Advertisement

ನಿಲುವಾಗಿಲು ಗ್ರಾಮಕ್ಕೆ ಅಗತ್ಯ ಸೌಲಭ್ಯ ಒದಗಿಸಿ : ಜಿಲ್ಲಾಧಿಕಾರಿ

06:10 AM Jul 12, 2018 | Team Udayavani |

ಮಡಿಕೇರಿ : ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಗ್ರಾಮ ಸ್ವರಾಜ್‌ ಅಭಿಯಾನದಡಿ ಬೆಸ್ಸೂರು ಗ್ರಾ.ಪಂ.ವ್ಯಾಪ್ತಿಯ ನಿಲುವಾಗಿಲು ಗ್ರಾಮ ಆಯ್ಕೆಯಾಗಿದೆ. ಈ ಗ್ರಾಮದ ಕುಟುಂಬಗಳಿಗೆ ಅಡುಗೆ ಅನಿಲ ಹಾಗೂ ವಿದ್ಯುತ್‌ ಸಂಪರ್ಕ, ಜನಧನ ಯೋಜನೆಯಡಿ ಪ್ರತಿ ಕುಟುಂಬವು ಬ್ಯಾಂಕ್‌ ಖಾತೆ ಹೊಂದುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಈ ತಿಂಗಳ ಅಂತ್ಯದೊಳಗೆ ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.   

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಲುವಾಗಿಲು ಗ್ರಾಮಕ್ಕೆ ಸರ್ಕಾರದ ಹಲವು ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು. 

ಗ್ರಾಮ ಸ್ವರಾಜ್‌ ಅಭಿಯಾನ ಯೋಜನೆಯಡಿ ಕೊಡಗು ಜಿಲ್ಲೆಯ ನಿಲುವಾಗಿಲು ಗ್ರಾಮ ಆಯ್ಕೆಯಾಗಿದ್ದು, ಈ ಗ್ರಾಮದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ, ಜೀವನ್‌ ಜ್ಯೋತಿ ಭೀಮಾ ಯೋಜನೆ, ಸುರûಾ ಭೀಮಾ ಯೋಜನೆ, ಇಂದ್ರ ಧನುಷ್‌, ಕಿಶನ್‌ ಕೌಸಲ್ಯ ಯೋಜನೆ, ಸ್ವತ್ಛ ಭಾರತ ಅಭಿಯಾನ ಹೀಗೆ ನಾನಾ ಕಾರ್ಯಕ್ರಮಗಳನ್ನು ತಲುಪಿಸುವಂತೆ ಅವರು ನಿರ್ದೇಶನ ನೀಡಿದರು.  ಈ ತಿಂಗಳ ಅಂತ್ಯದವರೆಗೆ ನಿಲುವಾಗಿಲು ಗ್ರಾಮದ ಕುಟುಂಬದಲ್ಲಿ ಅಡುಗೆ ಅನಿಲ ಹಾಗೂ ವಿದ್ಯುತ್‌ ಸಂಪರ್ಕ ಇಲ್ಲ ಎಂಬ ದೂರುಗಳು ಕೇಳಿ ಬರಬಾರದು ಎಂದು ಸೂಚಿಸಿದರು.   

ಜಿ.ಪಂ.ಸಿಇಓ ಪ್ರಶಾಂತ್‌ ಕುಮಾರ್‌ ಮಿಶ್ರ ಮಾತನಾಡಿ ನಿಲುವಾಗಿಲು ಗ್ರಾಮದಲ್ಲಿ ಎಷ್ಟು ಕುಟುಂಬಗಳಿವೆ, ಜನಸಂಖ್ಯೆ ಎಷ್ಟು, ಮಹಿಳೆಯರು ಮತ್ತು ಪುರುಷರ ಸಂಖ್ಯೆ. ಈಗಾಗಲೇ ನೀಡಲಾಗಿರುವ ಫ‌ಲಾನುಭವಿಗಳ ಪಟ್ಟಿ, ಮುಂದೆ ಸೌಲಭ್ಯ ಕಲ್ಪಿಸಬೇಕಿರುವ ಫ‌ಲಾನುಭವಿಗಳ ಪಟ್ಟಿಯನ್ನು ಜುಲೈ, 25 ರೊಳಗೆ ತಲುಪಿಸುವಂತೆ ಬೆಸ್ಸೂರು ಗ್ರಾ.ಪಂ. ಪಿಡಿಒಗೆ ಸೂಚನೆ ನೀಡಿದರು.  

ಭಾರತ ಸರ್ಕಾರದ ಕಾರ್ಯಕ್ರಮಗಳ ಜಿಲ್ಲಾ ನೋಡೆಲ್‌ ಅಧಿಕಾರಿ ಪದ್ಮನಾಭನ್‌ ಅವರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸಂಬಂಧ ಈಗಾಗಲೇ ಸೌಲಭ್ಯಗಳನ್ನು ಒದಗಿಸಲಾಗಿರುವ ಫ‌ಲಾನುಭವಿಗಳ ಪಟ್ಟಿ ಹಾಗೂ ಮುಂದೆ ಸೌಲಭ್ಯ ಒದಗಿಸಬೇಕಿರುವ ಫ‌ಲಾನು ಭವಿಗಳ ಪಟ್ಟಿ ಒದಗಿಸುವಂತೆ ತಿಳಿಸಿದರು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಸಾಮಾನ್ಯ ವರ್ಗದ ಬಡವರಿಗೂ ಅನಿಲ ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅವರು ಸಲಹೆ ನೀಡಿದರು.
   
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ ಅವರು ಉಜ್ವಲ ಯೋಜನೆಯಡಿ ನಿಲುವಾಗಿಲು ಗ್ರಾಮದ ಎಲ್ಲಾ ಕುಟುಂಬಗಳಿಗೂ ಅನಿಲ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು.  

Advertisement

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್‌ ಅವರು ಸೌಭಾಗ್ಯ ಯೋಜನೆಯಡಿ ನಿಲುವಾಗಿಲು ಗ್ರಾಮದ ಎಲ್ಲಾ ಕುಟುಂಬಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್‌ ಅವರು ನಿಲುವಾಗಿಲು ಗ್ರಾಮದ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವ ಸಂಬಂಧ ಇಂದ್ರಧನುಷ್‌ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.  

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜೀ ಅವರು ಜನಧನ ಯೋಜನೆ ಸೇರಿದಂತೆ ಹಲವು ಯೋಜನೆ ಗಳ ಮಾಹಿತಿ ಬಗ್ಗೆ ಮಾಹಿತಿ ನೀಡಿದರು. 

ಬೆಸ್ಸೂರು ಗ್ರಾ.ಪಂ.ಪಿಡಿಒ ಯಾದವ ಅವರು ಗ್ರಾಮ ವಿಕಾಸ್‌ ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಗ್ರಾಮಸಭೆ ನಡೆಸಲಾಗಿದೆ. ಜತೆಗೆ ಸರ್ವೆ ಕಾರ್ಯವು ನಡೆದಿದೆ. ನಿಲುವಾಗಿಲು, ಅಗಳಿ, ಚಿಕ್ಕಭಂಡಾರ ವ್ಯಾಪ್ತಿಯಲ್ಲಿ 545 ಕುಟುಂಬಗಳಿದ್ದು, ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.    

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌.ಸಿ.ಎಚ್‌. ಅಧಿಕಾರಿ ಡಾ| ನಿಲೇಶ್‌, ಕುಟುಂಬ ಕಲ್ಯಾಣಾಧಿಕಾರಿ ಡಾ| ಆನಂದ್‌ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next