ಶಬರಿಮಲೆ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯವು ಯಾತ್ರೆ ಆರಂಭವಾದ ಕೇವಲ 20 ದಿನಗಳಲ್ಲಿ ಬರೋಬ್ಬರಿ 69.39 ಕೋಟಿ ರೂ. ಆದಾಯ ಗಳಿಸಿದೆ.
ಕಳೆದ ಸಾಲಿನ ಈ ಅವಧಿಯಲ್ಲಿ 41.84 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಈ ಬಾರಿ ಆದಾಯದಲ್ಲಿ 27.55 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯ ವಿಜಯ್‌ಕುಮಾರ್ ಹೇಳಿದ್ದಾರೆ.
ಈ ಪೈಕಿ ಅರವಣ ಪ್ರಸಾದ ಮಾರಾಟದಿಂದ 28.26 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 4.2 ಕೋಟಿ ರೂ. ಆದಾಯ ಬಂದಿದೆ. ಡಿ.6ವರೆಗೆ ದೇಗುಲದ ಹುಂಡಿಯಲ್ಲಿ 23.58 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹುಂಡಿಯಲ್ಲಿ 16.21 ಕೋಟಿ ಸಂಗ್ರಹವಾಗಿತ್ತು. ಹಾಗೇ ಭಕ್ತರಿಗೆ ಕಲ್ಪಿಸಿರುವ ವಸತಿ ಸೌಲಭ್ಯದಿಂದ 20 ದಿನಗಳಲ್ಲಿ 1.4 ಕೋಟಿ ರೂ. ಆದಾಯ ಬಂದಿದೆ ಎಂದಿದ್ದಾರೆ.
ಹೃದಯಾಘಾತಕ್ಕೆ 8 ಬಲಿ:
ಈ ವರ್ಷ ಯಾತ್ರೆ ವೇಳೆ ಹೃದಯಾಘಾತದಿಂದ 8 ಭಕ್ತರು ಮೃತಪಟ್ಟಿದ್ದಾರೆ. ಒಟ್ಟು 75 ಹೃದಯಾಘಾತ ಪ್ರಕರಣ ನಡೆದಿದ್ದು, ಈ ಪೈಕಿ 67 ಭಕ್ತರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ ಎಂದು ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ