Advertisement

ಬಿಸಿಯೂಟ ಸಿಲಿಂಡರ್‌ಗೆ ಸೇಫ್ಟಿ ಡಿವೈಸ್‌

05:15 PM Sep 24, 2018 | |

ದೇವದುರ್ಗ: ತಾಲೂಕಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಕ್ಷರ ದಾಸೋಹ ಕಾರ್ಯಕ್ರಮದಡಿ ಎಲ್ಲ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಯುನಿವರ್ಸಲ್‌ ಗ್ಯಾಸ್‌ ಸೇಫ್ಟಿ ಡಿವೈಸ್‌ ಅಳವಡಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಬಿಲ್‌ ಪಾವತಿ ಕುರಿತು ಸ್ಪಷ್ಟ ನಿರ್ದೇಶನ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಪರ ಆಯುಕ್ತರ ಆದೇಶದ ಮೇರೆಗೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿ, ಹಾವೇರಿ ಮೂಲದ ಚಿಗುರು ಡೆವಲಪ್‌ಮೆಂಟ್‌ ಫೌಂಡೇಶನ್‌ ಮತ್ತು ಪ್ರಜ್ವಲ್‌ ಎಂಟರ್‌ಪ್ರೈಸಿಸ್‌ ವತಿಯಿಂದ ಬಿಸಿಯೂಟ ಅಡುಗೆ ಕೇಂದ್ರಗಳಲ್ಲಿ ಸಿಲಿಂಡರ್‌ಗಳಿಗೆ ಸೇಫ್ಟಿ  ರೆಗ್ಯುಲೇಟರ್‌ (ಯುನಿವರ್ಸಲ್‌ ಗ್ಯಾಸ್‌ ಸೇಫ್ಟಿ ಡಿವೈಸ್‌) ಅಳವಡಿಸಲು ಕ್ರಮ ವಹಿಸುವಂತೆ ಸೂಚಿಸಿದೆ. ಈ ಆದೇಶ ಅನುಸರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯಲ್ಲಿರುವ ಲಭ್ಯ ಅನುದಾನದಲ್ಲಿ ಗ್ಯಾಸ್‌ ಸೇಫ್ಟಿ ಡಿವೈಸ್‌ ಖರೀದಿ ಮಾಡತಕ್ಕದ್ದು ಎಂದು ಮುಖ್ಯ ಶಿಕ್ಷಕರಿಗೆ ಆದೇಶಿಸಿದ್ದಾರೆ.

ಆದರೆ ಶಾಲಾ ಹಂತದಲ್ಲಿ ಅನುದಾನವಿಲ್ಲದ್ದರಿಂದ ಮತ್ತು ಇದಕ್ಕೆ ಯಾವ ಅನುದಾನ ಬಳಸಬೇಕೆಂಬ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಬಿಲ್‌ ಪಾವತಿಸುವಲ್ಲಿ ಗೊಂದಲಕ್ಕೊಳಗಾಗಿದ್ದಾರೆ. 

ಬೆಲೆ ದುಪ್ಪಟ್ಟು: ಮಾರುಕಟ್ಟೆಯಲ್ಲಿ ಸುಮಾರು 1000 ರೂ.ದಿಂದ 1500 ರೂ.ಗೆ ಲಭ್ಯವಿರುವ ಯುನಿವರ್ಸಲ್‌ ಗ್ಯಾಸ್‌ ಸೇಫ್ಟಿ ಡಿವೈಸ್‌ನ್ನು ಶಾಲೆಗಳಿಗೆ ಸುಮಾರು 4 ಸಾವಿರ ರೂ.ಗೆ ಹಾವೇರಿ ಮೂಲದ ಚಿಗುರು ಡೆವಲಪ್‌ ಮೆಂಟ್‌ ಫೌಂಡೇಶನ್‌ ಮತ್ತು ಪ್ರಜ್ವಲ್‌ ಎಂಟರ್‌ಪ್ರೈಸಿಸ್‌ ಒದಗಿಸುತ್ತಿದೆ. ಇದರಲ್ಲಿ ಭಾರೀ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ತಾಲೂಕಿನ 25 ಕ್ಲಸ್ಟರ್‌ ವ್ಯಾಪ್ತಿಯ ಶಾಲೆಗಳಲ್ಲಿ ಈಗಾಗಲೇ ಸಿಲಿಂಡರ್‌ ಗೆ ಸೇಫ್ಟಿ ಡಿವೈಸ್‌ ಅಳವಡಿಸಲಾಗಿದೆ. ವಿತರಣೆ ಮಾಡಿದ ಏಜೆನ್ಸಿಯವರು ಪ್ರತಿ ಶಾಲೆಗೆ 3,999 ರೂ.ಗಳ ಬಿಲ್‌ ನೀಡಿ, ಚೆಕ್‌ ಮೂಲಕ ಹಣ ಪಾವತಿಸುವಂತೆ ಶಿಕ್ಷಕರಿಗೆ ಒತ್ತಡ ಹೇರುತ್ತಿದ್ದಾರೆ ಶಾಲೆಯಲ್ಲಿ ಅನುದಾನವಿಲ್ಲದಿರುವುದು ಮುಖ್ಯ ಶಿಕ್ಷಕರಿಗೆ ಸಮಸ್ಯೆಯಾಗಿದೆ.

ಬಹುತೇಕ ಶಾಲೆಗಳಲ್ಲಿ ಪ್ರತ್ಯೇಕ ಅನುದಾನ ಇಲ್ಲ. ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಅನುದಾನ ಬಳಸಿಕೊಳ್ಳಬೇಕೆಂಬ ಸೂಚನೆಯನ್ನೂ ಇಲಾಖೆ ನೀಡಿಲ್ಲ. ಹೀಗಾಗಿ ಸೇಫ್ಟಿ ರೆಗ್ಯುಲೇಟರ್‌ ಅಳವಡಿಸಿರುವ ಏಜೆನ್ಸಿಗೆ ಹಣ ಪಾವತಿ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಶಿಕ್ಷಕರು.

Advertisement

ಒಂದೆಡೆ ಶಾಲೆಯಲ್ಲಿ ಇಂಥ ಕೆಲಸಗಳಿಗೆ ಖರ್ಚು ಮಾಡಲು ಅನುದಾನವೇ ಇಲ್ಲ. ಲಭ್ಯ ಅಂದರೆ ಎಂಥ ಅನುದಾನ ಎಂಬುದೇ ಅರ್ಥವಾಗದಂತಾಗಿದೆ. ಏಜೆನ್ಸಿಯವರ ಒತ್ತಡ ಒಂದು ಕಡೆಯಾದರೆ, ಚೆಕ್‌ ನೀಡುವ ವ್ಯವಸ್ಥೆಯಾದರೂ ಹೇಗೆ? ಎಂಬುದು ಶಿಕ್ಷಕರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ನೇರವಾಗಿ ಈ ಹಣ ಖರ್ಚು ಮಾಡಲು ಅವಕಾಶವಿದೆ. ಶಾಲೆಗೆ ಬಿಡುಗಡೆಯಾಗಿರುವ ಅನುದಾನ ಬ್ಯಾಂಕ್‌ಗಳಲ್ಲಿ ಜಮೆಗೊಂಡಿದ್ದು, ಬರುತ್ತಿರುವ ವಾರ್ಷಿಕ ಬಡ್ಡಿ ಮೊತ್ತದಲ್ಲಿ ಈ ಖರ್ಚು ಮಾಡಲು ಅವಕಾಶವಿದೆ. ಆದರೆ ಇಲಾಖೆ ಪರೋಕ್ಷವಾಗಿ ಸಮ್ಮತಿ ಸೂಚಿಸುತ್ತಿಲ್ಲ ಎನ್ನಲಾಗಿದೆ.

ಕೂಡಲೇ ಕಲಬುರಗಿ ವಲಯದ ಅಧಿಕಾರಿಗಳು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು ಸ್ಪಷ್ಟತೆಯ ಆದೇಶ ನೀಡಬೇಕು ಅಥವಾ ಶಾಲೆಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು ಎಂದು ಬಿಸಿಯೂಟ ನೌಕರರ ಸಂಘಟನೆ ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ಸಿಲಿಂಡರ್‌ಗೆ ಅಳವಡಿಸಿದ ರೆಗ್ಯುಲೇಟರ್‌ ಹಣ ಪಾವತಿಸುವಂತೆ ಮೇಲಾಧಿಕಾರಿಗಳು ಯಾವುದೇ ಆದೇಶ ನೀಡಿಲ್ಲ. ಈಗಾಗಲೇ ಪ್ರತಿಯೊಂದು ಶಾಲೆಗೆ ಅಳವಡಿಸಿದ್ದು, ಗಮನಕ್ಕೆ ಬಂದಿದೆ. 
 ಬಂದೋಲಿ, ಅಕ್ಷರ ದಾಸೋಹ ಅಧಿಕಾರಿ

ಸಿಲಿಂಡರ್‌ ರೆಗ್ಯುಲೇಟರ್‌ ಅಳವಡಿಸಿದ ಹಣ ಪಾವತಿಸಲು ಯಾವ ಅನುದಾನ ಬಳಸಬೇಕು ಎಂದು ಸೂಚನೆ ನೀಡದೇ ಇರುವುದರಿಂದ ಗೊಂದಲವಾಗಿದೆ. ಚೆಕ್‌ ನೀಡುವಂತೆ ಕಂಪನಿಯವರು ದುಂಬಾಲು ಬಿದ್ದಿದ್ದಾರೆ.
 ಹೆಸರು ಹೇಳಲು ಇಚ್ಛಿಸದ ಮುಖ್ಯಶಿಕ್ಷಕ

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next