ಸೇಡಂ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆ ಸ್ಥಾಪಿಸಲಾದ ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಣದಲ್ಲಿ ಈಗಾಗಲೇ ಎರಡು ಕ್ವಾರಂಟೈನ್ ಕೇಂದ್ರಗಳಲ್ಲಿ 30 ಜನರನ್ನು ಇರಿಸಲಾಗಿದೆ. ಜತೆಗೆ ಆಯಾ ಗ್ರಾಮಗಳಲ್ಲಿನ ಶಾಲೆಗಳಲ್ಲೂ ಸಹ ನೂರಾರು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಬಹುತೇಕ ಕಡೆಗಳಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಸರಿಯಾದ ಮೂಲಸೌಲಭ್ಯವಿಲ್ಲ. ಕೆಲವೆಡೆ ಶೌಚಾಲಯಗಳಿದ್ದರೂ ಸಾಮೂಹಿಕವಾಗಿ ಬಳಕೆ ಮಾಡಬೇಕು. ಇನ್ನೂ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪಟ್ಟಣದಲ್ಲಿರುವ ವಸತಿ ನಿಲಯಗಳ ಪೈಕಿ ಕೋಡ್ಲಾ ಕ್ರಾಸ್ ಬಳಿಯ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದಲ್ಲಿ ಮಾತ್ರ ಶೌಚಾಲಯವಿದೆ.
ಇನ್ನುಳಿದಲ್ಲಿ ಸಾಮೂಹಿಕವಾಗಿ ಶೌಚಾಲಯ ಬಳಕೆ ಅನಿವಾರ್ಯ. ಕ್ವಾರಂಟೈನ್ ಇದ್ದವರ ಪೈಕಿ ಒಬ್ಬರಲ್ಲಿ ಸೋಂಕು ಕಂಡುಬಂದರೂ ಎಲ್ಲರಿಗೂ ತಗುಲುವ ಆತಂಕ ವ್ಯಕ್ತವಾಗಿದೆ. ಅನೇಕ ವರ್ಷಗಳಿಂದ ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆ ಇದೆ. ಈಗ ಕ್ವಾರಂಟೈನ್ ಕೇಂದ್ರಗಳಿಗೆ ಭದ್ರತೆ ಕಲ್ಪಿಸುವುದು ದುಸ್ತರವಾಗಿದೆ. ಇದರಿಂದ ಗ್ರಾಪಂಗಳ ಮೂಲಕ ಭದ್ರತಾ ಸಿಬ್ಬಂದಿ ನೇಮಿಸಲಾಗುತ್ತಿದೆ.
ಈಗಾಗಲೇ 680 ಜನರನ್ನು ತಾಲೂಕಿನೆಲ್ಲೆಡೆ ಕ್ವಾರಂಟೈನ್ ಮಾಡಲಾಗಿದೆ. 83 ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಸ್ತುತ 28 ಬಳಕೆ ಮಾಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.
ಬಸವರಾಜ ಬೆಣ್ಣೆಶಿರೂರ,
ತಹಶೀಲ್ದಾರ್ ಸೇಡಂ