Advertisement
ಈ ಎಲ್ಲದರ ನಡುವೆ ಪಂಜಾಬ್ ನಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಯೊಂದು ಇಡೀ ದೇಶದ ಗಮನ ಸೆಳೆದಿದೆ. 1996ರ ಬಳಿಕ ರಾಜ್ಯದಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷಗಳು ಒಂದಾಗಿವೆ. ಇದು ಒಂದು ರೀತಿಯಲ್ಲಿ ಸಿಕ್ಖರು ಮತ್ತು ದಲಿತ ಸಮುದಾಯಗಳನ್ನು ಗುರಿಯಲ್ಲಿ ಇರಿಸಿಕೊಂಡು ಮಾಡಿಕೊಳ್ಳಲಾಗಿರುವ ಹೊಂದಾಣಿಕೆ ಎಂದೇ ಬಿಂಬಿಸಲಾಗುತ್ತಿದೆ.
ರಾಜಕೀಯ ಪಂಡಿತರ ಪ್ರಕಾರ, ಈ ಒಪ್ಪಂದ ಪಂಜಾಬ್‌ನ ರಾಜಕೀಯ ಭವಿಷ್ಯವನ್ನೇ ಬದಲಿಸುವ ಸಾಧ್ಯತೆ ಇದೆ. ಅಂದರೆ, ಸಿಕ್ಖರು ಮತ್ತು ದಲಿತರು ಒಂದಾದರೆ ಇಲ್ಲಿನ ಫಲಿತಾಂಶ ಬೇರೆಯೇ ರೀತಿಯಲ್ಲಿ ಬರಬಹುದು. ಇದಕ್ಕೆ ಸಾಕ್ಷಿ 1996ರ ಲೋಕಸಭೆ ಚುನಾವಣೆ. ಆಗ ಬಿಎಸ್‌ಪಿಯ ಪರಮೋಚ್ಚ ನಾಯಕ ಕಾನ್ಶಿಧೀ ರಾಮ್ ಮತ್ತು ಎಸ್‌ಎಡಿಯ ಪರಮೋಚ್ಚ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಜತೆಗೂಡಿ ಮೈತ್ರಿ ಮಾಡಿಕೊಂಡಿದ್ದರು. ಸಿಕ್ಖರು ಮತ್ತು ದಲಿತರು ಒಟ್ಟಾದ ಕಾರಣದಿಂದ ಭರ್ಜರಿ ಫಲಿತಾಂಶ ಬಂದಿತ್ತು. ಅದೇ ಮಾನದಂಡವನ್ನು ಇರಿಸಿಕೊಂಡು ಈಗ ಮತ್ತೆ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
Related Articles
ದೇಶದಲ್ಲಿ ಬಹಳಷ್ಟು ಜನರಿಗೆ ತಿಳಿಯದ ವಿಚಾರವೊಂದಿದೆ; ಪಂಜಾಬ್ ಎಂದರೆ ಸಾಕು, ಅಲ್ಲಿ ಸಿಕ್ಖರೇ ಹೆಚ್ಚು ಎಂದೇ ಎಲ್ಲರೂ ಭಾವಿಸುತ್ತಾರೆ. ಒಂದರ್ಥದಲ್ಲಿ ಇದು ನಿಜವೇ. ಆದರೆ ಬೇರೆ ರಾಜ್ಯಗಳಿಗಿಂತ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಇದ್ದಾರೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ. ಹೌದು, ಇಲ್ಲಿ ಸುಮಾರು ಶೇ.32ರಷ್ಟು ದಲಿತರಿದ್ದಾರೆ. ಇನ್ನು ಶಿರೋಮಣಿ ಅಕಾಲಿ ದಳ ಜಾಟ್ ಸಿಕ್ಖರಲ್ಲಿ ಹಿಡಿತ ಸಾಧಿಸಿದೆ. ಅಷ್ಟೇ ಅಲ್ಲ, ಈ ಮೈತ್ರಿ ಒಂದು ರೀತಿಯಲ್ಲಿ ಪಂಥವಾದ ಮತ್ತು ಅಂಬೇಡ್ಕರ್ ವಾದದ ಸಮ್ಮಿಶ್ರಣ ಇದ್ದಂತೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
Advertisement
2017ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎರಡೂ ಕೆಟ್ಟ ಸೋಲು ಅನುಭವಿಸಿದ್ದವು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರೂ ಹೆಚ್ಚಿನ ಮತ ಪ್ರಮಾಣ ಗಳಿಸುವಲ್ಲಿ ಎರಡೂ ಪಕ್ಷಗಳು ಯಶಸ್ವಿಯಾಗಿದ್ದವು. ಅಂದರೆ 2017ರಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಅವರ ಮತಗಳನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಜತೆಗೆ ದಲಿತರು ಕಾಂಗ್ರೆಸ್ ಕಡೆಗೆ ವಾಲಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಎಡಿ ತನ್ನ ಸಾಂಪ್ರಾದಾಯಿಕ ಮತಗಳನ್ನು ಒಂದಷ್ಟು ಸೆಳೆಯುವಲ್ಲಿ ಮತ್ತು ಬಿಎಸ್‌ಪಿ ತನ್ನ ಸಾಂಪ್ರದಾಯಿಕ ಮತಗಳಾದ ದಲಿತರ ವೋಟ್ ಸೆಳೆಯುವಲ್ಲಿ ಒಂದಷ್ಟು ಯಶಸ್ವಿಯಾಗಿದ್ದವು. ಇದನ್ನೇ ಗಮನದಲ್ಲಿಇರಿಸಿಕೊಂಡು ಎರಡೂ ಪಕ್ಷಗಳು ಒಗ್ಗೂಡಿವೆ. ವಿಶೇಷವಾಗಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಬಿಎಸ್‌ಪಿಗೆ ಬಿಟ್ಟು ಕೊಡಲಾಗಿದೆ. ಉಳಿದ ಕಡೆಗಳಲ್ಲಿ ಎಸ್‌ಎಡಿ ಸ್ಪರ್ಧೆ ಮಾಡಲಿದೆ. ಈ ಸಾಮಾಜಿಕ ಹೊಂದಾಣಿಕೆಯಿಂದಾಗಿ ತಮ್ಮ ತಮ್ಮ ಸಾಂಪ್ರದಾಯಿಕ ಮತಗಳು ಚದುರಿ ಹೋಗಲ್ಲ ಎಂಬುದು ಈ ಎರಡೂ ಪಕ್ಷಗಳ ವಿಶ್ವಾಸ.
ತೇಪೆ ಹಚ್ಚುವ ಯತ್ನ ಇನ್ನು ಶಿರೋಮಣಿ ಅಕಾಲಿ ದಳ ಏನಾದರೂ ಆಗಲಿ, ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠ ತೊಟ್ಟಿದೆ. ಅಲ್ಲದೆ ಈಗಾಗಲೇ ಪಕ್ಷಕ್ಕೆ ಬಿದ್ದಿರುವ ಏಟನ್ನು ಸರಿಪಡಿಸಿಕೊಳ್ಳಲೂ ಅದು ಮುಂದಾಗಿದೆ. ಅಂದರೆ, ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಮಾಡಿದಾಗ, ಶಿರೋಮಣಿ ಅಕಾಲಿ ದಳ ಎನ್‌ಡಿಎ ಭಾಗವಾಗಿತ್ತು. ಆಗ ಈ ಕೃಷಿ ಕಾಯ್ದೆಗಳನ್ನು ಅತ್ಯುಗ್ರವಾಗಿ ವಿರೋಧಿಸಲಿಲ್ಲ ಎಂಬ ಆರೋಪ ಎಸ್‌ಎಡಿ ಮೇಲಿದೆ. ಅನಂತರ ರೈತರು ಪ್ರತಿಭಟನೆ ಆರಂಭಿಸಿದ ಮೇಲೆ ಎಸ್‌ಎಡಿಯಿಂದ ಸಚಿವರಾಗಿದ್ದ ಹರ್‌ಸೀಮ್ರತ್ ಕೌರ್ ರಾಜೀನಾಮೆ ಕೊಟ್ಟರು ಎಂದು ಹೇಳಲಾಗುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿಯೇ ಎಸ್‌ಎಡಿ ರೈತರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಬೆಂಬಲ ಕೊಟ್ಟಿದೆ. ಈಗಲೂ ಕೊಡುತ್ತಿದೆ. ಆದರೂ ತನ್ನ ಮೇಲಿನ ಅಪಾದನೆಗಳಿಂದ ಹೊರಬರಲು ಬೇರೆಯದ್ದೇ ಆದ ರೀತಿಯಲ್ಲಿ ಹೊಂದಾಣಿಕೆ ಬೇಕು. ಹೀಗಾಗಿ ದಲಿತ ಮತಗಳ ಮೇಲೆ ಕಣ್ಣು ಹಾಕಿ ಬಿಎಸ್‌ಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಕಾಂಗ್ರೆಸ್ ನಲ್ಲೂ ಒಳಜಗಳ
ಅತ್ತ ಶಿರೋಮಣಿ ಅಕಾಲಿ ದಳ ಮತ್ತು ಬಿಎಸ್‌ಪಿ ಜತೆಗೂಡಿ ಚುನಾವಣೆಗೆ ಹೋಗಲು ಸಿದ್ಧವಾಗುತ್ತಿದ್ದರೆ, ಇತ್ತ ಅಧಿಕಾರದಲ್ಲಿರುವ ಕಾಂಗ್ರೆಸ್ ನಲ್ಲಿ ಬೇರೆಬೇರೆ ಬೇಗುದಿಗಳು ಕಾಣಿಸಿಕೊಂಡಿವೆ. ಬೆಹºಲ್ ಕಲಾನ್ ಮತ್ತು ಕೊಟ್ ಕಪೂರಾ ಫೈರಿಂಗ್ ಕೇಸಿನಲ್ಲಿ ಸರಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಇಲ್ಲಿ ವಿಶೇಷ ತನಿಖಾ ತಂಡದ ವರದಿಯನ್ನು ಪಕ್ಕಕ್ಕೆ ಸರಿಸಿರುವ ಹೈಕೋರ್ಟ್, ಹೊಸದಾಗಿ ಎಸ್‌ಐಟಿ ರಚಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ. ಹೈಕೋರ್ಟ್‌ನ ಆದೇಶ ಕಾಂಗ್ರೆಸ್‌ನೊಳಗೇ ಬೇಗುದಿಗೆ ಕಾರಣವಾಗಿದ್ದು, ಇಬ್ಬರು ಸಚಿವರು ರಾಜೀನಾಮೆಗೂ ಮುಂದಾಗಿದ್ದರು.
ಇದರ ನಡುವೆಯೇ ಪಂಜಾಬ್ ಸರಕಾರಕ್ಕೆ ನವಜೋತ್ ಸಿಂಗ್ ಸಿಧು ಅವರೂ ಕಾಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡುತ್ತಿರುವ ಇವರು, ಸರಕಾರದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಫೈರಿಂಗ್ ಕೇಸಿನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶಿರೋಮಣಿ ಅಕಾಲಿ ದಳದ ಬಾದಲ್ ಕುಟುಂಬ ಸದಸ್ಯರನ್ನು ಕಾಪಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್‌ಗ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ತಂಡವೊಂದನ್ನು ಕಳುಹಿಸಿದ್ದಾರೆ. ಇವರು ಹಲವು ಸಚಿವರು, ಶಾಸಕರು ಸೇರಿ 150 ಮಂದಿಯನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸದ್ಯದಲ್ಲೇ ಇವರು ಹೈಕಮಾಂಡ್‌ಗೆ ವರದಿಯನ್ನೂ ನೀಡಲಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ನವಜೋತ್ ಸಿಂಗ್ ಸಿಧುಗೆ ಸರಕಾರದಲ್ಲಿ ಸ್ಥಾನಮಾನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆದರೆ ಸದ್ಯಕ್ಕೆ ಇವ್ಯಾವುದೂ ಈಡೇರಿಲ್ಲ. ಕಾಂಗ್ರೆಸ್‌ನಲ್ಲಿನ ಈ ಗೊಂದಲಗಳೇ ಮುಂದಿನ ಚುನಾವಣೆಯಲ್ಲಿ ಕಂಟಕವಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ ಎಂದೂ ಹೇಳಲಾಗಿದೆ. – ಸೋಮಶೇಖರ ಸಿ.ಜೆ.