ಪಡುಬಿದ್ರಿ: ಗುತ್ತಿನ ಗುತ್ತಿನಾರ್ ದೈವದ ಮಾತಿಗೆ ಅನುಗುಣವಾಗಿ ಕ್ರಿಯಾಶೀಲನಾಗಿರಲು ಆತನ ಕುಟುಂಬಿಕರ, ಪರಿವಾರದ ತ್ಯಾಗವೂ ಬಹಳಷ್ಟಿದೆ ಎಂದು ಆಗಮ ಶಾಸ್ತ್ರಜ್ಞ ವೇ| ಮೂ| ಪಂಜ ಭಾಸ್ಕರ ಭಟ್ ಹೇಳಿದರು.
ಅವರು ಮಾ. 12ರಂದು ಪಡುಬಿದ್ರಿಯ ಅವರಾಲು ಕಂಕಣಗುತ್ತು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಅವರಾಲು ಗ್ರಾಮಸ್ಥರು, ಕಂಕಣಗುತ್ತು ಕುಟುಂಬಸ್ಥರು ಸಾಕ್ಷೀಭೂತರಾಗಿ ದೈವ ಸನ್ನಿಧಾನದಲ್ಲಿ ಅವರಾಲು ಕಂಕಣಗುತ್ತು ಕುಟುಂಬದ ಕೃಷ್ಣ ಶೆಟ್ಟಿ ಅವರ ಗಡಿಪ್ರದಾನ ಸಮಾರಂಭದ ಧರ್ಮಸಭೆಯಲ್ಲಿ ಭಾಗವಹಿಸಿ ಆಶೀರ್ವಚಿಸಿದರು.
ಪಡುಬಿದ್ರಿ ಬೀಡು ಚಂದಯ್ಯ ಅರಸು ಕಿನ್ಯಕ್ಕ ಬಲ್ಲಾಳರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಡಿ ದೀಕ್ಷೆಯ ಮಹತ್ವ ವಿವರಿಸಿದ ಜಾನಪದ ವಿದ್ವಾಂಸ, ಡಾ| ವೈ.ಎನ್. ಶೆಟ್ಟಿ, ದೈವಸ್ಥಾನದಲ್ಲಿ ಜವಾಬ್ದಾರಿ ಕಾಯಕ ಹೊತ್ತಿರುವವರೇ ಗುತ್ತಿನಾರರಾಗಿದ್ದು, ಈ ವ್ಯವಸ್ಥೆ ತುಳುನಾಡಿಗೆ ಅತ್ಯಂತ ಪ್ರಶಸ್ತವಾಗಿದೆ. ಇದು ನಮ್ಮ ಬದುಕಿನ ಸಂಸ್ಕಾರವಾಗಿರಬೇಕು ಎಂದರು. ನೂತನ ಗುತ್ತಿನಾರ್ ಕೃಷ್ಣ ಶೆಟ್ಟಿ ಮಾತಾಡಿದರು.
ಬೈಲು ಏತಮೊಗರುಗುತ್ತು ಸದಾಶಿವ ಯಾನೆ ಜಯ ಶೆಟ್ಟಿ, ಬಾಲಾನ ಬಾಲು ಪೂಜಾರಿ ವಂಶಸ್ಥ ಸುರೇಶ್ ಪೂಜಾರಿ, ಕೃಷ್ಣರಾಜ ಎನ್. ಭಟ್ ಮೊದಲಾದವರು ಉಪಸ್ಥಿತರಿದ್ದರು. ದಿವಾಕರ ಸಾಮಾನಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.