Advertisement

ನವಜೋತ್‌ರನ್ನು ಕಿತ್ತು ಬಿಸಾಕಿ : ಪಂಜಾಬ್‌ ಅಸೆಂಬ್ಲಿಯಲ್ಲಿ ಕೋಲಾಹಲ

10:07 AM Feb 18, 2019 | udayavani editorial |

ಹೊಸದಿಲ್ಲಿ : ಪುಲ್ವಾಮಾ ಜಿಲ್ಲೆಯ ಆವಂತಿಪೋರಾ ದಲ್ಲಿ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಸಂಘಟನೆ ನಡೆಸಿದ್ದ ಉಗ್ರ ದಾಳಿಗೆ ಸಂಬಂಧಿಸಿ ಪಾಕ್‌ ಪರ ಪ್ರತಿಕ್ರಿಯೆ ನೀಡಿ ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಗುರಿಯಾಗಿರುವ ಕಾಂಗ್ರೆಸ್‌ ಶಾಸಕ, ಸಚಿವ ನವಜೋತ್‌ ಸಿಂಗ್‌ ಸಿಧು ಅವರನ್ನು ಹುದ್ದೆಯಿಂದ ಮಾತ್ರವಲ್ಲದೆ ಪಕ್ಷದಿಂದಲೇ ಕಿತ್ತು ಹಾಕಬೇಕೆಂಬ ಆಗ್ರಹ ಇಂದು ಪಂಜಾಬ್‌ ವಿಧಾನಸಭೆಯಲ್ಲಿ ಬಲವಾಗಿ ಕೇಳಿ ಬಂತು. 

Advertisement

ಆರಂಭದಲ್ಲಿ ತನ್ನ ವಿರುದ್ಧದ ಆರೋಪಗಳಿಗೆ ಕಲ್ಲು ಮುಖದ ಮೌನ ಪ್ರದರ್ಶಿಸಿದ ಸಿಧು, ಅನಂತರ ಸಿಟ್ಟಿನಿಂದಲೇ ಪ್ರತ್ಯುತ್ತರ ನೀಡಲು ಮುಂದಾದಾಗ ಅವರ ವಿರುದ್ಧದ ಪ್ರತಿಭಟನೆ, ಘೋಷಣೆಗಳು ಮುಗಿಲು ಮುಟ್ಟಿದವು. 

ಸಿಧು ಅವರು ಪುಲ್ವಾಮಾ ದಾಳಿ ಬಳಿಕ ಪ್ರತಿಕ್ರಿಯೆ ನೀಡುತ್ತಾ, “ಒಬ್ಬ ಉಗ್ರ ನಡೆಸಿದ ದುಷ್ಕೃತ್ಯಕ್ಕೆ ಇಡಿಯ ಒಂದು ದೇಶವನ್ನೇ ಹೊಣೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು. ಇದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ, ಟೀಕೆ, ಪ್ರತಿರೋಧ ವ್ಯಕ್ತವಾಗಿತ್ತು. 

ಭಾರತದ ಮೇಲೆ ದಾಳಿ ನಡೆಸುವ ಉಗ್ರರಿಗೆ ಪಾಕಿಸ್ಥಾನ ರಕ್ಷಣೆ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಭಾರತ ಆರೋಪಿಸುತ್ತಿದ್ದಂತೆಯೇ ಸಿಧು, ‘ಭಯೋತ್ಪಾದಕರ ಕೃತ್ಯಗಳಿಗೆ ಪಾಕಿಸ್ಥಾನವನ್ನು ದೂರಬಾರದು’ ಎಂದು ಹೇಳಿದ್ದರು. 

ಪುಲ್ವಾಮಾ ಹೇಳಿಕೆಯನ್ನು ಅನುಸರಿಸಿ ಸಿಧು ಅವರನ್ನು ಮೊತ್ತ ಮೊದಲಾಗಿ ಕಪಿಲ್‌ ಶರ್ಮಾ ಅವರು ತಮ್ಮ  ಜನಪ್ರಿಯ ಕಪಿಲ್‌ ಕಾಮಿಡಿ ಶೋ ದಿಂದ ಕಿತ್ತು ಹಾಕಿದ್ದರು. 

Advertisement

ಕರ್ತಾರ್‌ಪುರ ಕಾರಿಡಾರ್‌ ಯೋಜನೆಗೆ ಪಾಕ್‌ ಕಡೆಯಿಂದ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಹೋಗಿದ್ದಾಗಲೂ ಸಿಧು ಪಾಕ್‌ ನಲ್ಲಿ ತಾವೆಷ್ಟು ಜನಪ್ರಿಯ ವ್ಯಕ್ತಿ ಎಂಬುದನ್ನು ಬಿಂಬಿಸಿಕೊಂಡಿದ್ದರು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು, “ಸಿಧು ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ’ ಎಂದು ಪ್ರಧಾನಿ ಮೋದಿಗೆ ಟಾಂಗ್‌ ನೀಡುವ ರೀತಿಯಲ್ಲಿ ಹೇಳಿದ್ದರು. 

ಇದಕ್ಕೂ  ಮೊದಲು ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಖಾಸಗಿ ಆಹ್ವಾನ ಪಡೆದಿದ್ದ ಸಿಧು, ಆ  ಕಾರ್ಯಕ್ರಮದಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಾಜ್ವಾ ಅವರನ್ನು ತಬ್ಬಿಕೊಂಡು ವಿವಾದ ಸೃಷ್ಟಿಸಿದ್ದರು.

ಪಂಜಾಬ್‌ ಅಸೆಂಬ್ಲಿಯಲ್ಲಿ ಇಂದು ಬಿಜೆಪಿ ಮತ್ತು ಅಕಾಲಿ ದಳ ಶಾಸಕರು, ಸಚಿವ ಸಿಧು ಕುಳಿತಿರುವಲ್ಲಿಗೆ ತೆರಳಿ ಅವರನ್ನು ಸಚಿವ ಪದದಿಂದ ಕಿತ್ತು ಹಾಕುವಂತೆ ಘೋಷಣೆ ಕೂಗಿದರು. 

ಪ್ರಕಾಶ್‌ ಸಿಂಗ್‌ ಬಾದಲ್‌ ಅವರು “ಸಿಧು ಅವರನ್ನು ಕಾಂಗ್ರೆಸ್‌ ಪಕ್ಷದಿಂದಲೇ ಕಿತ್ತು ಹಾಕಬೇಕು; ಪುಲ್ವಾಮಾ ವಿಷಯದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಅವರ ವಿರುದ್ಧ ಕೇಸು  ದಾಖಲಾಗಬೇಕು’ ಎಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next