ಹಾಸ್ಯ ನಟ ಕಮ್ ಸಂಗೀತ ನಿರ್ದೇಶಕ ಸಾಧುಕೋಕಿಲ ಸೊಗಸಾಗಿ ಹಾಡ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. “ಎದೆಗಾರಿಕೆ’ ಚಿತ್ರದ ಬಳಿಕ ಸಾಧು ಹಾಡಿದ್ದು ಕಮ್ಮಿ. ಈಗ ಬಿಡುಗಡೆಗೆ ರೆಡಿಯಾಗಿರುವ “ಪ್ರೀತಿಯ ರಾಯಭಾರಿ’ ಚಿತ್ರದಲ್ಲೊಂದು ಮೆಲೋಡಿ ಹಾಡನ್ನು ಹಾಡಿದ್ದಾರೆ. ಅಷ್ಟೇ ಅಲ್ಲ, ಈಗ ಆ ಹಾಡು ಒಳ್ಳೆಯ ಮೆಚ್ಚುಗೆಯನ್ನೂ ಪಡೆಯುತ್ತಿದೆ. ಗೀತರಚನೆಕಾರ ಜಯಂತ್ ಕಾಯ್ಕಿಣಿ ಅವರು ಬರೆದಿರುವ “ದೂರ ದೂರನೇ…’ ಹಾಡಿಗೆ ದನಿಯಾಗಿರುವ ಸಾಧುಕೋಕಿಲ, ಚಿತ್ರದಲ್ಲಿ ವಿಶೇಷ ಪಾತ್ರಧಾರಿಯೂ ಹೌದು.
ಸಾಮಾನ್ಯವಾಗಿ ಸಾಧುಕೋಕಿಲ ತಮ್ಮ ಸಂಗೀತ ನಿರ್ದೇಶನದ ಚಿತ್ರಗಳಿಗೆ ಧ್ವನಿಯಾಗುವುದುಂಟು. ಆದರೆ, ಅರ್ಜುನ್ ಜನ್ಯಾ ಸಂಗೀತ ನೀಡಿರುವ ಈ ಚಿತ್ರದ ಹಾಡೊಂದಕ್ಕೆ ಸಾಧುಕೋಕಿಲ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತೆ ಎಂಬ ಲೆಕ್ಕಾಚಾರ ಮಾಡಿದ ನಿರ್ದೇಶಕ ಮುತ್ತು, ಸಾಧು ಕೋಕಿಲ ಬಳಿ ಹೋಗಿ, ಹಾಡುವಂತೆ ಕೋರಿಕೆ ಇಟ್ಟು, ಹಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಸಾಧು ಧ್ವನಿಯಲ್ಲಿ ಮೂಡಿಬಂದಿರುವ ಹಾಡು ಕೂಡ ಯಶಸ್ವಿಯಾಗಿದೆ.
ಉಳಿದಂತೆ ಚಂದನ್‌ಶೆಟ್ಟಿ ಬರೆದು ಹಾಡಿರುವ “ಸಮ್‌ಬಡಿ ಸೇ ವೇರ್ ಈಸ್ ಮೈ ಗರ್ಲ್..’ ಎಂಬ ಹಾಡಿಗೂ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ ಎಂಬುದು ಮುತ್ತು ಮಾತು. “ಪ್ರೀತಿಯ ರಾಯಭಾರಿ’ ಇದೊಂದು ನೈಜ ಘಟನೆಯ ಚಿತ್ರ. ಅದರಲ್ಲೂ, ನಂದಿಬೆಟ್ಟದಲ್ಲಿ ನಡೆದಂತಹ ಘಟನೆ ಇಟ್ಟುಕೊಂಡು ಹೆಣೆದ ಕಥೆಯನ್ನು ತೆರೆಯ ಮೇಲೆ ಅನಾವರಣಗೊಳಿಸಿದ್ದಾರೆ ಮುತ್ತು. ಈ ಚಿತ್ರದ ಮೂಲಕ ಮುತ್ತು ನಿರ್ದೇಶಕರಾದರೆ, ನಕುಲ್ ಹೀರೋ ಆಗುತ್ತಿದ್ದಾರೆ.
ವೆಂಕಟೇಶ್ ಗೌಡ ಅವರೂ ನಿರ್ಮಾಪಕರಾಗಿದ್ದಾರೆ. ಉಳಿದಂತೆ ಈ ಚಿತ್ರಕ್ಕೆ ಸುಕೃತಾ ದೇಶಪಾಂಡೆ ನಾಯಕಿಯಾಗಿದ್ದಾರೆ. ಸುಚೇಂದ್ರಪ್ರಸಾದ್, ಪದ್ಮಜಾರಾವ್, ಮುನಿ, ವಾಣಿಶ್ರೀ ಇತರರು ಚಿತ್ರದಲ್ಲಿ ನಟಿಸಿದ್ದಾರೆ. “ಪ್ರೀತಿಯ ರಾಯಭಾರಿ’ ಚಿತ್ರದಲ್ಲೊಂದು ವಿಶೇಷವಿದೆ. ಅದು “ಕತ್ತೆ ಹೊಳೆ’ ಎಂಬ ಊರು. ಅಲ್ಲೇನು ವಿಶೇಷ ಎಂಬ ಪ್ರಶ್ನೆ ಎದುರಾಗಬಹುದು.
ಚಿತ್ರ ನೋಡಿದರೆ, ಆ ಊರಿನ ವಿಶೇಷತೆ ಗೊತ್ತಾಗುತ್ತೆ ಎನ್ನುವ ಮುತ್ತು, ಸರ್ಕಾರದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ವಂಚಿತಗೊಂಡಿರುವ ಹಳ್ಳಿಯಲ್ಲಿ “ಪ್ರೀತಿಯ ರಾಯಭಾರಿ’ ಸಂಪೂರ್ಣ ಚಿತ್ರೀಕರಣಗೊಂಡಿದೆ. ಹಿರಿಯೂರು ಸಮೀಪವಿರುವ ಈ ಊರಲ್ಲಿ, ಜನರೇ ಎಲ್ಲ ಸವಲತ್ತುಗಳನ್ನು ರೂಪಿಸಿಕೊಂಡಿದ್ದಾರೆ. ಆ ಊರಲ್ಲಿ ನಡೆಯೋ ಒಂದು ಪ್ರೇಮಕಥೆ ಚಿತ್ರದ ಹೈಲೈಟ್.
ಈಗಾಗಲೇ ಹಿಂದಿ ಡಬ್ಬಿಂಗ್ ಹಕ್ಕು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದ್ದು, ತೆಲುಗಿಗೆ ರಿಮೇಕ್ ಹಕ್ಕು ಕೇಳುತ್ತಿದ್ದಾರೆ. ಆದರೆ, ತೆಲುಗಿನಲ್ಲೂ ನಾವೇ ನಿರ್ಮಾಣ ಮಾಡೋಣ ಎಂಬುದು ನಿರ್ಮಾಪಕರ ಮಾತು. ಸದ್ಯಕ್ಕೆ ಆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಷ್ಟೇ ಹೇಳುತ್ತಾರೆ ನಿರ್ದೇಶಕ ಮುತ್ತು. ಅಂದಹಾಗೆ, ಮಾರ್ಚ್ 2 ರಂದು ರಾಜ್ಯಾದ್ಯಂತ ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.