ಭೋಪಾಲ್ : ಮಧ್ಯ ಪ್ರದೇಶದ ಭೋಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಲಿರುವ ಸಾಧ್ವಿ ಪ್ರಜ್ಞಾ ಠಾಕೂರ್ ಅವರನ್ನು ಚುನಾವಣಾ ಆಯೋಗ ಸ್ಪರ್ಧಿಸದಂತೆ ತಡೆಯದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈಗಿರುವ ಕಾನೂನುಗಳಡಿ ಆಕೆ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಸ್ಪರ್ಧೆಗೆ ಯಾವುದೇ ಒಬ್ಬ ಪ್ರಜೆ 25 ವರ್ಷಕ್ಕೆ ಮೇಲ್ಪಟ್ಟಿರಬೇಕು ಮತ್ತು ಎರಡು ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಯಾಗುವ ಯಾವುದೇ ಅಪರಾಧ ಕೃತ್ಯಗಳಲ್ಲಿ ಆತ/ಆಕೆ ಭಾಗಿಯಾಗಿರಬಾರದು ಎಂದು ಹಾಲಿ ಕಾನೂನುಗಳು ಹೇಳುತ್ತವೆ.
ಸಾಧ್ವಿ ಪ್ರಜ್ಞಾ ಠಾಕೂರ್ ವಿರುದ್ಧ ಭಯೋತ್ಪಾದನೆಯ ಆರೋಪಗಳಿದ್ದು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜಕೀಯ ವಿಶ್ಲೇಷಕಿ ತೆಹಸೀನ್ ಪೂನಾವಾಲಾ ಅವರು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದರು.
ಪ್ರಜ್ಞಾ ಠಾಕೂರ್ ಅವರು ಈ ವಾರದ ಆದಿಯಲ್ಲಿ ಬಿಜೆಪಿ ಸೇರಿದ್ದರು ಮತ್ತು ಆಕೆಯನ್ನು ಪಕ್ಷವು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತನ್ನ ಅಭ್ಯರ್ಥಿ ಎಂದು ಕಳೆದ ಬುಧವಾರ ಪ್ರಕಟಿಸಿತ್ತು. ಸಾಧ್ವಿ ಅವರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ದ ಭೋಪಾಲ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.