ಎಸ್.ಎಸ್. ಪುತ್ರನ್ ನಿರ್ಮಾಣದ 1986ರಲ್ಲಿ ಚಿತ್ರೀಕರಣವಾದ ‘ಪೆಟ್ಟಾಯಿ ಪಿಲಿ’ ಹಿಂದಿ ಭಾಷೆಯ ಕಥೆಯಾಧಾರಿತ ತುಳು ಚಿತ್ರ. ಈ ಸಿನೆಮಾದಲ್ಲಿ ಸದಾಶಿವ ಸಾಲ್ಯಾನ್ ಅವರು ಮುಖ್ಯ ತಾರಾಗಣದಲ್ಲಿ ಮಿಂಚಿದ ಕಲಾವಿದ. ‘ಪೆಟ್ಟಾಯಿ ಪಿಲಿ’ ಎಂಬ ಹೆಸರಿನಿಂದಲೇ ಜನಜನಿತವಾದ ಸದಾಶಿವ ಸಾಲ್ಯಾನ್ ಅವರು ‘ಇನ್ನಿಲ್ಲ’ ಎಂಬುದೇ ತುಳುಚಿತ್ರರಂಗಕ್ಕೆ ಎದುರಾದ ಬಹುದೊಡ್ಡ ಆಘಾತ.
ಮುಂಬಯಿ ರಂಗಭೂಮಿಯಲ್ಲಿ ಬೆಳೆದು ಆನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಕಲಾವಿದ ಸದಾಶಿವ ಸಾಲ್ಯಾನ್ (68) ಅವರು ದೀರ್ಘ ಕಾಲದ ಅನಾರೋಗ್ಯದಿಂದ ಜು. 8ರಂದು ಮೀರಾರೋಡ್‌ನಲ್ಲಿ ನಿಧನ ಹೊಂದಿದರು. ಮೂಲತಃ ಉಡುಪಿ ತೆಂಕ ಎರ್ಮಾಳ್‌ನ ಹೊಸಬೆಟ್ಟು ಪಾದೆಮನೆಯವರಾದ ಸದಾಶಿವ ಸಾಲ್ಯಾನ್ ಬಳಿಕ ಅಂಧೇರಿಯ ಚಿನ್ಮಯ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಅನಂತರ ಸೆಂಟ್ರಲ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡ ಅವರು, ತುಳು, ಹಿಂದಿ, ಮರಾಠಿ ಸೇರಿ ಇನ್ನಿತರ ಭಾಷೆಗಳ ಸುಮಾರು 500ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿದ್ದರು.
ರಂಗಕರ್ಮಿ ಕೆ. ಎನ್. ಟೈಲರ್ ಮೂಲಕ ತುಳು ಸಿನೆಮಾ ರಂಗದ ನಂಟು ಬೆಳೆಸಿಕೊಂಡರು. ಅವರ ‘ಕಂಡನೆ ಬುಡೆದಿ’ ನಾಟಕದಲ್ಲಿ ಮೊದಲಿಗೆ ಸದಾಶಿವ ಸಾಲ್ಯಾನ್ ಅವರಿಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಇದೇ ಕಥೆಯನ್ನು ಟಿ.ಎ. ಶ್ರೀನಿವಾಸ್ ನಿರ್ಮಾಣದ ಆರೂರು ಪಟ್ಟಾಭಿ ನಿರ್ದೇಶನದ 1981ರಲ್ಲಿ ತೆರೆಕಂಡ ‘ಭಾಗ್ಯವಂತೆದಿ’ ಸಿನೆಮಾದಲ್ಲಿ ಸದಾಶಿವ ಸಾಲ್ಯಾನ್ ಅವರು ಮೊದಲ ಬಾರಿಗೆ ತುಳು ಸಿನೆಮಾ ರಂಗಕ್ಕೆ ಕಾಲಿಟ್ಟರು. ‘ಎನ್ನ ಮಾಮಿನ ಮಗಲ್ ಮೀನನ’ ಹಾಡಿನ ಮೂಲಕವೇ ಜನಪ್ರಿಯವಾದ ಈ ಸಿನೆಮಾದ ಮೂಲಕವೇ ಸದಾಶಿವ ಸಾಲ್ಯಾನ್ ಅವರು ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶ ಪಡೆದುಕೊಳ್ಳುವಂತಾಯಿತು.
ಬೆಂಗಳೂರಿನಲ್ಲಿಯೇ ಸಂಪೂರ್ಣ ಚಿತ್ರೀಕರಣವಾದ ಪ್ರಥಮ ತುಳು ಚಿತ್ರ ಎಂಬ ಹೆಗ್ಗಳಿಕೆ ಇದರದ್ದು. 1983ರಲ್ಲಿ ತೆರೆಕಂಡ ಒರಿಯಾ ಭಾಷೆಯ ಕಥೆಯಾಧಾರಿತ ರಾಮ್ ಶೆಟ್ಟಿ ನಿರ್ಮಾಣದ ಆರೂರು ಪಟ್ಟಾಭಿ ನಿರ್ದೇಶನದ ‘ಬದ್ಕೆರೆ ಬುಡ್ಲೆ’ ಸಿನೆಮಾದಲ್ಲಿಯೂ ಸದಾಶಿವ ಸಾಲ್ಯಾನ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದವರು. ರಾಮ್ ಶೆಟ್ಟಿ ನಿರ್ಮಾಣ/ನಿರ್ದೇಶನದ 1984ರಲ್ಲಿ ತೆರೆಕಂಡ ‘ದಾರೆದ ಸೀರೆ’ ಸಿನೆಮಾದಲ್ಲಿಯೂ ಸದಾಶಿವ ಸಾಲ್ಯಾನ್ ಅತ್ಯುತ್ತಮ ನಟನಾ ಕೌಶಲದಿಂದ ಮಿಂಚಿ ಮನೆಮಾತಾದವರು. ಮಚ್ಛೆಂದ್ರನಾಥ್ ಪಾಂಡೇಶ್ವರ ಅವರ ‘ಪೊರ್ತು ಕಂತ್‌ಂಡ್’ ತುಳು ನಾಟಕದ ಕಥೆಯಾಧಾರಿತವಾಗಿ ಮೂಡಿಬಂದ ಈ ಸಿನೆಮಾದ ಮೂಲಕವೇ ಸದಾಶಿವ ಸಾಲ್ಯಾನ್ ಎವರ್‌ಗ್ರೀನ್ ನಟನಾಗಿ ಮೂಡಿಬಂದರು.
ಆ ಬಳಿಕ ತನ್ನದೇ ಆದ ಬ್ಯಾನರ್ ನಿರ್ಮಿಸಿದ ಸದಾಶಿವ ಸಾಲ್ಯಾನ್ ಅವರು ಅದೇ ಬ್ಯಾನರ್‌ನಲ್ಲಿ ‘ಪೆಟ್ಟಾಯಿ ಪಿಲಿ’ ಸಿನೆಮಾ ಮಾಡಿದರು. 1989ರಲ್ಲಿ ದೇವದಾಸ್ ಕಾಪಿಕಾಡ್ ಅವರ ‘ಬಲೆ ಚಾಪರ್ಕ’ ತುಳು ನಾಟಕದ ಕಥೆಯಾಧಾರಿತವಾಗಿ ಮೂಡಿಬಂದ ಆರೂರು ಪಟ್ಟಾಭಿ ನಿರ್ದೇಶನದ ‘ಸತ್ಯ ಓಲುಂಡು’ ಸಿನೆಮಾದ ನಿರ್ಮಾಪಕರಾಗಿಯೂ ಸದಾಶಿವ ಸಾಲ್ಯಾನ್ ಗುರುತಿಸಿಕೊಂಡರು. 1998ರಲ್ಲಿ ತೆರೆಗೆ ಬಂದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ತುಳು ನಾಟಕ ಕಥೆಯಾಧಾರಿತ ‘ಒಂಜಿ ನಿಮಿಷ’ವನ್ನು ಕುಂಜಾಡಿ ಪ್ರೇಮನಾಥ ರೈ ಅವರು ನಿರ್ದೇಶನ ಮಾಡಿದ್ದರು. ಈ ಸಿನೆಮಾದಲ್ಲಿ ಸದಾಶಿವ ಸಾಲ್ಯಾನ್ ಖಳನಟನಾಗಿ ಗುರುತಿಸಿಕೊಂಡಿದ್ದರು.
ಅಲ್ಲದೇ ಕನ್ನಡದಲ್ಲಿ ಸಮರ ಸಿಂಹ, ಇವಳೆಂಥಾ ಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕೂ ಮೊದಲಾದ 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಅಪಘಾತವೊಂದರಲ್ಲಿ ಸದಾಶಿವ ಸಾಲ್ಯಾನ್ ಅವರ ಬಲ ಕಾಲಿಗೆ ತೀವ್ರ ಗಾಯಗಳಾಗಿತ್ತು. ಆದರೂ, ಸಿನೆಮಾದ ನಟನೆಯನ್ನು ಮಾತ್ರ ಅವರ ಕೈಬಿಟ್ಟಿಲ್ಲ. ಕಾಲು ನೋವಿನ ಮಧ್ಯೆಯೇ ಆ್ಯಕ್ಟಿಂಗ್ ಮೂಲಕ ಗಮನಸೆಳೆದರು. ಅದೇ ಹೊತ್ತಿಗೆ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅವರ ಕಾಲು ನೋವು ಇನ್ನಷ್ಟು ತೀವ್ರವಾಗುವಂತಾಯಿತು. ಅಲ್ಲಿಂದ ಬಳಿಕ ಅವರು ಸಿನೆಮಾದಿಂದ ಸ್ವಲ್ಪ ದೂರ ಉಳಿದರು ಎಂದು ನೆನಪಿಸಿಕೊಳ್ಳುತ್ತಾರೆ ತಮ್ಮ ಲಕ್ಷ್ಮಣ.
ಪ್ರಮುಖ ಚಿತ್ರಗಳು
ತುಳು ಚಿತ್ರಗಳಾದ ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ದಾರೆದ ಸೀರೆ, ಪೊರ್ತು ಕಂತ್‌ಂಡ್, ಪೆಟ್ಟಾಯಿ ಪಿಲಿ, ಒಂಜಿ ನಿಮಿಷ ಹಾಗೂ ಕನ್ನಡ ಚಿತ್ರಗಳಾದ ಸಮರ ಸಿಂಹ, ಇವಳೆಂಥಾ ಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಸಹಿತ 50ಕ್ಕೂ ಅಧಿಕ ಚಿತ್ರಗಳಲ್ಲಿ ಸದಾಶಿವ ಸಾಲ್ಯಾನ್ ನಟಿಸಿದ್ದು, ಸತ್ಯ ಓಲುಂಡು ಚಿತ್ರದ ನಿರ್ಮಾಣವನ್ನು ಮಾಡಿದ್ದರು.