ಹುಳಿಯಾರು: ಸುಪ್ರೀಂ ತೀರ್ಪಿನಂತೆ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಎಸ್ಸಿ,ಎಸ್ಟಿ ವರ್ಗಕ್ಕೆ ನೀಡಿದ ಭರವಸೆಯಂತೆ ಕೂಡಲೇ ಕರ್ನಾಟಕದಲ್ಲಿ ಸದಾಶಿವ ವರದಿ ಜಾರಿ ಮಾಡಿ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಮಾದಿಗ ಚೈತನ್ಯ ರಥ ಯಾತ್ರೆಯು ಹುಳಿಯಾರಿಗೆ ಆಗಮಿಸಿತು.
ಹುಳಿಯಾರಿನ ಎಸ್‌ಎಲ್‌ಆರ್ ಬಂಕ್ ಬಳಿ ರಥಯಾತ್ರೆಗೆ ಸ್ವಾಗತ ಕೋರಿದ ಮಾದಿಗ ಸಮುದಾಯದವರು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ರಾಮಗೋಪಾಲ್ ಸರ್ಕಲ್, ವಿನಾಯಕ ನಗರ, ಪೊಲೀಸ್ ಸ್ಟೇಷನ್ ಸರ್ಕಲ್‌ನಲ್ಲಿ ಸಭೆ ನಡೆಸಿ ಬೆಂಗಳೂರಿನಲ್ಲಿ ಫೆ. 8 ರಂದು ಮಾದಿಗ ಮತ್ತು ಸಂಬಂಧಿತ 47 ಜಾತಿಗಳ 10 ಲಕ್ಷ ಜನರ ಬೃಹತ್ ಶಕ್ತಿ ಪ್ರದರ್ಶನ ಮತ್ತು ನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲರೂ ಭಾಗವಹಿಸುವಂತೆ ಸಲಹೆ ನೀಡಲಾಯಿತು.
ಅಂಬೇಡ್ಕರ್ ಅವರ ಸಂವಿಧಾನದ ಮುನ್ನುಡಿಯಲ್ಲಿ ಎಲ್ಲಾ ಜಾತಿ, ಜನಾಂಗ ಧರ್ಮದವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ನೀಡಬೇಕೆಂದು ಮತ್ತು ಅವಕಾಶಗಳಲ್ಲಿ ಸ್ಥಾನಮಾನದಲ್ಲಿ ಸಮಾನತೆ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನದ 14 ಮತ್ತು 15ನೇ ವಿಧಿಯಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಯಾರಿಗೂ ಯಾವುದೇ ರೀತಿಯ ತಾರತಮ್ಯ, ಅನ್ಯಾಯ ಆಗಬಾರದು. ಆದರೆ, ಮಾದಿಗ ಸಮುದಾಯಕ್ಕೆ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಅನುಸಾರವಾಗಿ ಶಿಕ್ಷಣ, ಸರ್ಕಾರಿ ಉದ್ಯೋಗ, ಭೂಮಿ, ಸಂಪತ್ತಿನಲ್ಲಿ ಪಾಲು ಸಿಗದೆ ಅನ್ಯಾಯಕ್ಕೆ ಒಳಗಾಗಿದೆ ಎಂದು ಆರೋಪಿಸಲಾಯಿತು.
ಇದನ್ನೂ ಓದಿ :ನೂತನ ಅಧ್ಯಕ್ಷರಾಗಿ ಮಾಜಿ ನಗರ ಸೇವಕ ಸುರೇಶ್ ಶೆಟ್ಟಿ ಆಯ್ಕೆ
ಲಕ್ಷ್ಮೀನಾರಾಯಣ ಹೆಣ್ಣೂರು, ಅಂಬಣ್ಣ ಅರೊಳ್ಳಿಕರ್, ಕುಮಾರ್, ಹರಿರಾಮ್ ಬೆಂಗಳೂರು ನಾಗರಾಜ್, ವಿಜಯಕುಮಾರ್, ರಾಮಚಂದ್ರ ಕಾಂಬ್ಳೆ, ರಾಜಣ್ಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.