ಮೈಸೂರು: ರಸಾಯನಿಕ ತ್ಯಾಜ್ಯಕ್ಕೆ ಬಾಲಕ ಬಲಿಯಾದ ಪ್ರದೇಶಕ್ಕೆ ಮಂಗಳವಾರ ಕೂಡ ತಜ್ಞರ ತಂಡ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದೆ. ಡಾ. ಜಯಪ್ರಕಾಶ್ ನೇತೃತ್ವದಲ್ಲಿ ಡಾ. ಸಂದೀಪ್ ಮೊದಲಿಯಾರ್, ಎಸ್‌ಜೆಸಿಇ ಕಾಲೇಜು ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಮನೋಜ್ ಕುಮಾರ್,
ಸಿವಿಲ್ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಕೆ.ಪ್ರಸಾದ್ ಸೇರಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜಾnನ ಇಲಾಖೆ, ಕೈಗಾರಿಕಾ ಇಲಾಖೆ, ಮೈಸೂರು ತಾಲೂಕು ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿಯವರನ್ನು ಒಳಗೊಂಡಂತೆ ಘಟನೆಯ ಕೂಲಂಕಷ ತನಿಖೆಗಾಗಿ ಜಿಲ್ಲಾಧಿಕಾರಿ ರಚಿಸಿರುವ ತಜ್ಞರ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಲಿಂಗರಾಜು ಮಾತನಾಡಿ, ಸೋಮವಾರ ಹೆಚ್ಚಿನ ಜನ ಸಂದಣಿ ಇದ್ದುದರಿಂದ ಪರಿಶೀಲನೆ ಕಷ್ಟವಾಯಿತು. ಹೀಗಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದೇವೆ, ತಂಡದ ಜತೆಗೆ ಬಾಯ್ಲರ್ ಇನ್ಸ್‌ಪೆಕ್ಟರ್ ಅವರನ್ನೂ ಸಹ ಕರೆದೊಯ್ಯಲಾಗಿತ್ತು. ಸೋಮವಾರ ರಾತ್ರಿ ಮಳೆ ಸುರಿದ ಪರಿಣಾಮ ಉಷ್ಣತೆ ಕಡಿಮೆಯಾಗಿದೆ.
ಘಟನಾ ಸ್ಥಳದ ಮಣ್ಣಿನ ಮಾದರಿಗಳನ್ನು ಬೆಂಗಳೂರು ಮತ್ತು ಮೈಸೂರಿನ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯಗಳು ಹಾಗೂ ಮೈಸೂರಿನ ಗಣೇಶ್ ಕನ್ಸಲ್ಟೆನ್ಸಿ ಲ್ಯಾಬ್‌ಗ ಕಳುಹಿಸಲಾಗಿದೆ. ಮಣ್ಣಿನ ಮಾದರಿಗಳನ್ನು ಲೀಚಿಂಗ್ ಮಾಡಿ, ಡ್ರೆ„ ಮಾಡಿ ಗುಣಮಟ್ಟದ ಪರೀಕ್ಷೆ ನಡೆಸಬೇಕಿರುವುದರಿಂದ ವರದಿ ಬರಲು ಇನ್ನೂ ನಾಲ್ಕು ದಿನಗಳ ಕಾಲಾವಕಾಶ ಬೇಕಿದೆ ಎಂದು ತಿಳಿಸಿದರು.
ತಜ್ಞರ ತಂಡದ ಮುಖ್ಯಸ್ಥ ಜಯಪ್ರಕಾಶ್ ಮಾತನಾಡಿ, ಘಟನಾ ಸ್ಥಳದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಮರಳು ಸಡಿಲವಾಗಿರುವ ಕಡೆ ಕಡ್ಡಿಯಿಂದ ಅಲುಗಾಡಿಸಿದರೆ ಶಾಖ ಹಾಗೂ ಹೊಗೆ ಬರುತ್ತಿದೆ. ಈ ಸೀಮಿತ ಜಾಗ ಬಿಟ್ಟು ಉಳಿದ ಕಡೆಗಳಲ್ಲಿ ಕಪ್ಪುಮಿಶ್ರಿತ ಮಣ್ಣಿದ್ದರೆ, ಇಲ್ಲಿನ ಕಂದು ಮಿಶ್ರಿತ ಬೂದು ಬಣ್ಣಕ್ಕೆ ತಿರುಗಿದೆ. ಮಂಗಳವಾರ ಕೂಡ ಸಂಗ್ರಹಿಸಿರುವ ಒಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.
ಜತೆಗೆ ಅಂರ್ತಜಲಕ್ಕೆ ರಸಾಯನಿಕ ಸೇರಿದೆಯೇ ಎಂಬುದನ್ನು ತಿಳಿದುಕೊಳ್ಳಲು ಘಟನಾ ಸ್ಥಳದ ಸಮೀಪದಲ್ಲಿರುವ ಎರಡು ಬೋರ್‌ವೆಲ್‌ಗಳ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋ ಗಾಲಯದ ವರದಿ ನಿರೀಕ್ಷಿಸಲಾಗುತ್ತಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಆಗಾಗ್ಗೆ ಜಿಲ್ಲಾಧಿಕಾರಿಗೂ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.