Advertisement

ಶಬರಿಮಲೆ: ಜನಸಾಗರ; ಮಂಡಲಪೂಜೆ ನಿಮಿತ್ತ ತೆರೆದ ಬಾಗಿಲು

06:00 AM Nov 18, 2018 | Team Udayavani |

ತಿರುವನಂತಪುರ: ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಉದ್ಭವಿಸಿರುವ ವಿವಾದದ ಮಧ್ಯೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆದಿದ್ದು, ಅಚ್ಚರಿ ಎಂಬಂತೆ ಈ ಬಾರಿ ಸಾಗರೋಪಾದಿ ಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ನಡುವೆಯೇ ಹಿಂದೂ ಐಕ್ಯವೇದಿಯ ನಾಯಕಿ ಕೆ.ಪಿ. ಶಶಿಕಲಾ ಟೀಚರ್‌ ಅವರನ್ನು ದೇಗುಲ ಪ್ರವೇಶಕ್ಕೆ ಬಿಡದೆ ಬಂಧಿಸಿದ ಕೇರಳ ಪೊಲೀಸರ ಕ್ರಮ ವಿರೋಧಿಸಿ ಶನಿವಾರ 12 ಗಂಟೆಗಳ ಕಾಲ ನಡೆದ ಹರತಾಳವೂ ಯಶಸ್ವಿಯಾಗಿದೆ.

Advertisement

ಕೇರಳ ಸರಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಭಕ್ತರ ಒತ್ತಾಯಕ್ಕೆ ಶುಕ್ರವಾರವೇ ಮಣಿದಿದ್ದರಿಂದ ಶನಿವಾರ ಯಾವುದೇ ಘರ್ಷಣೆ ಉಂಟಾಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ದೇಗುಲದ ದರ್ಶನಕ್ಕಾಗಿ ಶುಕ್ರವಾರ ಮುಂಜಾವ 2.30ರ ವೇಳೆಗೆ ತೆರಳಿದ ಹಿಂದೂ ಐಕ್ಯ ವೇದಿಯ ಮುಖ್ಯಸ್ಥೆ ಕೆ.ಪಿ.ಶಶಿಕಲಾ ಅವರನ್ನು ಪೊಲೀಸರು ತಡೆದಿದ್ದಾರೆ. ಜತೆಗೆ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಘಟನೆಯ ಕಾರ್ಯಕರ್ತರು ಕೇರಳ ಬಂದ್‌ಗೆ ಕರೆ ನೀಡಿದ್ದರು. ಹೀಗಾಗಿ ಶನಿವಾರ ಕೇರಳದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಹಿಂಸಾಚಾರಗಳೂ ನಡೆದಿರುವ ಬಗ್ಗೆ ವರದಿಯಾಗಿವೆ. ಅಲ್ಲದೆ, ಶಶಿಕಲಾ ಅವರಿಗೆ 50 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿದ್ದು, ದೇಗುಲ ಪ್ರವೇಶಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೂ ಪೊಲೀಸರು ಬಂಧಿಸಿದ್ದು ಏಕೆ ಎಂಬುದು ಸಂಘಟನೆಯ ಕಾರ್ಯಕರ್ತರ ಪ್ರಶ್ನೆಯಾಗಿತ್ತು. ಕೊಟ್ಟಾಯಂನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾ ಗಿಯೇ ಇತ್ತು. ಬೆಳಗ್ಗೆ 7.30ಕ್ಕೆ ಬೀದಿಗಿಳಿದ ಕಾರ್ಯ ಕರ್ತರು ಪೊಲೀಸರ ಕ್ರಮ ವಿರೋಧಿಸಿ ಮೆರವಣಿಗೆ ನಡೆಸಿದರು. 

ಹೀಗಾಗಿ ಕೊಟ್ಟಾಯಂ ಸೇರಿ ರಾಜ್ಯದ ಹಲವಾರು ಭಾಗಗಳಲ್ಲಿ ಕೇರಳ ಸಾರಿಗೆ ಸಂಸ್ಥೆ ಬಸ್‌ಗಳು, ಆಟೋರಿಕ್ಷಾಗಳು ಸಹಿತ ವಾಹನ ಸಂಚಾರ ವಿರಳವಾಗಿತ್ತು. ಆದರೆ ಶಬರಿಮಲೆಗೆ ತೆರಳುತ್ತಿದ್ದ ವಾಹನಗಳಿಗೆ ಯಾವುದೇ ತೊಂದರೆ ಮಾಡಲಿಲ್ಲ. ಕಲ್ಲಿಕೋಟೆಯಲ್ಲಿ ಸಿಪಿಎಂ ಜಿಲ್ಲಾಧ್ಯಕ್ಷನ ಪುತ್ರ ಮತ್ತು ಸೊಸೆ ತೆರಳುತ್ತಿದ್ದ ಕಾರನ್ನು ತಡೆದು, ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಬೆಳಗಿನ ಜಾವ ತೆರೆದ ಬಾಗಿಲು
ಶನಿವಾರ ಬೆಳಗಿನ ಜಾವ 3 ಗಂಟೆಗೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಿತು. ಪ್ರಮುಖ ತಂತ್ರಿ ವಾಸುದೇವನ್‌ ನಂಬೂದರಿ ಅವರು ಎಲ್ಲ ಪೂಜಾ ವಿಧಿವಿಧಾನಗಳ ಉಸ್ತುವಾರಿ ವಹಿಸಿದ್ದರು.  ಈ ಮಧ್ಯೆ ದೇಗುಲಕ್ಕೆ ಡ್ರೋಣ್‌ ಮೂಲಕ ಭದ್ರತೆ ಒದಗಿಸುವುದಾಗಿ ಪೊಲೀಸರು ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಶುಕ್ರವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ವಾಪಸ್‌ ಆಗಿದ್ದ ಭೂಮಾತಾ ಬ್ರಿಗೇಡ್‌ನ‌ ನಾಯಕಿ ತೃಪ್ತಿ ದೇಸಾಯಿಗೆ ಪುಣೆ ವಿಮಾನ ನಿಲ್ದಾಣದಲ್ಲೂ ಪ್ರತಿಭಟನೆಯ ಬಿಸಿ ತಗಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಯಾರಿಗೂ ಮಾಹಿತಿ ನೀಡದೆ ಗೆರಿಲ್ಲಾ ಮಾದರಿಯಲ್ಲಿ ದೇಗುಲಕ್ಕೆ ತೆರಳುವುದಾಗಿ ತೃಪ್ತಿ ದೇಸಾಯಿ ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕನ ಬಂಧನ
ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಜೆಪಿ ನಾಯಕ ಕೆ.ಸುರೇಂದ್ರನ್‌ ಅವರನ್ನು ಕೇರಳ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ. ನೀಲಕ್ಕಲ್‌ ಚೆಕ್‌ಪೋಸ್ಟ್‌ ಮೂಲಕ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವರು ಯತ್ನಿಸಿದ್ದರು. ರಾತ್ರಿ 7.20ರ ವೇಳೆಗೆ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಚಂದ್ರಕಾಂತ ಎಂಬ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Advertisement

ನಾಳೆ ಕೋರ್ಟ್‌ಗೆ ಅರ್ಜಿ
ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ತೀರ್ಪನ್ನು ಜಾರಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಕೋರಿ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಿದೆ. ವಕೀಲ ಚಂದ್ರ ಉದಯ ಸಿಂಗ್‌ ಮೂಲಕ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್‌ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next