Advertisement
ಗೋಕುಲದ ರೇವಡಿಹಾಳ ರಸ್ತೆಯ ಬಸವಂತಪ್ಪ ಹೊಸಮನಿ ಬಂಧುಗಳ ಹೊಲದಲ್ಲಿ ಸ್ಥಳೀಯ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ಒಂದು ತಿಂಗಳ ಕಾಲ ಆಯೋಜಿಸಲಾದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಧೂಪ ಹಾಕುವ ಮೂಲಕ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಜಗತ್ತಿನಲ್ಲಿ ಇಂದು ಎರಡು ಸೂರ್ಯಗಳಿವೆ. ಒಂದು ಭೌತಿಕ ಶರೀರಕ್ಕೆ ಬೇಕಾದ ಆಕಾಶದಿಂದ ಉದಯಿಸುವ ಭೌತ ಸೂರ್ಯ. ಇನ್ನೊಂದು ಮಾನವನ ಅಂತರಂಗ ಶುದ್ಧಿಗಾಗಿ ಅವಶ್ಯವಾದ ಜ್ಞಾನ ಸೂರ್ಯ. ಸಿದ್ದೇಶ್ವರ ಶ್ರೀಗಳು ನಾಡಿನ ಜ್ಞಾನ ಸೂರ್ಯರಾಗಿದ್ದು, ಅವರ ಆಗಮನ ಇಡೀ ನಾಡಿಗೆ ಚೈತನ್ಯ ತುಂಬುತ್ತದೆ. ಅವರು ಜಗತ್ತಿನ ಬಹುದೊಡ್ಡ ತತ್ವಜ್ಞಾನಿಗಳು ಹಾಗೂ ಭಾರತದ ಋಷಿಮುನಿಗಳು, ಮಹಾತತ್ವಜ್ಞಾನಿಗಳ ಸಾಕಾರಮೂರ್ತಿ ಆಗಿದ್ದಾರೆ. ಅವರ ಪ್ರತಿ ಸಂದೇಶವು ಜಗತ್ತಿನ ಪ್ರತಿ ತತ್ವಜ್ಞಾನಿಗಳ ಮಾತಾಗಿದೆ ಎಂದರು.
ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಮಾತನಾಡಿ, ಬೇಕು ಎಂಬುದಕ್ಕಿಂತ ಬೇಡ ಎನ್ನುವುದನ್ನು ನಾವು ಮೊದಲು ಕಲಿಯಬೇಕಾಗಿದೆ. ಬೇಕು ಬೇಕು ಎನ್ನುತ್ತ ಸಾಗಿದರೆ ಅದು ವಿನಾಶದತ್ತ ಸಾಗುತ್ತದೆ. ಈ ಭೂಮಿಯಲ್ಲಿ ಜಲ, ಅನ್ನ, ಸುಭಾಷಿತ ರತ್ನಗಳಾಗಿದ್ದು, ಅವನ್ನು ವ್ಯರ್ಥ ಮಾಡಬೇಡಿ. ಇವುಗಳಿಂದ ವಂಚಿತರಾಗಬೇಡಿರಿ ಎಂದರು.
ಗೋಕುಲ ದಯಾನಂದ ಆಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಅಕ್ಕಿಹೊಂಡ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಗದಗ ಶ್ರೀ ಶಿವಾನಂದ ಬೃಹನ್ಮಠದ ನೂತನ ಪೀಠಾಧಿಪತಿ ಮಜ್ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯ ಜನನ-ಮರಣದಿಂದ ಮುಕ್ತನಾಗಬೇಕಾದರೆ ಸಂತರ ಆಶೀರ್ವಾದ ಪಡೆಯಬೇಕು. ಅವರ ಪ್ರವಚನ ಕೇಳಬೇಕು. ಆಧ್ಯಾತ್ಮ ಸಂಪತ್ತು ಪಡೆಯಬೇಕು. ಅಜ್ಞಾನ ದೂರಮಾಡಿ ಸದ್ವಿಚಾರ, ಭಗವಂತನ ಚಿಂತನೆ ಮಾಡಬೇಕು. ಚಂಚಲ ಮನಸ್ಸು ನಿಯಂತ್ರಿಸಲ ಸತ್ಸಂಗ, ಮಹಾತ್ಮರ ಪ್ರವಚನ ಆಲಿಸುವುದು ಮುಖ್ಯ ಎಂದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಗದಗ ಶ್ರೀ ಶಿವಾನಂದ ಬೃಹನ್ಮಠದ ಮಜ್ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ, ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಹುಲ್ಯಾಳ ಶ್ರೀ ಮಲ್ಲಿಕಾರ್ಜುನ ಗುರುದೇವ ತಪೋವನದ ಹರ್ಷಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಪಿ.ಡಿ. ಪಾಟೀಲ, ರಾಜಣ್ಣ ಕೊರವಿ ಮೊದಲಾದವರಿದ್ದರು.
ರಾಜೇಶ್ವರಿ ಪಾಟೀಲ ಪ್ರಾರ್ಥಿಸಿದರು. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ ಸ್ವಾಗತಿಸಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ವಂದಿಸಿದರು.
ಶಬ್ದಗಳು ತನ್ನದೆಯಾದ ಮಹತ್ವ ಪಡೆದಿವೆ. ಅದರ ಜೊತೆ ಅರ್ಥ ಜೋಡಿಸಿದರೆ ಭಾಷೆ ಆಗುತ್ತದೆ. ಅದಕ್ಕೆ ಭಾವನೆಗಳನ್ನು ಜೋಡಿಸಿದರೆ ಅದು ಬದುಕಾಗುತ್ತದೆ. ಆ ಬದುಕಿನ ಸವಿ ಸವಿಯಬೇಕೆಂದರೆ ಸಿದ್ದೇಶ್ವರ ಶ್ರೀಗಳ ವಾಣಿಯಿಂದ ಮಾತ್ರ ಸಾಧ್ಯ. –ಬಸವರಾಜ ಬೊಮ್ಮಾಯಿ, ಗೃಹ ಸಚಿವ