Advertisement

ಅ. ಇತಿಹಾಸ ಸಮ್ಮೇಳನಕ್ಕೆ ಚಾಲನೆ 

09:24 AM Jan 06, 2018 | Team Udayavani |

ಮಹಾನಗರ: ದೇಶ ರಕ್ಷಣೆಗಾಗಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ಯೋಧರ ತ್ಯಾಗ ಬಲಿದಾನ ಸದಾ ಸ್ಮರಣೀಯ ಎಂದು ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ. ಕಾರಿಯಪ್ಪ ಹೇಳಿದ್ದಾರೆ.

Advertisement

‘ಜಗತ್ತಿನ ಮೊದಲನೇ ಮಹಾಯುದ್ಧ: ಭಾರತೀಯ ಸನ್ನಿವೇಶ’ ಎಂಬ ವಿಷಯದ ಕುರಿತು ನಗರದ ಸಂತ ಅಲೋಶಿಯಸ್‌ ಕಾಲೇಜಿನ ಐಸಿಎಚ್‌ಆರ್‌ ಸಭಾಂಗಣದಲ್ಲಿ ಹೊಸದಿಲ್ಲಿಯ ಕೌನ್ಸೆಲ್‌ ಆಫ್‌ ಹಿಸ್ಟೊರಿಕಲ್‌ ರಿಸರ್ಚ್‌ ಸಹಯೋಗದೊಂದಿಗೆ ಆಯೋಜಿಸಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಇತಿಹಾಸ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವಾಗ ಜನತೆ ನೆನೆಯುವುದು ದೇವರು ಹಾಗೂ ಯೋಧರನ್ನು. ಯೋಧರು ತ್ಯಾಗದ ಫಲವಾಗಿ ನಾವು ಇಂದು ನೆಮ್ಮದಿಯ ದಿನಗಳನ್ನು ಕಾಣುವಂತಾಗಿದೆ ಎಂದರು.

1ನೇ ಜಾಗತಿಕ ಮಹಾಯುದ್ಧದಲ್ಲಿ ಸುಮಾರು 15 ಲಕ್ಷ ಭಾರತೀಯ ಯೋಧರು ಪಾಲ್ಗೊಂಡಿದ್ದರು. ಆಗ ನಮ್ಮನ್ನು ಆಳುತ್ತಿದ್ದವರ ಪರವಾಗಿ ಭಾರತೀಯ ಯೋಧರು ಹೋರಾಡಿ ಪ್ರಾಣ ಅರ್ಪಿಸಿದ್ದರು. 72,000ಕ್ಕೂ ಅಧಿಕ ಮಂದಿ ಅಸುನೀಗಿದ್ದರು. 67,000ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದರು. ಯುದ್ಧ ನಡೆದು ಇದೀಗ ಶತಮಾನ ಕಳೆದಿದೆ. ಇತಿಹಾಸವಾಗಿ ನಮ್ಮ ಮುಂದೆ ಉಳಿದಿದೆ. ಪ್ರಥಮ ವಿಶ್ವ ಯುದ್ಧದಲ್ಲಿ ಅಂದು ಮೈಸೂರು ಪ್ರಾಂತವಾಗಿ ಗುರುತಿಸಿಕೊಂಡಿದ್ದ ಕರ್ನಾಟಕದ ಯೋಧರ ಪಾತ್ರವೂ ಸ್ಮರಣೀಯ ಎಂದು ಏರ್‌ ಮಾರ್ಶಲ್‌ ಕೆ.ಸಿ. ಕಾರಿಯಪ್ಪ ಪ್ರಥಮ ವಿಶ್ವ ಯುದ್ಧದ ಇತಿಹಾಸವನ್ನು ಮೆಲುಕು ಹಾಕಿದರು. ಇನ್ನೋರ್ವ ಮುಖ್ಯ ಅತಿಥಿ ಏರ್‌ ಕಮಾಡೋರ್‌ ಸಿ.ಕೆ. ಕುಮಾರ್‌ ಅವರು ಮಾತನಾಡಿ, ಯೋಧರ ತ್ಯಾಗ, ಬಲಿದಾನವನ್ನು ಎಂದೂ ಮರೆಯಬಾರದು ಎಂದರು.

ತಪ್ಪುಗಳು ಮರುಕಳಿಸದಿರಲಿ
ಸಂತ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ವಂ| ಪ್ರವೀಣ್‌ ಮಾರ್ಟಿಸ್‌ ಮಾತನಾಡಿ, ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ಎಚ್ಚರಿಕೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಅಲೋಸಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ವಂ| ಡಾ| ಡೈನೇಶಿಯಸ್‌ ವಾಸ್‌ ಮಾತನಾಡಿ, ಯುದ್ಧದಲ್ಲಿ ಯೋಧರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಮಗೆ ಉಜ್ವಲವಾದ ಈ ದಿನವನ್ನು ನೀಡಿದ್ದಾರೆ. ಅದನ್ನು ನಾವು ಕಾಪಾಡಿಕೊಳ್ಳಬೇಕು ಎಂದರು. ಕಾಲೇಜಿನ ಕುಲಸಚಿವ ಡಾ| ಎ.ಎಂ. ನರಹರಿ, ಡಾ| ಆಲ್ವಿನ್‌ ಡೇಸಾ, ವಿದ್ಯಾರ್ಥಿ ಸಂಯೋಜಕಿ ವಿದ್ಯಾಶ್ರೀ ಪಾಟೀಲ್‌ ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ವಿಶಾನ್ಜ್ ಪಿಂಟೊ ಸ್ವಾಗತಿಸಿದರು. ಡಾ| ಡೆನ್ನಿಸ್‌ ಫೆರ್ನಾಂಡೀಸ್‌ ವಂದಿಸಿದರು. ಜೆನಿಸ್‌ ಗೋವಿಯಸ್‌ ನಿರೂಪಿಸಿದರು.

Advertisement

ದೇಶ ಸೇವೆಗೆ ಅವಕಾಶ
ಸೇನೆಗೆ ಸೇರ್ಪಡೆ ದೇಶಸೇವೆಗೆ ಒಂದು ಉತ್ತಮ ಅವಕಾಶ. ಸೇನೆಯಲ್ಲಿ ಅನೇಕ ವಿಭಾಗಗಳಿದ್ದು ಯುವಜನತೆ ಇದರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು ಸೇವೆ ನೀಡಬಹುದಾಗಿದೆ. ಈ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ದೇಶ ಸೇವೆ ಮಾಡಿದಂತಾಗುತ್ತದೆ. ಯೋಧರ ಸೇವೆ ಉದಾತ್ತವಾದುದು ಮತ್ತು ಅದು ಒಂದಲ್ಲಾ ಒಂದು ರೀತಿಯಲ್ಲಿ ಗುರುತಿಸಲ್ಪಡುತ್ತದೆ ಎಂದು ಏರ್‌ ಕಮಾಡೋರ್‌ ಸಿ.ಕೆ. ಕುಮಾರ್‌ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next