Advertisement

Sirsi: ಪ್ರಧಾನಿ ಜನಪ್ರಿಯತೆ ಸಹಿಸದ ಕಾಂಗ್ರೆಸ್ ಜನರಿಗೆ ತಪ್ಪು ಸಂದೇಶ ನೀಡಿ ನಾಟಕವಾಡುತ್ತಿದೆ

04:32 PM Feb 09, 2024 | sudhir |

ಶಿರಸಿ: ಜನಪರ ಆಡಳಿತ ನೀಡಲಾಗದ ಕಾಂಗ್ರೆಸ್ ಸೋಲಿನ ಭಯದಿಂದ ಪ್ರಾದೇಶಿಕ ಭಾವನೆ ಕೆರಳಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ ಎಂದು ಬಿಜೆಪಿಯ ಪ್ರಮುಖ ಸದಾನಂದ ಭಟ್ಟ ನಿಡಗೋಡ ಖಂಡಿಸಿದ್ದಾರೆ.

Advertisement

ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕೆಂಬ ಕಾರಣದಿಂದ ವಿವೇಚನೆಯಿಲ್ಲದೇ ಗ್ಯಾರಂಟಿಗಳನ್ನು ಘೋಷಿಸಿಕೊಂಡು ಈಗ ಅದರ ಅನುಷ್ಠಾನಕ್ಕೂ ಹಣವಿಲ್ಲ. ಅಭಿವೃದ್ಧಿಗಂತೂ ಅವಕಾಶವೇ ಇಲ್ಲ ಎನ್ನುವಂತೆ ಬೇಜವಾಬ್ದಾರಿಯಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದ ಹತಾಶೆಯಿಂದ ಪ್ರಾದೇಶಿಕತೆಯ ಭಾವನೆಯನ್ನು ಕೆರಳಿಸಿ ರಾಜಕೀಯ ಲಾಭಕ್ಕೆ ಪ್ರಯತ್ನ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ತಂದಿದ್ದ ಜನಪರ ಯೋಜನೆಗಳಾದ ಹೈನುಗಾರಿಕೆ ಪ್ರೋತ್ಸಾಹ ಧನ, ಮುಖ್ಯಮಂತ್ರಿ ಕಿಸಾನ್ ಸಂಮಾನ, ವಿದ್ಯಾನಿಧಿ ಮೊದಲಾದ ಯೋಜನೆಗಳನ್ನು ನಿಲ್ಲಿಸಿ, ಬರಗಾಲದ ಸನ್ನಿವೇಶದಲ್ಲಿ ರೈತರ ನೆರವಿಗೆ ಬರಲು ಸಾಧ್ಯವಾಗದೇ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಾಗಿ ಹಣವಿಲ್ಲದಂತೆ ಮಾಡಿಕೊಂಡು ಹಣಕಾಸಿನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೆಸ ಸರ್ಕಾರ ಜನತೆಯ ಮೇಲೆ ತೆರಿಗೆಗಳ ಮೂಟೆಯನ್ನು ಹೊರಿಸಿ ಸಾಮಾನ್ಯ ಜನರ ಜೀವನ ದುರ್ಬಲವಾಗುವಂತೆ ಮಾಡುತ್ತಿದೆ. ಒಂದು ಕಡೆ ಭಾಗ್ಯದ ಹೆಸರಿನಲ್ಲಿ ಅಸಮರ್ಪಕಾಗಿ ಯೋಜನೆ ನೀಡಿ ಮತ್ತೊಂದು ಕಡೆಯಿಂದ ವಿದ್ಯುತ್, ನೀರು, ಬಸ್ ದರ ಏರಿಕೆ ಮಾಡಿದೆ. ಬಡ ಜನರಿಗೆ ಸೌಲಭ್ಯ ಪಡೆಯಲು ಅಗತ್ಯವಾದ ಪ್ರಮಾಣ ಪತ್ರ ಪಡೆಯಲು ೨೦ ರೂಪಾಯಿಯ ಸ್ಟಾಂಪ್‌ನ್ನು ೧೦೦ ರೂಪಾಯಿಗೆ ಏರಿಸಿದೆ. ಸ್ಟಾಂಪ್ ಕಾಯಿದೆ ಪರಿಷ್ಕರಿಸಿ ಶೇ.೫೦೦ ರಷ್ಟು ಹೆಚ್ಚಳ ಮಾಡಿರುವುದು ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ ಹೊಸ ಬರೆಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ಬೇಕಾ ಬಿಟ್ಟಿ ತೆರಿಗೆ ವಿಧಿಸುವುದರ ಜೊತೆಗೆ ತನ್ನ ದಿವಾಳಿತನವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಆಧಾರ ರಹಿತ ಆರೋಪ ಮಾಡತೊಡಗಿದೆ. ದೇಶದಲ್ಲಿ ಆರ್ಥಿಕ ಶಿಸ್ತನ್ನು ತಂದು, ಸಂಕಷ್ಟ ಪರಿಸ್ಥಿತಿಯಿಂದ ಅಭಿವೃದ್ಧಿಯೆಡೆಗೆ ಸಮರ್ಥವಾಗಿ ರಾಷ್ಟ್ರವನ್ನು ಮುನ್ನೆಡೆಸುತ್ತಿರುವ ಕೇಂದ್ರ ಸರಕಾರ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆಯೆಂಬ ಸುಳ್ಳು ಆರೋಪಕ್ಕೆ ಕಾಂಗ್ರೇಸ್ ಮುಂದಾಗಿದೆ. ಜಿ.ಎಸ್.ಟಿ. ತೆರಿಗೆ ಹಂಚಿಕೆ ವಿಧಾನವನ್ನು ಒಪ್ಪಿಕೊಂಡು, ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿಯಲ್ಲಿ ಅಭೂತ ಪೂರ್ವವಾದ ಅಭಿವೃದ್ಧಿಯಲ್ಲಿ ರಾಷ್ಟ್ರವನ್ನು ಮುನ್ನಡೆಸುವುತ್ತಿರುವ ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಿಸದ ಕಾಂಗ್ರೇಸ್ ಜನರಿಗೆ ತಪ್ಪು ಸಂದೇಶ ನೀಡುತ್ತಾ ತೆರಿಗೆ ಹಂಚಿಕೆಯಲ್ಲಿ ಅಸಮತೋಲನ ಎಂದು ಪ್ರತಿಭಟನೆಯ ನಾಟಕ ಮಾಡುತ್ತಿದೆ. ಕಾಂಗ್ರೇಸ್ ಜನತೆಗೆ ವಾಸ್ತವ ಅಂಶಗಳನ್ನು ತಿಳಿಸದೆ, ಕೇವಲ ಪ್ರಾದೇಶಿಕ ಭಾವನೆಯನ್ನು ಕೆರಳಿಸಿ ಜನತೆಯಲ್ಲಿ, ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಬಿರುಕು ತಂದು ತನ್ನ ರಾಜಕೀಯ ಬೆಳೆಬೇಯಿಸುವ ಪ್ರಯತ್ನಕ್ಕೆ ಕಾಂಗ್ರೇಸ್ ಕೈ ಹಾಕಿದೆ ಎಂದಿದ್ದಾರೆ.

ದೇಶದಲ್ಲಿನ ಕಳೆದ ೨೦ ವರ್ಷಗಳ ಅವಧಿಯ ತೆರಿಗೆ ಸಂಗ್ರಹ ಮತ್ತು ರಾಜ್ಯಗಳಿಗೆ ಅನುದಾನ ಹಂಚಿಕೆಯ ಅಧಿಕೃತ ಲೆಕ್ಕವನ್ನು ಕಾಂಗ್ರೇಸ್ ಜನತೆಯ ಮುಂದಿಡಲಿ. ಕೇವಲ ರಾಜಕೀಯ ಲಾಭಕ್ಕೆ ಸುಳ್ಳು ಆರೋಪ ಮಾಡುತ್ತಿರುವ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆಯನ್ನೇ ಬುಡ ಮೇಲು ಮಾಡಿ ಜನತೆಗೆ ತೆರಿಗೆಯ ಹೊರೆ ಹೊರಿಸಿ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೇಸ್ ಸರಕಾರ ನನ್ನ ತೆರಿಗೆ ; ನನ್ನ ಹಕ್ಕು ಎನ್ನುತ್ತಿರುವುದು ಖಂಡನೀಯ. ಕಾಂಗ್ರೇಸ್‌ಗೆ ನಿಜವಾದ ಜನಪರ ಕಾಳಜಿ ಇದ್ದರೆ ತಕ್ಷಣ ಅಭಿವೃದ್ಧಿಗೆ ಅನುದಾನ ನೀಡಲಿ ಮತ್ತು ಬೇಕಾಬಿಟ್ಟಿಯಾಗಿ ಏರಿಕೆ ಮಾಡುತ್ತಿರುವ ತೆರಿಗೆಯನ್ನು ಕಡಿತಗೊಳಿಸಿ ಜನ ಸಾಮಾನ್ಯರಿಗೆ ಉತ್ತಮ ಆಡಳಿತ ನೀಡಲಿ. ಕೇವಲ ಬೂಟಾಟಿಕೆಯ ರಾಜಕಾರಣ ಮಾಡುತ್ತಾ, ವೃಥಾ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುವ ಚಾಳಿಯನ್ನು ಬಿಡಲಿ ಎಂದೂ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next