Advertisement

ನಮ್ಮ ಫೇಸ್ ಬುಕ್ ಅಕೌಂಟಲ್ಲೂ ಸಖತ್‌ ಕಾಸಿದೆ !

06:00 AM Jul 16, 2018 | |

ಒಂದು ಗುಂಪಲ್ಲಿರುವ ನೂರು ಜನ ಅಂದುಕೊಂಡರೆ, ಅವರಲ್ಲಿ 90 ಮಂದಿಗೆ ಫೇಸ್‌ಬುಕ್‌/ವಾಟ್ಸಾಪ್‌ ಅಕೌಂಟ್‌ ಇರುತ್ತದೆ. ಈ ಜಾಲತಾಣಗಳನ್ನು ವರ್ಷಗಳಿಂದಲೂ ಜನ ಬಿಟ್ಟೂ ಬಿಡದೆ ಉಪಯೋಗಿಸುತ್ತಿದ್ದಾರೆ. ಆದರೆ ಅಕೌಂಟ್‌ ಹೊಂದಿರುವ ಒಬ್ಬನೂ ಫೇಸ್‌ಬುಕ್‌ಗಾಗಲಿ, ವಾಟ್ಯಾಪ್‌ಗಾಗಲಿ ನಯಾಪೈಸೆಯ ಶುಲ್ಕ ಕೊಡುತ್ತಿಲ್ಲ. ಹೀಗಿದ್ದರೂ ಆ ಜಾಲತಾಣಗಳು ಕೋಟ್ಯಂತರ ಲಾಭ ಮಾಡುತ್ತಿವೆ. ಅವುಗಳಿಗೆ ದುಡ್ಡು ಎಲ್ಲಿಂದ ಬರುತ್ತೆ? ಜಾಲತಾಣಗಳ ಸಂಪಾದನೆಯ ಮೂಲ ಯಾವುದು?

Advertisement

ಕೆಲವು ವರ್ಷಗಳ ಹಿಂದೆ ಟಿವಿ ಚಾನೆಲ್‌ಗ‌ಳು ಒಂದರ ಬೆನ್ನಿಗೆ ಒಂದು ತಲೆಯೆತ್ತುತ್ತಿ¨ªಾಗ ಜನರಲ್ಲಿ ಇದ್ದ ಪ್ರಶ್ನೆ ಒಂದೇ; ಈ ಟಿವಿ ಚಾನೆಲ್‌ಗ‌ಳು ಹೇಗೆ ದುಡ್ಡು ಮಾಡುತ್ತವೆ? ಅವುಗಳಿಗೆ ದುಡ್ಡು ಎಲ್ಲಿಂದ ಬರುತ್ತೆ? ನಾವು ಕೊಡುವ ನೂರಿನ್ನೂರು ರೂಪಾಯಿ ಕೇಬಲ… ದುಡ್ಡಿಂದಲೇ ಅವರು ಬದುಕ್ತಾರಾ ? ಹಾಗೆ ಬದುಕೋಕೆ ಸಾಧ್ಯವಾ? ಕಾಲ ಕಳೆದಂತೆ, ಜಾಹೀರಾತೇ ಅವರ ಬಂಡವಾಳ ಅನ್ನೋದು ಜನಕ್ಕೆ ತಿಳೀತು. ಈಗಂತೂ ಎಲ್ಲರ ಬಾಯಲ್ಲೇ ಟಿವಿ ಚಾನೆಲ್‌ಗ‌ಳ ಟಿಆರ್‌ಪಿ ಎಷ್ಟು ಎಂಬ ಲೆಕ್ಕಾಚಾರವೂ ಸಿಗತ್ತೇನೋ! ಈ ಮಟ್ಟಿಗೆ ಟಿವಿ ಚಾನೆಲ್‌ಗ‌ಳ ಅಂತರಂಗದ ಆದಾಯದ ಹರಿವಿನ ಮೂಲ ಯಾವುದೆಂಬ ಸಂಗತಿಯನ್ನು ಜನ  ಅರಿತುಕೊಂಡಿದ್ದಾರೆ. 

ಆದರೆ ಈಗಿನ ಹಾಟ್‌ ಟಾಪಿಕ್‌ ಏನು ಅಂದರೆ, ಸೋಷಿಯಲ್ ಮೀಡಿಯಾಗಳು ಹೇಗೆ ದುಡ್ಡು ಮಾಡುತ್ತವೆ? ಅವು ಕೋಟ್ಯಂತರ ಜನರ ಡೇಟಾ ಎಲ್ಲ ಸಂಗ್ರಹಿಸಿಟ್ಟುಕೊಳ್ಳಬೇಕು, ಆಪ್‌ಗ್ಳನ್ನು ಡೆವಲಪ್‌ ಮಾಡಬೇಕು, ಸಾವಿರಾರು ಜನರಿಗೆ ಸಂಬಳ ಕೊಡಬೇಕು… ಇಷ್ಟೆಲ್ಲ ಮಾಡಲು ಅವರಿಗೆ ಕಾಸು ಎಲ್ಲಿಂದ ಬರುತ್ತೆ? ಅದನ್ನು ಹೇಗೆ ಹುಟ್ಟಿಸಿಕೊಳ್ಳುತ್ತಾರೆ? ಸಾಮಾಜಿಕ ಚಾಲತಾಣಗಳನ್ನು ಇಡೀ ದಿನ ಬಳಸುವ ನಾವು ಒಂದು ರೂಪಾಯಿಯನ್ನೂ ಫೇಸ್ಬುಕ್ಕಾಗಲಿ, ಟ್ವಿಟರ್‌ಗಳಾಗಲಿ ಕೊಡೋದೇ ಇಲ್ಲ. ಆದರೂ ಹತ್ತು ವರ್ಷಗಳಿಂದಲೂ ಅವರು ಹೇಗೆ ಇನ್ನೂ ಯಶಸ್ವಿಯಾಗಿ ಸಂಸ್ಥೆ ನಡೆಸುತ್ತಿದ್ದಾರೆ? ಇಷ್ಟನ್ನೂ ಅವರು ಫ್ರೀಯಾಗಿ ಮಾಡುತ್ತಿದ್ದಾರೆಯೇ?

ಈ ಪ್ರಶ್ನೆಗಳು ಫೇಸ್‌ಬುಕ್‌ನಲ್ಲಿ ಒತ್ತುವ, ಪೋಸ್ಟ್‌ ಮಾಡುವ ಪ್ರತಿಯೊಬ್ಬನಿಗೂ ಕಾಡುತ್ತಿರುತ್ತವೆ. ಹಾಗೆ ಯೋಚಿಸುತ್ತಲೇ ಫೇಸ್‌ಬುಕ್‌ ಓಪನ್‌ ಮಾಡಿ ಯಾರದೋ ಕಾಮೆಂಟ್‌ಗೆ ಲೈಕ್‌ ಒತ್ತುತ್ತಾನೆ. ಅಲ್ಲೇ ಮೇಲೆ ಒಂದು ಜಾಹೀರಾತು ಇರುತ್ತದೆ. ಅದರ ಮೇಲೆ ಒಮ್ಮೆ ಕಣ್ಣು ಹಾಯಿಸಿ ಸೊðàಲ… ಮಾಡುತ್ತಾನೆ. ಅಲ್ಲಿಗೆ ಫೇಸ್‌ಬುಕ್‌ಗೆ ಈ ಬಳಕೆದಾರನಿಂದ ಸಲ್ಲಬೇಕಾದ ಆ ದಿನದ ಕಾಸು ಸಿಕ್ಕಿರುತ್ತದೆ!

ನಿಜ. ಇದೇ ಸೋಷಿಯಲ್ ಮೀಡಿಯಾಗಳ ARPU ಯುದ್ಧ. ಇದೇನಿದು ARPU ಎಂದು ನೀವು ಕೇಳಬಹುದು. ಒಬ್ಬ ಬಳಕೆದಾರನಿಂದ ಸರಾಸರಿ ಫೇಸ್‌ಬುಕ್‌ ಗಳಿಸುವ ಮೊತ್ತ ಇದು. 2016ರಲ್ಲಿ, ಅಮೆರಿಕ ಹಾಗೂ ಕೆನಡಾದಲ್ಲಿ ಫೇಸ್‌ಬುಕ್‌ ಒಬ್ಬ ಬಳಕೆದಾರನಿಂದ ಗಳಿಸುತ್ತಿದ್ದದ್ದು ಪ್ರತಿ ದಿನಕ್ಕೆ 19 ಡಾಲರ್‌. ಅಂದರೆ 1,200 ರೂ. ಫೇಸ್‌ಬುಕ್‌ ಬಳಸುವ ಬಹುತೇಕ ಜನರು ಇದರ ಅರ್ಧದಷ್ಟನ್ನೂ ದಿನಕ್ಕೆ ದುಡಿಯವುದಿಲ್ಲ. ಆದರೆ ನಮ್ಮ ಖಾಲಿ ಸಮಯವನ್ನೇ ಫೇಸ್‌ಬುಕ್‌  ಈ ಮಟ್ಟಿಗೆ ಬಂಡವಾಳ ಮಾಡಿಕೊಂಡಿದೆ.

Advertisement

ಅಂದರೆ, ನಾವು ಸೋಷಿಯಲ… ಮೀಡಿಯಾದಲ್ಲಿ ಒತ್ತುವ ಒಂದೊಂದು ಲೈಕೂ ನಾಣ್ಯವಾಗಿ ಬದಲಾಗಿ ಫೇಸ್‌ಬುಕ್‌ನ  ಬ್ಯಾಂಕ್‌ ಖಾತೆಯೊಳಗೆ ಬಿದ್ದಿರುತ್ತವೆ. ಈ ಅARPU ಹಾಗೂ DAU- -(ಡೈಲಿ ಆ್ಯಕ್ಟೀವ್‌ ಯೂಸರ್‌) ಹಾಗೂ MAN (ಮಂತ್ಲಿ ಆ್ಯಕ್ಟೀವ್‌ ಯೂಸರ್‌) ಎಂಬುದು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಹೊಸ ಪದಗುತ್ಛಗಳು. ಟಿವಿ ಚಾನೆಲ್‌ಗ‌ಳಲ್ಲಿ ಟಿಆರ್‌ಪಿ ಇದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಈ ಮಾನದಂಡಗಳು ಕೆಲಸ ಮಾಡುತ್ತವೆ. ಇದರ ಜೊತೆಗೆ ಜಾಹೀರಾತು ಟಾರ್ಗೆಟಿಂಗ್‌, ಬಳಕೆದಾರರ ಡೇಟಾ ವಿಶ್ಲೇಷಣೆಯೂ ಪ್ರಮುಖ ಪಾತ್ರ ವಹಿಸುತ್ತದೆ.

2017ರ ಮೊದಲ ತ್ತೈಮಾಸಿಕದಲ್ಲೇ ಫೇಸ್‌ಬುಕ್‌  800 ಕೋಟಿ ಡಾಲರ್‌ ಆದಾಯವನ್ನು ದಾಖಲಿಸಿದೆ ಅಂದರೆ, ಸೋಷಿಯಲ್ ಮೀಡಿಯಾದ ಶಕ್ತಿ ನಿಮಗೆ ಅರ್ಥವಾದೀತು. ಈ ಪೈಕಿ ಶೇ.90ರಷ್ಟು, ಜಾಹೀರಾತಿನಿಂದ ದೊರಕಿರುವ ಆದಾಯವೇ. ಇತರ ಮೂಲದ ಆದಾಯ ತೀರಾ ನಗಣ್ಯ. ಫೇಸ್‌ಬುಕ್‌  200 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದರೆ, ಯೂಟ್ಯೂಬ್ 150 ಕೋಟಿ ಬಳಕೆದಾರರನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಐರೋಪ್ಯ ಹಾಗೂ ಅಮೆರಿಕವನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ಏರಿಕೆಯಾಗುತ್ತಲೇ ಇದೆ.

ಹೊಸ ಜಾಹೀರಾತು ಟ್ರೆಂಡ್‌
ಸೋಷಿಯಲ್ ಮೀಡಿಯಾಗಳು ಜನರಲ್ಲಿ ತಮ್ಮ ಅಸ್ತಿತ್ವವನ್ನು ಸಾರಿಕೊಳ್ಳಲು ಹೊಸ ವೇದಿಕೆಯನ್ನು ಒಂದೆಡೆ ಸೃಷ್ಟಿಸಿದರೆ, ಅವರ ಅಸ್ತಿತ್ವದಿಂದಲೇ ದುಡ್ಡು ಮಾಡಿಕೊಳ್ಳುವ ಅವಕಾಶಕ್ಕಾಗಿ ಜಾಹೀರಾತು ಕಂಪನಿಗಳು ಹೊಂಚು ಹಾಕಿ ಕುಳಿತಿವೆ. ಟಿವಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡುವ ಕಾಲ ಈಗ ಹಳೆಯದಾಯಿತು. ಈಗೇನಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಉತ್ಪನ್ನವು ಜನರಿಗೆ ಕಾಣುವಂತೆ ಮಾಡಬೇಕಿದೆ. ಸೋಷಿಯಲ್ ಮೀಡಿಯಾ, ಜಾಹೀರಾತು, ಟಿವಿ ಹಾಗೂ ಪ್ರಿಂಟ್‌ ಮೀಡಿಯಾಗಳಲ್ಲಿನ ಜಾಹೀರಾತಿಗಿಂತ ಹೆಚ್ಚು ಪರಿಣಾಮಕಾರಿ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ಮೂಲಕ ಯಾರು ನಮ್ಮ ಉತ್ಪನ್ನವನ್ನು ಖರೀದಿಸುತ್ತಾರೋ ಅವರಿಗೆ ಮಾತ್ರವೇ ಜಾಹೀರಾತು ತೋರಿಸಬಹುದು.

ಟಿವಿ, ಫೇಸ್‌ಬುಕ್‌
ಅಂದರೆ, ಯಾವುದೋ ಒಂದು ಮಹಿಳೆಯರ ಕ್ರೀಮ್ ಅನ್ನು ಮಹಿಳೆಯರಿಗೆ ಮಾತ್ರ ತೋರಿಸಿದರೆ ಪರಿಣಾಮಕಾರಿ. ಅದನ್ನು ಫೇಸ್‌ಬುಕ್‌  ಮೂಲಕ ಮಾಡಬಹುದು. ಆದರೆ ಟಿವಿ ಹಾಗೂ ಇತರ ಮೀಡಿಯಾಗಳಲ್ಲಿ ಸಾಧ್ಯವಿಲ್ಲ. ಅಷ್ಟೇ ಅಲ್ಲ,ಫೇಸ್‌ಬುಕ್‌ ಜಾಹೀರಾತು ಅತ್ಯಂತ ಕಡಿಮೆ ವೆಚ್ಚದ್ದು. ಟಿವಿಯಲ್ಲಿ ಒಂದು ಚಾನೆಲ್‌ನಲ್ಲಿ ಒಟ್ಟು ವೀಕ್ಷಕರ ಸಂಖ್ಯೆಯ ಆಧಾರದಲ್ಲಿ ದರ ನಿಗದಿಯಾಗುತ್ತದೆ. ಆದರೆ ಫೇಸ್‌ಬುಕ್‌ನಲ್ಲಿ ಯಾವ ಜನ ಸಮೂಹವನ್ನು ತಲುಪಲು ಬಯಸುತ್ತೇವೆ ಎಂಬುದರ ಆಧಾರದಲ್ಲಿ ಜಾಹೀರಾತು ದರ ನಿಗದಿಯಾಗುತ್ತದೆ. ಹೀಗಾಗಿ ಕಡಿಮೆ ಹಣದಲ್ಲಿ ಹೆಚ್ಚು ಜನರನ್ನು ಮತ್ತು ಸರಿಯಾದ ಜನರನ್ನು ತಲುಪಬಹುದು.

ಇದೇ ಕಾರಣಕ್ಕೆ ಪ್ರತಿಯೊಂದು ಕಂಪನಿಯೂ ತನ್ನದೇ ಸೋಷಿಯಲ್ ಮೀಡಿಯಾ ತಂಡವನ್ನು ಹೊಂದಿದೆ. ಈ ತಂಡವು ಸೋಷಿಯಲ… ಮೀಡಿಯಾದಲ್ಲಿ ಪ್ರತಿ ಉತ್ಪನ್ನವನ್ನೂ ಯಾವ ವರ್ಗದ ಜನರಿಗೆ ತಲುಪಿಸಬೇಕು, ಸಂಸ್ಥೆಯ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯ ಮೂಡಿಸಬೇಕು ಎಂಬುದರಿಂದ ಹಿಡಿದು ಪ್ರತಿ ಅಂಶವನ್ನೂ ನಿರ್ವಹಿಸುತ್ತವೆ.

ವೀಡಿಯೋ ಜಮಾನ
ಜನರಿಗೆ ಓದುವುದಕ್ಕೆ ಪುರಸೊತ್ತಿಲ್ಲ, ಸಹನೆಯೂ ಇಲ್ಲ. ಈಗೇನಿದ್ದರೂ ವೀಡಿಯೋ ಜಮಾನ. ಒಂದು 30 ಸೆಕೆಂಡುಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕ್ರಾಂತಿಯನ್ನೇ ಮಾಡೀತು! ಅದರಲ್ಲೂ ವೀಡಿಯೋ ಜಾಹೀರಾತು ಸೋಷಿಯಲ್ ಮೀಡಿಯಾಗಳಲ್ಲಿ ಜಾದೂ ಮಾಡುತ್ತಿದೆ. ಇನ್ನು ಪಠ್ಯವಾದರೆ ಕೇವಲ 5 ಅಕ್ಷರಗಳು ಸಾಕು! ಇದು ಸದ್ಯ ಜಾಹೀರಾತು ಮಾಧ್ಯಮದಲ್ಲಿ ಓಡುತ್ತಿರುವ ಮಾತು.

ಗಮನಿಸಿದ್ದೀರಾ? ನಿಮ್ಮ ಪ್ರೊಫೈಲ್ ವಿವರ ಪೂರ್ತಿಯಾಗಿಲ್ಲ. ದಯವಿಟ್ಟು ಕಂಪ್ಲೀಟ್ ಮಾಡಿ ಎಂದು ಪದೇ ಪದೇ ಸೋಷಿಯಲ್ ಮೀಡಿಯಾ ಸೈಟ್‌ಗಳು ಕೇಳುತ್ತಿರುತ್ತವೆ. ನೀವು ಇತ್ತೀಚೆಗೆ ನೋಡಿದ ಸಿನಿಮಾ, ಓದಿದ ಪುಸ್ತಕ, ನಿಮ್ಮ ವೈಯಕ್ತಿಕ ವಿವರಗಳು, ಜನ್ಮ ದಿನ ಹಾಗೂ ಸ್ಥಳವನ್ನೆಲ್ಲ ದಾಖಲಿಸುವಂತೆ ಕೇಳುತ್ತಲೇ ಇರುತ್ತವೆ. ಅಷ್ಟೂ ವಿವರವನ್ನು ಕೊಡುವವರೆಗೂ ನಿಮ್ಮನ್ನು ಅದು ತಲೆ ತಿನ್ನುತ್ತಲೇ ಇರುತ್ತದೆ. ಪ್ರತಿ ಬಾರಿ ಲಾಗಿನ್‌ ಆದಾಗಲೂ ಇದೇ ಇದೇ ಪ್ರಶ್ನೆಯನ್ನು ಕೇಳುತ್ತದೆ. ಯಾಕೆ ಫೇಸ್‌ಬುಕ್‌ಗೆ ನಿಮ್ಮ ಮೇಲೆ ಇಷ್ಟು ಆಸಕ್ತಿ ಎಂದು ಎಂದಾದರೂ ಊಹಿಸಿದ್ದೀರಾ? ಕಾರಣ ಇದೆ.

ಈ ಎಲ್ಲ ವಿವರಗಳು, ನಮಗೆ ಯಾವ ಜಾಹೀರಾತು ತೋರಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಇದು ಒಂದು ರೀತಿಯಲ್ಲಿ ನಮ್ಮ ಜಾತಕವನ್ನು ನಾವೇ ಮಾರಿಕೊಂಡ ಹಾಗೆ. ನಮ್ಮ ವಿವರಗಳನ್ನು ಬಳಸಿಕೊಂಡು ನಾವು ಬಳಸುವ ಅಥವಾ ಬಳಸಬಹುದಾದ ಉತ್ಪನ್ನ ಅಥವಾ ಸೇವೆಗಳ ಜಾಹೀರಾತನ್ನು ನಮಗೇ ತೋರಿಸಿ ಸೋಷಿಯಲ್ ಮೀಡಿಯಾ ಸೈಟ್‌ಗಳು ದುಡ್ಡು ಮಾಡಿಕೊಳ್ಳುತ್ತವೆ.

ಇದು ಹೇಗೆಂದರೆ, ಒಬ್ಬ ಬಳಕೆದಾರ ತನ್ನ ಪೊ›ಫೈಲ್‌ನಲ್ಲಿ ಜನ್ಮ ದಿನವನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾನೆ. ಆ ನಂತರ ಸ್ಟಡೀಯಿಂಗ್‌ ಇನ್‌… ಇಂಥ ಕಾಲೇಜು ಎಂದೂ ಬರೆಯುತ್ತಾನೆ. ಇನ್ನೊಂದೆಡೆ ಯಾವುದೋ ಒಂದು ಬುಕ್‌ ಪಬ್ಲಿಶಿಂಗ್‌ ಹೌಸ್‌ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕವನ್ನು ಪ್ರಕಟಿಸಿರುತ್ತದೆ. ಅದರ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಹಾಕುವಾಗ ಕಾಲೇಜಿಗೆ ಹೋಗುವ, ಇಷ್ಟು ವಯಸ್ಸಿನ ವ್ಯಕ್ತಿಗಳಿಗೆ ಈ ಜಾಹೀರಾತನ್ನು ತೋರಿಸಬೇಕು ಎಂದು  ಆ ಪ್ರೊಫೈಲ್‌ ಇರುವ ಬಳಕೆದಾರನನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಇತಿಹಾಸವೇ ದುಡ್ಡು!
ಶಾಲೆ ಕಾಲೇಜುಗಳಲ್ಲಿ ನಾವು ಇತಿಹಾಸದ ಪಠ್ಯವನ್ನು ಓದುವಾಗ ಇದರಿಂದ ನಮಗೆ ಏನು ಲಾಭವಿದೆ? ಆಗಿ ಹೋದ ಟಿಪ್ಪು ಸುಲ್ತಾನನೋ ಅಥವಾ ಇನ್ಯಾವುದೋ ರಾಜನ ಬಗ್ಗೆ ನಾವು ತಿಳಿದು ಮಾಡುವುದೇನಿದೆ ಎಂದು ಗೊಣಗಿರುತ್ತೇವೆ. ಆದರೆ ನಮ್ಮ ಇತಿಹಾಸ ನಮ್ಮನ್ನು ಅಳೆಯುತ್ತದೆ, ತೂಗುತ್ತದೆ. ಕೆಲವು ಬಾರಿ ತೂಕಕ್ಕಿಡುತ್ತದೆ! ಸೋಷಿಯಲ… ಮೀಡಿಯಾದಲ್ಲಿ ಆಗುವುದೂ ಇವೆ. ನಮ್ಮ ಬ್ರೌಸಿಂಗ್‌ ಹಿಸ್ಟರಿ, ನಮ್ಮ ಬ್ಯಾಂಕ್‌ ಅಕೌಂಟಿನ ಬ್ಯಾಲೆನ್ಸ್‌ ಇದ್ದಹಾಗೆ. ಅಲ್ಲಿ ಎಷ್ಟು ಕಾಸಿದೆ, ಯಾವ ರೀತಿಯ ಬ್ಯಾಲೆನ್ಸ್‌ ಇದೆ ಎಂಬುದರ ಮೇಲೆ ನಮ್ಮನ್ನು ಅಳೆಯಲಾಗುತ್ತದೆ.

ಇದನ್ನು ಕುಕೀಗಳು ಎನ್ನಲಾಗುತ್ತದೆ. ಅಂದರೆ ನಾವು ಯುಆರ್‌ಎಲ್  ಬಾರ್‌ನಲ್ಲಿ ನಮೂದಿಸಿದ ಪ್ರತಿ ವೆಬ್‌ಸೈಟಿನ ವಿಳಾಸವೂ ನಮ್ಮ ಬ್ರೌಸರ್‌ನ ಕುಕೀಯಲ್ಲಿ ಶೇಖರವಾಗಿರುತ್ತದೆ. ಇದನ್ನು ಯಾವ ವೆಬ್‌ಸೈಟ್‌ ಬೇಕಾದರೂ ನೋಡಬಹುದು. ಉದಾಹರಣೆಗೆ ನೀವು ಆಗಷ್ಟೇ ಇ-ಕಾಮರ್ಸ್‌ ಸೈಟ್‌ನಲ್ಲಿ  ಜೀನ್ಸ್‌ ಪ್ಯಾಂಟ್‌ ನೋಡಿ ಬಂದಿರುತ್ತೀರಿ. ನಿಮಗೆ ಇಷ್ಟವಾಗಿಲ್ಲ ಎಂದು ಅದನ್ನು ಕ್ಲೋಸ್‌ ಮಾಡಿ ಫೇಸ್‌ಬುಕ್‌ಗೆ  ಬಂದಿರುತ್ತೀರಿ ಎಂದು ಕೊಳ್ಳಿ. ಒಂದೆರಡು ಪೋಸ್ಟ್‌ ನೋಡಿ ಸಾðಲ… ಮಾಡುತ್ತಿದ್ದಂತೆಯೇ, ಯಾವುದೋ ಒಂದು ಇ-ಕಾಮರ್ಸ್‌ ಸೈಟ್ನಲ್ಲಿ ಜೀನ್ಸ್‌ ಪ್ಯಾಂಟಿನದ್ದೇ ಜಾಹೀರಾತು ನಿಮ್ಮ ಕಣ್ಣಿಗೆ ಕಾಣಿಸುತ್ತದೆ!

ಇದು ಜ್ಯೋತಿಷಿಗಳು ನಿಮ್ಮ ಮುಖ ನೋಡಿ ನಿಮ್ಮ ಹಿನ್ನೆಲೆ ಹೇಳಿದಂತಿದೆ, ಅಲ್ಲವೇ?! ನಿಜ. ಇದೇ ಕಾರಣಕ್ಕೆ ವೆಬ್‌ಸೈಟ್‌ಗಳು ಕುಕೀ ಬಳಕೆಗೆ ಜನರ ಅನುಮತಿ ಕೇಳಬೇಕು ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಕಾನೂನು ರೂಪಿಸಲಾಗಿದೆ. ಇದರಿಂದ ಬಳಕೆದಾರರು ವೆಬ್‌ಸೈಟ್‌ಎಂಟರ್‌ ಆಗುತ್ತಿದ್ದಂತೆಯೇ ಕೆಳಭಾಗದಲ್ಲಿ ಕುಕೀ ಸಂಗ್ರಹಿಸಲು ಮತ್ತು ಅದನ್ನು ಬಳಸಲು ನಾವು ಅನುಮತಿ ನೀಡಿದರೆ ಮಾತ್ರ ಅದನ್ನು ಇಂತಹ ಕೆಲಸಗಳಿಗೆ ವೆಬ್‌ಸೈಟ್‌ಗಳು ಬಳಸಬಹುದು.

ದುಡ್ಡು ಕೊಡಿ, ಇಲ್ಲ ಕಾಸು ಮಾಡಲು ಅವಕಾಶ ಕೊಡಿ!
ಇದೇನೂ ಸರ್ಕಾರಿ ಕಚೇರಿಯ, ಅಘೋಷಿತ ನೀತಿಯಲ್ಲ. ಆದರೆ ಕಾನೂನುಬದ್ಧವಾಗಿಯೇ ಸಾಮಾಜಿಕ ಜಾಲತಾಣಗಳ ನೀತಿ. ಇವು ಯಾವ ಗೋಜಲುಗಳೂ ಬೇಡ ಎಂದಾದರೆ ಬಳಕೆದಾರರ ಮೇಲೆ ಸೋಷಿಯಲ… ಮೀಡಿಯಾ ಶುಲ್ಕ ವಿಧಿಸಬೇಕಾಗುತ್ತದೆ. ಇದು ಸೋಷಿಯಲ… ಮೀಡಿಯಾಗಳ ಅಳಿವು-ಉಳಿವಿನ ಪ್ರಶ್ನೆ. ಅಷ್ಟೇ ಅಲ್ಲ, ಇವು ಈ ವಿಧಾನದಲ್ಲಿ ಗಳಿಸುವುದು ಸದ್ಯಕ್ಕೆ ನ್ಯಾಯೋಚಿತ ಮಾದರಿಯೂ ಹೌದು.

(ಕೋಟಿಯಲ್ಲಿ)
ಫೇಸ್‌ಬುಕ್‌ – 223.4
ಯೂಟ್ಯೂಬ್‌ – 150
ವಾಟ್ಸಾಪ್‌ – 150
ಫೇಸ್‌ಬುಕ್‌ ಮೆಸೆಂಜರ್‌ – 130
ವಿಚಾಟ್‌-98
ಇನ್‌ಸ್ಟಾಗ್ರಾಮ್‌ – 81.3
ಟಂಬ್ಲಿರ್‌ – 79.4
ರೆಡ್‌ಇಟ್‌ – 33
ಟ್ವಿಟರ್‌ – 33
ಸ್ಕೈಪ್‌ – 30
ಲಿಂಕ್ಡ್ಇನ್‌ – 26
ಟೆಲಿಗ್ರಾಮ್‌ – 20

ಕೃಷ್ಣಭಟ್‌

Advertisement

Udayavani is now on Telegram. Click here to join our channel and stay updated with the latest news.

Next