ಹೊಸದುರ್ಗ: ಭಾರತೀಯರಾದ ನಾವು ಮಾತನಾಡುವುದು, ನಡೆದಾಡುವುದು, ಮೋಸ ಮಾಡುವುದು ಈ ಮೂರು ವಿಚಾರಗಳಲ್ಲಿ ಮುಂದೆ ಇದ್ದೇವೆ. ಇದರಿಂದ ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠ, ವೀರಶೈವ ಸಮಾಜ ಮತ್ತು ಜಗದ್ಗುರು ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ವತಿಯಿಂದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
ದೇಹ ದಂಡನೆ ಮಾಡದೆ ಹಣ ಗಳಿಸಬೇಕೆನ್ನುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶ್ರಮ ಇಲ್ಲದೆ ಸುಖೀ ರಾಜ್ಯ ಕಟ್ಟಲು ಸಾಧ್ಯವಿಲ್ಲ ಎಂದರು. ಆಧುನಿಕ ಮಾನವನಲ್ಲಿ ವ್ಯಾವಹಾರಿಕ ಪ್ರಜ್ಞೆ ಜಾಗೃತವಾಗಿದೆ. ಇದು ಚತುರತೆ, ಚಾಣಕ್ಯತೆಯನ್ನು ಕಲಿಸುತ್ತದೆ. ಇದರೊಟ್ಟಿಗೆ ಮತ್ತೂಬ್ಬರಿಗೆ ಟೋಪಿ ಹಾಕುವಷ್ಟು ಮಾನವ ಚತುರನಾಗಿದ್ದಾನೆ. ಇಂದಿನ ಜನರಿಗೆ ದುಡ್ಡಿನ ದರ್ಶನದ ಆಲೋಚನೆಯಾದರೆ, ಶರಣರಿಗೆ ಕಾಯಕದ ದರ್ಶನ ಮುಖ್ಯವಾಗಿತ್ತು. ವ್ಯಾವಹಾರಿಕ ಪ್ರಜ್ಞೆಯಿಂದ ಕಾಯಕ ಪ್ರಜ್ಞೆಗೆ ಬರಬೇಕು ಎಂದು ಕರೆ ನೀಡಿದರು.
ಭಾರತೀಯರ ಬದುಕು ಭ್ರಮೆಯ ಮೇಲೆ ನಿಂತುಕೊಳ್ಳುತ್ತಿದೆ. ನಾವು ಭ್ರಮೆಗೆ ಒಳಗಾಗದೆ ಸ್ವಾಭಾವಿಕವಾದ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಸಂವರ್ಧನೆಯ ಜೊತೆಗೆ ಮೌಲ್ಯವರ್ಧನೆಯಾಗಬೇಕು. ಇದರಿಂದ ನಮ್ಮೊಳಗೆ ಪಾರಮಾರ್ಥ ಪ್ರಜ್ಞೆ ಮೂಡುತ್ತದೆ ಎಂದರು.
ನಿವೃತ್ತ ಶಿಕ್ಷಕ ಎಸ್. ಶಿವಲಿಂಗಮೂರ್ತಿ ಮಾತನಾಡಿ, ವೀಣೆ ನುಡಿಸಿ ಸಂಗೀತಗಾರ ಸಂಗೀತವನ್ನು ಹೊರಗೆಡಹುತ್ತಾನೆ. ಆದರೆ ನಮ್ಮೊಳಗಿನ ವೀಣೆ ನುಡಿಸಬೇಕು. ಅದೇ ನಿಜವಾದ ಸಂಗಮ. ನಮ್ಮೊಳಗಿನ ಇಂದ್ರಿಯಗಳನ್ನು ಶುದ್ಧಿ ಮಾಡಿಕೊಳ್ಳಬೇಕು. ಎಲ್ಲರಲ್ಲೂ ಅಂತಃಶಕ್ತಿ ಇದ್ದು, ಅದು ಜಾಗೃತವಾಗಬೇಕು.
ಲಿಂಗಾನುಸಂಧಾನವಾಗಬೇಕು. ನಾಡಿಗಳನ್ನು ಶುದ್ಧಿಗೊಳಿಸಬೇಕು. ವಿಜ್ಞಾನ ಮತ್ತು ಯೋಗ ಎರಡೂ ಒಂದೇ. ಶರಣರ ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್.ಎಂ. ಷಡಕ್ಷರಯ್ಯ, ಸಿದ್ಧರಾಮೇಶ್ವರ, ಡಾ| ಜಿ.ಎನ್. ಮಲ್ಲಿಕಾರ್ಜುನಪ್ಪ, ಎ.ಜೆ. ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಎ.ಎಸ್. ಸಿದ್ಧರಮೇಶ್ ಇದ್ದರು. ಅಮೃತವರ್ಷಿಣಿ ಕಲಾ ತಂಡದವರು ಪ್ರಾರ್ಥಿಸಿದರು. ಎಸ್. ಕಲ್ಮಠ ಸ್ವಾಗತಿಸಿದರು. ಈ. ಮಂಜುನಾಥ ನಿರೂಪಿಸಿದರು.
ರಾಮಲಿಂಗಯ್ಯ ವಂದಿಸಿದರು.
ಶರಣರು, ದಾರ್ಶನಿಕರು, ಸಂತರು ಹುಸಿತನದ ಮೇಲೆ ಸೌಧವನ್ನು ಕಟ್ಟಲಿಲ್ಲ. ಅವರದು ಗಟ್ಟಿತನವಾಗಿತ್ತು. ಆದರೆ 21ನೇ ಶತಮಾನ ಹುಸಿತನದ ಕಾಲವಾಗಿದೆ. ಹುಸಿತನವನ್ನು ಬದುಕಿನ ಮೌಲ್ಯ ಎಂದು ಭಾವಿಸಬಾರದು. ಅದು ನಮ್ಮನ್ನೇ ಮೋಸಗೊಳಿಸುತ್ತದೆ.
ಡಾ| ಶಿವಮೂರ್ತಿ ಮುರುಘಾ ಶರಣರು