ಲಾಹೋರ್: ಪಾಕಿಸ್ಥಾನದ ಮ್ಯಾಚ್ ವಿನ್ನಿಂಗ್ ಬೌಲರ್, ಮಿಸ್ಟರಿ ಸ್ಪಿನ್ನರ್ ಸಯೀದ್ ಅಜ್ಮಲ್ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.
ಪಾಕಿಸ್ಥಾನ ಕಂಡ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಸಯೀದ್ ಅಜ್ಮಲ್, ಬೌಲಿಂಗ್ ಆ್ಯಕ್ಷನ್ ವಿವಾದದಲ್ಲಿ ಸಿಲುಕಿದ ಬಳಿಕ ನೈಜ ಚಾರ್ಮ್ ಕಳೆದುಕೊಂಡಿದ್ದರು. 2014ರಲ್ಲಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಸುಳಿಗೆ ಸಿಲುಕಿದರು. ಬಳಿಕ ಪಾಕಿಸ್ಥಾನದ ಖ್ಯಾತ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮಾರ್ಗದರ್ಶನದಲ್ಲಿ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಂಡರೂ ಮೊದಲಿನಂತೆ ವಿಕೆಟ್ ಕೀಳಲು ಅವರಿಂದ ಸಾಧ್ಯವಾಗಲಿಲ್ಲ.
ಇತ್ತೀಚೆಗಷ್ಟೇ ಅವರು 41ಕ್ಕೆ ಕಾಲಿರಿಸಿದ್ದರು.35 ಟೆಸ್ಟ್‌ಗಳಿಂದ 178 ವಿಕೆಟ್, 113 ಏಕದಿನ ಪಂದ್ಯಗಳಿಂದ 184 ವಿಕೆಟ್ ಹಾಗೂ 64 ಟಿ20 ಪಂದ್ಯಗಳಿಂದ 85 ವಿಕೆಟ್ ಉರುಳಿಸಿದ್ದು ಸಯೀದ್ ಅಜ್ಮಲ್ ಸಾಧನೆ. 2014ರ ಆಗಸ್ಟ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದ ಅಜ್ಮಲ್, 2015ರ ಎಪ್ರಿಲ್‌ನಲ್ಲಿ ಕೊನೆಯ ಸಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ಭವಿಷ್ಯದಲ್ಲಿ ಬೌಲಿಂಗ್ ಕೋಚ್ ಆಗುವ ಅಭಿಲಾಷೆ ವ್ಯಕ್ತಪಡಿಸಿರುವ ಸಯೀದ್ ಅಜ್ಮಲ್, ಸದ್ಯ “ಇಸ್ಲಾಮಾಬಾದ್ ಯುನೈಟೆಡ್ ಕ್ಯಾಂಪ್’ನಲ್ಲಿ ಸ್ಪಿನ್ ಬೌಲಿಂಗ್ ತರಬೇತಿ ನೀಡುತ್ತಿದ್ದಾರೆ.
“ರಾವಲ್ಪಿಂಡಿಯಲ್ಲಿ ಈಗ ಸಾಗುತ್ತಿರುವ ರಾಷ್ಟ್ರೀಯ ಟಿ20 ಪಂದ್ಯಾವಳಿಯ ಬಳಿಕ ನಾನು ಕ್ರಿಕೆಟ್‌ನಿಂದ ದೂರ ಸರಿಯುತ್ತೇನೆ. ನಾನು ಯಾವುದೇ ತಂಡಕ್ಕೂ ಹೊರೆ ಆಗಬಾರದು. ದೇಶಿ ಕ್ರಿಕೆಟ್‌ನಲ್ಲಿ ನನ್ನ ಆಯ್ಕೆಯತ್ತ ಯಾರಾದರೂ ಬೆರಳು ಮಾಡುವ ಮೊದಲೇ ದೂರ ಸರಿಯುತ್ತಿದ್ದೇನೆ. ಇದು ನನ್ನ ಅಂತಿಮ ನಿರ್ಧಾರ’ ಎಂದು ಅಜ್ಮಲ್ ಹೇಳಿದರು.