Advertisement

ಈ ಅಂಗನವಾಡಿ ಊಟಕ್ಕುಂಟು ಪಾಠಕ್ಕಿಲ್ಲ !

03:45 PM Dec 13, 2018 | |

ಬಂಕಾಪುರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಡಳಿತ ವರ್ಗ ವಿಫಲವಾಗುತ್ತಿದೆ ಎನ್ನುವುದಕ್ಕೆ ಇಲ್ಲಿನ ಸದಾಶಿವ ಪೇಟೆಯ ಅಂಗನವಾಡಿ ಕೇಂದ್ರವೇ ಸಾಕ್ಷಿಯಾಗಿದೆ.

Advertisement

ಸಾವಿರಕ್ಕಿಂತ ಅಧಿ ಕ ಜನಸಂಖ್ಯೆ ಹೊಂದಿರುವ ಸದಾಶಿವಪೇಟೆ ಗ್ರಾಮದಲ್ಲಿ ಕೇವಲ ಒಂದೇ ಒಂದು ಅಂಗನವಾಡಿ ಕೇಂದ್ರವಿದ್ದು, ದಾಖಲಾತಿ ಪ್ರಕಾರ ಒಟ್ಟು 38 ಮಕ್ಕಳು ಈ ಕೇಂದ್ರದಲ್ಲಿರುವರು ಎಂದಿದೆ. ಸಣ್ಣ ಕೊಠಡಿಯಲ್ಲಿ ಅಷ್ಟು ಮಕ್ಕಳನ್ನು ಕೂರಿಸುವುದು ಕಷ್ಟಸಾಧ್ಯ. ಮಕ್ಕಳ ದಾಖಲಾತಿಗನುಗುಣವಾಗಿ ಗ್ರಾಮದಲ್ಲಿ ಇನ್ನೊಂದು ಅಂಗನವಾಡಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಯಾವ ಸ್ಪಂದನೆಯೂ ಈ ವರೆಗೆ ಸಿಕ್ಕಿಲ್ಲ ಎನ್ನುವುದು ಗ್ರಾಮಸ್ಥರು ಅಳಲು. 

ಇರುವ ಒಂದು ಅಂಗನವಾಡಿಯನ್ನೂ ಸರಿಯಾಗಿ ನಡೆಸದೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು ನಾಲ್ಕು ತಿಂಗಳಿಂದ ಶಿಕ್ಷಕಿಯೇ ಇಲ್ಲ. ಪರಿಣಾಮ ಮಕ್ಕಳಿಗೆ ಪ್ರಾಥಮಿಕವಾಗಿ ಸಿಗಬೇಕಿದ್ದ ಶಿಕ್ಷಣ ಸಿಗದಂತಾಗಿದೆ. ಯಾವ ಮಗು ಸಹ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರಗಳು ಘೋಷಣೆ ಕೂಗುತ್ತಿದ್ದರೆ ಅಧಿಕಾರಿಗಳು ಮಾತ್ರ ಶಿಕ್ಷಕರನ್ನು ನೇಮಿಸದೇ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿರುವುದು ವಿಪರ್ಯಾಸ.

ಸದ್ಯ ಈ ಅಂಗನವಾಡಿ ಕೇಂದ್ರವನ್ನು ಸಹಾಯಕಿ ನಡೆಸಿಕೊಂಡು ಹೋಗುತ್ತಿದ್ದು, ಬರುವ ಮಕ್ಕಳಿಗೆ ಅಷ್ಟಿಷ್ಟೋ ಊಟ ಕೊಟ್ಟು ಕಳುಹಿಸುವ ಮೂಲಕ ಅಂಗನವಾಡಿ ಕೇಂದ್ರ ‘ಊಟಕ್ಕೂಂಟು ಪಾಠಕ್ಕಿಲ್ಲ’ ಎನ್ನುವಂತಾಗಿದೆ. ಈ ಹಿಂದೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಈರಮ್ಮ ಶೆಟ್ಟರ ಗ್ರಾಮದಲ್ಲಿ ಎರಡು ಬಣಗಳ ಪ್ರತಿಷ್ಠೆಯ ತಿಕ್ಕಾಟದಿಂದಾಗಿ ಕರ್ತವ್ಯ ಚ್ಯುತಿ ಆಧಾರದ ಮೇಲೆ ಅಮಾನತುಗೊಂಡರು. ತದನಂತರ ಯಾವುದೇ ಶಿಕ್ಷಕಿಯೂ ನೇಮಕವಾಗಿಲ್ಲ. ಇನ್ನು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ನೀಡಬೇಕಾಗಿದ್ದ ಪೌಷ್ಟಿಕ ಊಟ, ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆ ವಿತರಣೆ ಸ್ಥಗಿತಗೊಂಡಿದೆ.

ಶಿಕ್ಷಕಿ ಅಮಾನತುಗೊಂಡ ನಂತರ ಮಕ್ಕಳು ಬರುವುದು ಕಡಿಮೆಯಾಗಿದ್ದು, ಅಂಗನವಾಡಿ ಕೇಂದ್ರದಲ್ಲಿ ಉಳಿದಿರುವ ಏಳು ಕ್ವಿಂಟಲ್‌ನಷ್ಟು ಆಹಾರ ಧಾನ್ಯ ಹುಳ ಹುಪ್ಪಡಿ, ಇಲಿಗಳ ಪಾಲಾಗುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಅಂಗನವಾಡಿ ಕಸದ ತೊಟ್ಟಿಯಂತಾಗುತ್ತಿರುವುದು ಬೇಸರದ ಸಂಗತಿ.

Advertisement

ಅಧಿಕ ಮಕ್ಕಳ ಸಂಖ್ಯೆಯನ್ನು ಹೊಂದಿದ ಈ ಅಂಗನವಾಡಿ ಕೇಂದ್ರವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಆಯಾ ಮಂಜುಳಾ ದೈವಜ್ಞರ ಮೇಲಿದೆ. ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆ ವರೆಗೆ ತೆರೆಯಬೇಕಾಗಿದ್ದ ಅಂಗನವಾಡಿ ಕೇಂದ್ರ, ಮಧ್ಯಾಹ್ನಕ್ಕೆ ಮೊಟಕುಗೊಳಿಸಲಾಗುತ್ತಿದೆ. ತಾತ್ಕಾಲಿಕವಾಗಿ ನಿಯಮಿಸಿರುವ ನಾರಾಯಣಪುರ ಅಂಗನವಾಡಿ ಶಿಕ್ಷಕಿ ರೇಣುಕಾ ಹಿಂಡಿ ಎನ್ನುವವರು ವಾರದಲ್ಲಿ ಒಂದು ಬಾರಿ ಬಂದು ಹೋಗುತ್ತಿದ್ದಾರೆ. ವಾರಕ್ಕೊಮ್ಮೆ ಶಿಕ್ಷಕಿ ಬಂದು ಹೋದರೆ ಮಕ್ಕಳಿಗೆ ಎಂಥ ಪಾಠ ಮಾಡಬಹುದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ನಮ್ಮ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಶಿಕ್ಷಕಿಯನ್ನು ನೇಮಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಮಕ್ಕಳ ಸಂಖ್ಯೆಗನುಗುಣವಾಗಿ ಇನ್ನೊಂದು ಅಂಗನವಾಡಿ ತೆರಯಬೇಕು ಎನ್ನುವುದು ಗ್ರಾಮಸ್ಥರು ಒತ್ತಾಯವಾಗಿದೆ.

ಸಂಪರ್ಕಕ್ಕೆ ಸಿಗದ ಸಿಡಿಪಿಒ
ಸದಾಶಿವಪೇಟೆ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿ ನೇಮಿಸುವ ಕುರಿತು ಮಾಹಿತಿ ಪಡೆಯಲು ಸಿಡಿಪಿಒ ಪರಶುರಾಮ ಗಾಜಿ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಇನ್ನೂ ಕಚೇರಿಗೆ ಹೋದರೂ ಸಿಡಿಪಿಒ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಗ್ರಾಮದಲ್ಲಿ 500 ಜನಸಂಖ್ಯೆಗೆ ಒಂದರಂತೆ ಅಂಗನವಾಡಿ ಕೇಂದ್ರ ತೆರೆಯಬೇಕು ಎನ್ನುವ ನಿಯಮವಿದೆ. ಸದಾಶಿವಪೇಟೆಯಲ್ಲಿ ಒಂದು ಸಾವಿರ ಜನಸಂಖ್ಯೆ ಇದೆ. ಹೀಗಾಗಿ ಹೆಚ್ಚು ಮಕ್ಕಳು ಇರುವ ಕಾರಣ ಮತ್ತೊಂದು ಅಂಗನವಾಡಿ ಕೇಂದ್ರ ತೆರೆಯಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ವಿಜಯಲಕ್ಷ್ಮೀ  ಅಳ್ಳಿಗಿಡದ,
ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ

„ಸದಾಶಿವ ಹಿರೇಮಠ 

Advertisement

Udayavani is now on Telegram. Click here to join our channel and stay updated with the latest news.

Next