ಮಡಿಕೇರಿ: ನಗರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿಯ ಕುರಿತು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಇದೊಂದು ಚುನಾವಣಾ ಗಿಮಿಕ್ ಎಂದು ಕೊಡಗು ಜಿಲ್ಲಾ ಬಿಜೆಪಿ ಟೀಕಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ತನ್ನದೆಂದು ಹೇಳಿಕೊಳ್ಳುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಆರೋಪಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಅಭಿವೃದ್ಧಿಗೆ 2087 ಕೋಟಿ ರೂ. ಅನುದಾನವನ್ನು ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಜಿಲ್ಲೆಯ ಕನಿಷ್ಠ ಒಂದೇ ಒಂದು ರಸ್ತೆಯನ್ನು ಕೂಡ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರಕ್ಕೆ ಆಗಿಲ್ಲವೆಂದು ಟೀಕಿಸಿದರು. ಜಿಲ್ಲಾ ಪಂಚಾಯತ್ ಭವನ, ನೂತನ ಖಾಸಗಿ ಬಸ್ ನಿಲ್ದಾಣಗಳೆಲ್ಲವೂ ಬಿಜೆಪಿ ಸರಕಾರವಿದ್ದಾಗ ಮಂಜೂರಾದ ಯೋಜನೆಗಳಾಗಿವೆ. ಇಂದಿನ ರಾಜ್ಯ ಸರಕಾರದ ಸಾಧನೆ ಕೊಡಗಿನ ಮಟ್ಟಿಗೆ ಶೂನ್ಯವೆಂದು ಅಭಿಪ್ರಾಯಪಟ್ಟ ರವಿಕುಶಾಲಪ್ಪ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಿದ್ದು, ಯಾವುದೇ ರೈತರ ಖಾತೆಗೆ ಅಥವಾ ಸಹಕಾರ ಸಂಘಕ್ಕೆ ಮನ್ನಾಗೊಂಡ ಅನುದಾನ ಬಿಡುಗಡೆಯಾಗಿಲ್ಲವೆಂದು ರವಿಕುಶಾಲಪ್ಪ ಆರೋಪಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡದೆ, ಆರ್‌ಎಸ್‌ಎಸ್‌ನ್ನು ಉಗ್ರಗಾಮಿ ಸಂಘಟನೆಯೆಂದು ಆರೋಪಿಸಿದ್ದಾರೆ, ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ಪಾತ್ರವಿದೆಯೆಂದು ರಾಷ್ಟ್ರೀಯ ತನಿಖಾ ದಳ ಮಾಹಿತಿ ನೀಡಿದ್ದರೂ ಈ ಸಂಘಟನೆಗಳನ್ನು ರಕ್ಷಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಅಲ್ಪಸಂಖ್ಯಾಕರ ತುಷ್ಟೀಕರಣದಲ್ಲಿ ತೊಡಗಿರುವ ಕಾಂಗ್ರೆಸ್ ಸರಕಾರ ಆರ್‌ಎಸ್‌ಎಸ್, ಹಿಂದೂ ಜಾಗರಣಾ ವೇದಿಕೆ ಮತ್ತು ಬಜರಂಗದಳವನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು. ಆರ್‌ಎಸ್‌ಎಸ್‌ನ ಶ್ರಮದಿಂದ ಇಂದು ದೇಶ ಉಳಿದಿದೆಯೆಂದು ರಾಬಿನ್ ದೇವಯ್ಯ ಅವರು ಅಭಿಪ್ರಾಯಪಟ್ಟರು.
ಮತ್ತೂಬ್ಬ ಪ್ರಧಾನ ಕಾರ್ಯದರ್ಶಿ ನಾಪಂಡ ರವಿಕಾಳಪ್ಪ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಕೋಮು ಪ್ರಚೋದನೆಯನ್ನು ನೀಡುವ ಭಾಷಣವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಟಿಪ್ಪು ಜಯಂತಿಯ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಮಾಡಿರುವ ಅನ್ಯಾಯದ ಬಗ್ಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ಸಿಗರು ಬರಲಿ ಎಂದರು.
ಮುಖ್ಯಮಂತ್ರಿಗಳು ಆಗಮಿಸುತ್ತಾರೆಂದು ಕೇವಲ ಎರಡು ದಿನಗಳಲ್ಲಿ ನಗರದ ರಸ್ತೆಗಳನ್ನು ದುರಸ್ತಿ ಪಡಿಸಲಾಗಿದೆ. ಆದರೆ, ಜನರಿಗಾಗಿ ಇಲ್ಲಿಯವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಯಾವುದೇ ಕಾಳಜಿಯನ್ನು ತೋರಿಲ್ಲ. ಗ್ರಾಮಿಣ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಅಭಿವೃದ್ಧಿಗೆ 2,087 ಕೋಟಿ ರೂ. ಅನುದಾನ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸಿಗರು ನಾವು ಕೂಡ ಹಿಂದೂಗಳು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವೆಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಸ್.ಸಿ. ಸತೀಶ್, ಸಾಮಾಜಿಕ ಜಾಲ ತಾಣ ಪ್ರಕೋಷ್ಠ ಸಂಚಾಲಕ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.