Advertisement

ಹಿಂದೂ ಸಮಾಜೋತ್ಸವ ಮುಂದೂಡಿಕೆ: ವಿಟ್ಲಕ್ಕೆ ಆಗಮಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್

09:59 AM Mar 16, 2020 | keerthan |

ವಿಟ್ಲ: ಕೊರೊನಾ ಭೀತಿಯಿಂದ ಸರಕಾರ ಎಚ್ಚರಿಕೆಯ ಆದೇಶ ನೀಡಿರುವುದರಿಂದ ವಿಟ್ಲದಲ್ಲಿ ಮಾ.15ರಂದು ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಸ್ಥಗಿತಗೊಳಿಸಿ, ಮುಂದೂಡಲಾಯಿತು. ಆದರೆ ಸಮಾಜೋತ್ಸವಕ್ಕಾಗಿ ಆಗಮಿಸಿ, ಪುತ್ತೂರಿನಲ್ಲಿ ತಂಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ರವಿವಾರ ವಿಟ್ಲಕ್ಕೆ ಮಧ್ಯಾಹ್ನ ತಲುಪಿದರು.

Advertisement

ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ಅವರ ಮನೆಗೆ ತೆರಳಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶ, ಧರ್ಮ ನಮ್ಮದು. ಹಿಂದುತ್ವದ ಪರಂಪರೆಗನುಗುಣವಾಗಿ ಅವುಗಳ ರಕ್ಷಣೆ ನಮ್ಮದು. ಹಿಂದುತ್ವಕ್ಕಾಗಿ ಹಿಂದುತ್ವದ ಚೈತನ್ಯಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ಕೊರೊನಾ ಭೀತಿಯ ಕಾರಣಕ್ಕೆ ಸರಕಾರ ಸಾರ್ವಜನಿಕ ಕಾರ್ಯಕ್ರಮವನ್ನು ನಿಷೇಧಿಸಿದೆ. ಸಾಂಕ್ರಾಮಿಕ ರೋಗಕ್ಕೆ ಭಯಭೀತರಾಗುವ ಆವಶ್ಯಕತೆಯಿಲ್ಲ. ಬದಲಾಗಿ ಸಾವಧಾನವಾಗಿರಬೇಕು. ಆದುದರಿಂದ ಸಾಮಾಜಿಕ ಬದ್ಧತೆಯ ನಿಟ್ಟಿನಲ್ಲಿ, ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ, ಇಂದಿನ ಕಾರ್ಯಕ್ರಮ ಮುಂದೂಡಲಾಗಿದೆ. ಮತ್ತೆ ಇದು ವಿರಾಟ್ ಸ್ವರೂಪದಲ್ಲಿಯೇ ನಡೆಯಲಿದೆ ಎಂದು ಹೇಳಿದರು.

ನಾನು ಇಲ್ಲಿಗೆ ಆಗಮಿಸಿದಾಗ ತುಳಸಿ ಹಾರ ಹಾಕಿ ಸ್ವಾಗತಿಸಲಾಯಿತು. ತುಳಸಿಯ ಪರಿಮಳವನ್ನು ಆಘ್ರಾಣಿಸಿದಾಗ ನನಗೆ ನಿರೋಗಿಯ ಅನುಭವವಾಯಿತು. ನಮ್ಮ ದೇಶದಲ್ಲಿ ತುಳಸಿಯಿದೆ, ಗೋವಿದೆ, ಗಂಗಾಜಲವಿದೆ. ಇದು ನಮ್ಮನ್ನು ರೋಗರಹಿತರನ್ನಾಗಿಸುವ ಅಮೃತ ಔಷಧಗಳು ಎಂದು ಅವರು ಹೇಳಿದರು.

ಕೊರೊನಾ ರೋಗದಿಂದ ಮೃತಪಟ್ಟವರ ಆತ್ಮಸದ್ಗತಿಗಾಗಿ ಮತ್ತು ಅವರ ಕುಟುಂಬಕ್ಕೆ ದುಃಖ, ಕಷ್ಟ ಸಹಿಸುವ ಶಕ್ತಿ ಕೊಡಲಿ. ಈ ದುಃಖ, ಕಷ್ಟ ಇನ್ನಾರಿಗೂ ಬರದೇ ಇರಲಿ. ಇನ್ನಾವ ಜೀವವೂ ಕೊರೊನಾ ರೋಗಕ್ಕೆ ಬಲಿಯಾಗದಿರಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಟ್ಲ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ವಿಟ್ಲ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ, ಅಕ್ಷಯ್ ಆರ್ಯನ್ ರಾಥೋಡ್, ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಮತ್ತಿತರರು ಉಪಸ್ಥಿತರಿದ್ದರು.

Advertisement

ಬಳಿಕ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅವರನ್ನು ವೀಕ್ಷಿಸಲು ಬಂದಿದ್ದ ಅನೇಕ ಹಿಂದೂ ಬಾಂಧವರೊಡನೆ ಮಾತುಕತೆ ನಡೆಸಿ, ಅವರು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next