ಲಾಹೋರ್: “ನಾವು ಉಗ್ರರನ್ನು ಪೋಷಿಸುತ್ತಿಲ್ಲ, ಭಯೋತ್ಪಾದಕರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಂಡು ಬಂದಿರುವ ಪಾಕಿಸ್ಥಾನದ ನಿಜ ಬಣ್ಣ ಇದೀಗ ಬಯಲಾಗಿದೆ.
2008ರ ಮುಂಬಯಿ ದಾಳಿ ರೂವಾರಿ, ಉಗ್ರ ಸಂಘಟನೆ ಜಮಾತ್-ಉದ್-ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡುವಂತೆ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲ ಯವೊಂದು ಬುಧವಾರ ಆದೇಶಿಸಿದೆ. “ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬಂತೆ ಪಾಕ್ ಸರಕಾರವು ನ್ಯಾಯಾಲಯದಲ್ಲಿ ಅತ್ಯಂತ ದುರ್ಬಲವಾಗಿ ವಾದ ಮಂಡಿಸಿದ ಪರಿಣಾಮವಾಗಿ ಈಗ ಉಗ್ರ ಸಯೀದ್ ಗೃಹ ಬಂಧನದಿಂದ ಮುಕ್ತನಾಗು ವಂತಾಗಿದೆ.
ಜನವರಿಯಿಂದ ಉಗ್ರ ಸಯೀದ್ ಗೃಹ ಬಂಧನದಲ್ಲಿದ್ದು, ಬುಧವಾರದ ವಿಚಾರಣೆ ವೇಳೆ ಪಾಕ್ ಸರಕಾರವು, ಆತನ ಬಂಧನ ಅವಧಿಯನ್ನು 3 ತಿಂಗಳ ಕಾಲ ವಿಸ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಕೋರಿಕೊಂಡಿತು. ಅವನನ್ನು ಬಿಡುಗಡೆ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಕ್ಕೆ ಗುರಿಯಾಗಬೇಕಾದೀತು ಎಂಬ ಭೀತಿಯನ್ನೂ ಅದು ಕೋರ್ಟ್‌ನಲ್ಲಿ ವ್ಯಕ್ತಪಡಿಸಿತು. ಆದರೆ, ಈ ಎಲ್ಲ ಕೋರಿಕೆಯೂ ನಾಟಕೀಯವಾಗಿತ್ತು. ಏಕೆಂದರೆ, ಉಗ್ರ ಸಯೀದ್‌ನ ವಿರುದ್ಧ ಸರಕಾರವು ಯಾವುದೇ ಪ್ರಬಲ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಇಟ್ಟು ವಾದಿಸಲಿಲ್ಲ. ಮುಂಬಯಿ ದಾಳಿಯಲ್ಲಿ ಆತನ ಕೈವಾಡವಿರುವ ಕುರಿತು ಭಾರತ ಸರಕಾರ ನೀಡಿದ್ದ ಸಾಕ್ಷ್ಯವನ್ನಾಗಲೀ, ಎಫ್ಬಿಐ ತನಿಖೆಯ ವರದಿಯನ್ನಾಗಲೂ, ಉಗ್ರ ಡೇವಿಡ್ ಹೆಡ್ಲಿಯ ಹೇಳಿಕೆ ಕುರಿತ ಮಾಹಿತಿಯನ್ನಾಗಲೀ ಪಾಕಿಸ್ಥಾನವು ಕೋರ್ಟ್‌ಗೆ ಸಲ್ಲಿಸಲಿಲ್ಲ. ಇದರ ಪರಿಣಾಮವಾಗಿ, ಸರಕಾರದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಸಯೀದ್‌ನನ್ನು ಬಿಡುಗಡೆ ಮಾಡುವಂತೆ ಸೂಚಿಸಿತು.
ಅಂತಾರಾಷ್ಟ್ರೀಯ ಮಟ್ಟದ ಒತ್ತಡದ ನಡುವೆಯೂ ಪಾಕಿಸ್ಥಾನ ಸರಕಾರ ಮಂಡಿಸಿದ ವಾದವು ಅತ್ಯಂತ ದುರ್ಬಲವಾಗಿತ್ತು ಎಂಬುದನ್ನು ಸ್ವತಃ ಉಗ್ರ ಸಯೀದ್ ಪರ ವಕೀಲರಾದ ಎ.ಕೆ.ಡೋಗರ್ ಅವರೂ ಒಪ್ಪಿಕೊಂಡಿದ್ದಾರೆ.