ಯವಿಲ್ಲ. ಠಾಣೆಗೆ ಬಂದವರನ್ನು ಗೌರವದಿಂದ ಕಾಣುವಂತಾಗಬೇಕು. ಹಾಗಾಗಿ ಹಿರಿಯ ಅಧಿಕಾರಿಗಳು ಠಾಣಾ ಸಿಬ್ಬಂದಿಯ ಮನ ಪರಿವರ್ತನೆಗೆ ಹೆಚ್ಚಿನ ಗಮನ ನೀಡಬೇಕು ಸಲಹೆ ನೀಡಿದರು.

ಅನೇಕ ಕಾರಣದಿಂದ ವಿಚಾರಣಾಧೀನದಲ್ಲಿರುವ, ಶಿಕ್ಷೆಗೆ ಒಳಗಾಗಿರುವರಿಗೂ ಸಹ ಹಕ್ಕುಗಳು ಇವೆ. ನಮ್ಮಂತೆ ಸ್ವಾತಂತ್ರ್ಯ, ಸ್ವತ್ಛಂದವಾಗಿ ಓಡಾಡಲಿಕ್ಕೆ ಅವಕಾಶ ಇಲ್ಲದೇ ಇರುವುದ ಹೊರತುಪಡಿಸಿದರೆ ಎಲ್ಲರಂತೆ ಅವರಿಗೆ ಶುದ್ಧ ವಾತಾವರಣ, ಆಹಾರ, ನೀರು ಎಲ್ಲ ಸೌಲಭ್ಯ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ಅದು ಸಹ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತದೆ. 2-3 ವರ್ಷ ಶಿಕ್ಷೆಗೆ ಗುರಿಯಾದವರನ್ನು ದೂರದ ಊರುಗಳಲ್ಲಿ ಜೈಲಲ್ಲಿ ಇಡುವುದರಿಂದ ಅವರನ್ನು ಕಾಣಲಿಕ್ಕೆ ಪೋಷಕರು, ಸಂಬಂಧಿಕರಿಗೆ ತೊಂದರೆ ಆಗುವುದು. ಹಾಗಾಗಿ 5 ವರ್ಷದೊಳಗಿನ ಶಿಕ್ಷೆಗೆ ಒಳಗಾಗಿರುವರನ್ನು ಜಿಲ್ಲಾ ಕೇಂದ್ರದ ಜೈಲಲ್ಲಿ  ಇಡಲು ಅನುಕೂಲ ಆಗುವಂತೆ ರಾಜ್ಯದ ಎಲ್ಲ ಜೈಲುಗಳ ಮೇಲ್ದರ್ಜೆಗೆ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿಸಿದರು.

ಯಾವುದೇ ನಗರ ಅಭಿವೃದ್ಧಿ ಹೊಂದಬೇಕು ಎನ್ನುವುದು ನಿಜ. ಆದರೆ, ಅಭಿವೃದ್ಧಿ ಹೆಸರಲ್ಲಿ ಜನರ ಶೋಷಣೆ ಸಲ್ಲದು. ಕಾನೂನು ಪ್ರಕಾರ ರಸ್ತೆ ಅಗಲೀಕರಣ ಆಗಬೇಕು. ಅದೇ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿ ಹಲವಾರು ವರ್ಷದಿಂದ ಚಿಕ್ಕಪುಟ್ಟ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಅಭಿವೃದ್ಧಿ ಭರದಲ್ಲಿ ಅವರ ವ್ಯಾಪಾರಕ್ಕೆ ತೊಂದರೆ ಉಂಟು ಮಾಡಿದಲ್ಲಿ ರಾತ್ರೋರಾತ್ರಿ ಅವರು, ಅವಲಂಬಿತರ ಜೀವನವೇ ಬೀದಿಪಾಲಾಗುತ್ತದೆ. ಅಂತದ್ದು ತಪ್ಪಿಸುವ ನಿಟ್ಟಿನಲ್ಲಿ ಅವರ ಜೀವನಕ್ಕೆ ಪರ್ಯಾಯ ವ್ಯವಸ್ಥೆ, ಪುನರ್ವಸತಿ ಒದಗಿಸಬೇಕಾಗುತ್ತದೆ. ಕೆಲವಾರು ಪ್ರಕರಣಗಳಲ್ಲಿ ಕಾನೂನುಗಿಂತಲೂ ಮಾನವೀಯತೆ ಅತೀ ಮುಖ್ಯ ಎಂದು ತಿಳಿಸಿದರು. 

Advertisement

ದಾವಣಗೆರೆಯಲ್ಲಿನ ಮಂಡಕ್ಕಿ ಭಟ್ಟಿ ಪ್ರದೇಶ ಸ್ಥಳಾಂತರಿಸಲಾಗುವುದು, ಅತ್ಯಾಧುನಿಕ ಒಲೆ ಅಳವಡಿಸಲಾಗುವುದು ಎಂದೆಲ್ಲ ಆಯೋಗಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಈವರೆಗೆ ಅ ಬಗ್ಗೆ ಆಯೋಗಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ. ಆಯೋಗಕ್ಕೆ ವರದಿ ಸಲ್ಲಿಸುವ ಜೊತೆಗೆ ಸೂಕ್ತ ಪ್ರದೇಶದಕ್ಕೆ ಸ್ಥಳಾಂತರಿಸಬೇಕು ಎಂದು ಸಿ.ಜಿ. ಹುನಗುಂದ್‌ ಸೂಚಿಸಿದಾಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸ್ಥಿತಿ ತೀರಾ ಗಂಭೀರವಾಗಿಲ್ಲ. ಆದರೆ, ಆಸ್ಪತ್ರೆಗೆ ಅಗತ್ಯವಾಗಿ ಬೇಕಾದ ಎಂಆರ್‌ಐ, ಸಿಟಿಸ್ಕಾನ್‌, ಡಯಾಲಿಸಿಸ್‌ ಸೌಲಭ್ಯ ಒದಗಿಸಬೇಕು. ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ಅಂಗನವಾಡಿ, ಹಾಸ್ಟೆಲ್‌ಗ‌ಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ, ಸಾಧ್ಯವಾದಷ್ಟು ಸ್ವಂತ ಕಟ್ಟಡಕ್ಕೆ ಆದ್ಯತೆ, ಪ್ರಮುಖ ರಸ್ತೆಗಳಲ್ಲಿರುವ ಕೆರೆಗಳಿಗೆ ತಡೆಗೋಡೆ ನಿರ್ಮಾಣ, ಅತ್ಯಗತ್ಯವಾಗಿರುವ ಕಡೆ ರುದ್ರಭೂಮಿಗೆ ವ್ಯವಸ್ಥೆ,  ಅನೇಕ ಕಾರಣದಿಂದ ಶಾಲೆಯಿಂದ ಹೊರಗೆ ಉಳಿಯುವ, ಬಾಲ ಕಾರ್ಮಿಕರಾಗಿರುವ ಮಕ್ಕಳನ್ನ ಮತ್ತೆ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌, ಕೋಳಿಫಾರಂಗಳಲ್ಲಿ ಸ್ವಚ್ಛತೆಗೆ ಅಗತ್ಯ ಕ್ರಮ, ಘನ ತ್ಯಾಜ್ಯ ವಸ್ತು ನಿರ್ವಹಣಾ ಘಟಕಗಳ ಸುತ್ತಮುತ್ತಲಿನ 5 ಕಿಲೋ ಮೀಟರ್‌ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡದೇ ಇರುವುದು… ಒಳಗೊಂಡಂತೆ ಕೆಲವಾರು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿಗಳಾದ ಸಿದ್ದೇಶ್‌, ಭೂಬಾಲನ್‌, ನಗರಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸಕಾಲದಿಂದ ಕೆಲಸ ಆಗಲ್ಲ
ಸಕಾಲ… ಯೋಜನೆಯಡಿ ಸರ್ಕಾರದ 104 ಸೇವೆ ಒದಗಿಸಲಾಗುತ್ತದೆ. 104 ಸೇವೆಗಳು ಬೆರಳ ತುದಿಯಲ್ಲಿ ಲಭ್ಯ ಎಂದೆಲ್ಲಾ ಹೇಳಲಾಗುತ್ತದೆ. ಆದರೆ, ಸಕಾಲ ಯೋಜನೆಯಡಿ ಸಕಾಲಕ್ಕೆ ಕೆಲಸವೇ ಆಗುವುದಿಲ್ಲ. ಖುದ್ದು ಆಯೋಗವೇ ಅನೇಕ ಬಾರಿ ಪತ್ರ ಬರೆದರೂ ಕೆಲಸ ಆಗಿಲ್ಲ. ಸಿ ಮತ್ತು ಡಿ ಗ್ರೂಪ್‌ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮ ರಚಸಿಸುವಂತೆ ಆಯೋಗ ಪಟ್ಟು ಹಿಡಿದು ಹೇಳಿದರೂ ಆಗಿಲ್ಲ. 104 ಸೇವೆಗಳ ಪಟ್ಟಿ ಬೆರಳ ತುದಿಯಲ್ಲೇನೋ ಇವೆ. ಆದರೆ, ಕೆಲಸ ಆಗುವುದೇ ಇಲ್ಲ. ಸೇವೆಗಳ ಪಟ್ಟಿ ಬೆರಳ ತುದಿಯಲ್ಲೇ ಇವೆ ಅಂತ ಬೆರಳು ಕಚ್ಚಿ ಕೊಳ್ಳಲಿಕ್ಕಾಗುತ್ತದಾ… ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಖಾರವಾಗಿ ಪ್ರಶ್ನಿಸಿದರು.

1,281 ದೂರು ಇತ್ಯರ್ಥ
2007ರ ಜುಲೈನಿಂದ 2017ರ ಸೆ. 30ರ ವರೆಗೆ ಆಯೋಗಕ್ಕೆ ದಾವಣಗೆರೆ ಜಿಲ್ಲೆಯಿಂದ ಬಂದಿರುವ 1,387 ದೂರುಗಳಲ್ಲಿ 1,281 ದೂರು ಇತ್ಯರ್ಥಗೊಂಡಿವೆ. 106 ಬಾಕಿ ಇವೆ. ರಾಜ್ಯ ಮಟ್ಟದಲ್ಲಿ ಬಂದಿದ್ದ 70,779 ದೂರುಗಳಲ್ಲಿ 64,728 ದೂರುಗಳು ಇತ್ಯರ್ಥಗೊಂಡಿವೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ತಿಳಿಸಿದರು.

ಶಾಲಾ ಕೊಠಡಿಗಳ ದುಸ್ಥಿತಿ
ದಾವಣಗೆರೆ ಜಿಲ್ಲೆ ಒಳಗೊಂಡಂತೆ ಅನೇಕ ಜಿಲ್ಲೆಯಲ್ಲಿ 60 ಸಾವಿರದಷ್ಟು ಶಾಲೆಗಳ ಕೊಠಡಿಗಳು ತೀರಾ ದುಸ್ಥಿತಿಯಲ್ಲಿವೆ. ಸಂವಿಧಾನ ಬದ್ಧ ಹಕ್ಕಾದ ಶಿಕ್ಷಣ ಕಲ್ಪಿಸುವ ಸ್ಥಳಗಳೇ ದುಸ್ಥಿತಿಯಲ್ಲಿರುವುದು ಸರಿಯಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಕೊಠಡಿಗಳ ದುರಸ್ತಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ತುರ್ತು ಅಗತ್ಯತೆ ಇದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ದುರಸ್ತಿಯಲ್ಲಿರುವ ಶಾಲಾ-ಕಾಲೇಜುಗಳ ಕಟ್ಟಡಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಬೇಕು.
ಸಿ.ಜಿ.ಹುನಗುಂದ, ಸದಸ್ಯರು, ಮಾನವ ಹಕ್ಕುಗಳ ಆಯೋಗ.

Advertisement

Udayavani is now on Telegram. Click here to join our channel and stay updated with the latest news.

Next