Advertisement

ಸುರಕ್ಷತಾ ಕ್ರಮ ಪಾಲನೆ ಕಡ್ಡಾಯ: ಕ್ಯಾ|ರಾಜೇಂದ್ರ

03:48 PM Apr 20, 2020 | Suhan S |

ಬಾಗಲಕೋಟೆ: ಹಳೇ ಬಾಗಲಕೋಟೆ ನಗರ ವ್ಯಾಪ್ತಿಯ ವಾರ್ಡ್‌ ನಂ.7 ಮತ್ತು ವಾರ್ಡ್‌ 14ರ ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಲಿನ 200 ಮೀಟರ್‌ ವ್ಯಾಪ್ತಿ ಪ್ರದೇಶವ ನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಅಲ್ಲಿನ ನಿವಾಸಿಗಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಸೂಚಿಸಿದ್ದಾರೆ.

Advertisement

ಸರಕಾರದ ಆದೇಶದನ್ವಯ ವಾರ್ಡ್‌ ನಂ.7ರಲ್ಲಿ ವಾಸಿಸುವ ಓರ್ವ ವ್ಯಕ್ತಿಗೆ ಮೊದಲ ಬಾರಿಗೆ ಕೋವಿಡ್‌ ಪಾಜಿಟಿವ್‌ ಪ್ರಕರಣ ಕಂಡುಬಂದಿದ್ದು, ಈ ವ್ಯಕ್ತಿ, ವಾರ್ಡ್‌ ನಂ.14ರಲ್ಲಿ ದಿನಸಿ ಎಣ್ಣೆ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರು ವಾಸಿಸುವ ವಾರ್ಡ್‌ ನಂ.7ರ ಮನೆಯಿಂದ ಹಾಗೂ ವ್ಯಾಪಾರ ಮಾಡುತ್ತಿದ್ದ ವಾರ್ಡ್‌ ನಂ.14ರ ಅಂಗಡಿ ವರೆಗೆ 200 ಮೀಟರ್‌ ಪರಿ  ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಹಾಗೂ ಹೊರಗಿನ 5 ಕಿ.ಮೀ ವ್ಯಾಪ್ತಿಯನ್ನು ಬಫರ್‌ ಝೋನ್‌ ಎಂದು ಘೋಷಿಸಲಾಗಿದೆ. ನಿರ್ಬಂಧಿತ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಗಳು ಕಾಲ್ನಡಿಗೆ, ವಾಹನದ ಮೂಲಕ ಅಥವಾ ಇನ್ಯಾವುದೇ ರೀತಿಯಿಂದಒಳ ಮತ್ತು ಹೊರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಒಂದು ವೇಳೆ ಅವಶ್ಯವಿದ್ದಲ್ಲಿ ಮಾತ್ರ ನಿರ್ಗಮಿಸುವ ಪೂರ್ವದಲ್ಲಿ ಸ್ಯಾನಿಟೈಜೇಶನ್‌ ಮಾಡಿಕೊಂಡು ನಿರ್ಗಮಿಸಬೇಕು. ಮುಂದಿನ ಆದೇಶದವರೆಗೂ ಮನೆಯಲ್ಲಿಯೇ ಇದ್ದು, ಅರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆ ಪಾಲಿಸಬೇಕು. ಈ ಪ್ರದೇಶದಲ್ಲಿ ಶುಚಿತ್ವವನ್ನು ತಪ್ಪದೇ ಕಾಪಾಡಿಕೊಳ್ಳಬೇಕು ಎಂದುತಿಳಿಸಿದ್ದಾರೆ.

ನಿಷೇಧಿತ ಪ್ರದೇಶದಲ್ಲಿ ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಧಾರ್ಮಿಕ, ಉತ್ಸವ, ಉರುಸು, ಮದುವೆ, ಕ್ರೀಡೆ, ಸಂತೆ, ಜಾತ್ರೆ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ ಸಂಪೂರ್ಣ ನಿಷೇಧಿಸಲಾಗಿದೆ. ಈ ಪ್ರದೇಶದ ನಿವಾಸಿಗಳು ಮನೆಯ ಸದಸ್ಯರು ಹೊರಗಡೆ ತಿರುಗಾಡುವಂತಿಲ್ಲ. ಗೃಹ ಬಂಧನದಲ್ಲಿರಬೇಕು. ನಿವಾಸಿಗಳಿಗೆ ಅಗತ್ಯವಾಗಿ ಬೇಕಾದ ದಿನಸಿ, ಹಾಲು, ಹಣ್ಣು, ಔಷಧಿ, ಎಲ್‌ಪಿಜಿ ಗ್ಯಾಸ್‌ ಮತ್ತು ತರಕಾರಿಗಳ ಪೂರೈಕೆಯನ್ನು ವ್ಯವಸ್ಥಿತವಾಗಿ ಮನೆ ಮನೆಗಳಿಗೆ ತಲುಪಿಸಲಾಗುತ್ತದೆ. ಎಂದು ಹೇಳಿದ್ದಾರೆ.

ನಿರ್ಬಂಧಿತ ಪ್ರದೇಶದ ಹಾಗೂ ಬಫರ್‌ ಝೋನ್‌ 1 ಕಿಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರ ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಂಡಗಳನ್ನು ರಚಿಸಿ ಪ್ರತಿನಿತ್ಯ ನಿಗಾ ವಹಿಸಲು ಸೂಚಿಸಲಾಗಿದೆ.

5 ಕಿ.ಮೀ ವ್ಯಾಪ್ತಿಯ ಬಫರ್‌ ಝೋನ್‌ನ 5 ಕಿ.ಮೀ ವ್ಯಾಪ್ತಿಯ ಪ್ರದೇಶದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಗೆ ನೇಮಕಗೊಂಡ ಕೋವಿಡ್‌ ವಿಶೇಷ ಅಪರ ಜಿಲ್ಲಾ ಧಿಕಾರಿ ಬಿ.ಆರ್‌.ಸೋಮಣ್ಣವರ ಅವರಿಗೆ ಈ ನಿರ್ದೇಶನ-ಆದೇಶ ಕಾರ್ಯಗತಗೊಳಿಸಲು ನೇಮಿಸಲಾಗಿದ್ದು, ಈ ಕುರಿತು ಕಂದಾಯ, ಆರೋಗ್ಯ ಹಾಗೂ ಪೊಲೀಸ್‌ ಅಧಿಕಾರಿಗಳ ಸಹಯೋಗದೊಂದಿಗೆ ಎಲ್ಲ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

ನಿರ್ಬಂಧಿತ ಪ್ರದೇಶದಲ್ಲಿ ಸುರಕ್ಷತಾ ಕ್ರಮ: ಜಮಖಂಡಿ ನಗರದ ವಾರ್ಡ್‌ ನಂ.14, ಮುಧೋಳ ನಗರ ವ್ಯಾಪ್ತಿಯ ವಾರ್ಡ್‌ ನಂ.9 ಹಾಗೂ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸರ್ವೇ ನಂ.298, 299ರಲ್ಲಿ ವಾಸಿಸುವ ವ್ಯಕ್ತಿಗಳಿಗೆ ಕೊರೊನಾ ಪಾಜಿಟಿವ್‌ ಪ್ರಕರಣಗಳು ಕಂಡುಬಂದಿವೆ. ಈ ಪ್ರದೇಶಗಳಲ್ಲಿಯೂ ಸಹ ಕಂಟೈನ್‌ ಮೆಂಟ್‌ ಮತ್ತು ಬಫರ್‌ ಝೋನ್‌ಗಳೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿನ ನಿವಾಸಿಗಳಿಗೆ ಸೂಕ್ತ ಸುರಕ್ಷತಾ ವಿಧಾನಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಟಾಸ್ಕ್ಫೋರ್ಸ್‌ ರಚನೆ : ಮುಧೋಳ ನಗರ ವ್ಯಾಪ್ತಿಯಲ್ಲಿ ಕೋವಿಡ್‌ ಪ್ರಕರಣಗಳು ಕಂಡುಬಂದ ವ್ಯಕ್ತಿಯ ವಾರ್ಡ್‌ ನಂ.9ರ ಸ್ಥಳದಿಂದ 200 ಮೀಟರ್‌ ಪ್ರದೇಶ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಈಗಾಗಲೇ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಮುಧೋಳ ನಗರಸಭೆ ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ರಚಿಸಲಾಗಿದೆ.  –ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next