Advertisement

ಕೇರಳ: ಹಿಂಸೆ, ಸ್ತಬ್ಧ

12:30 AM Jan 04, 2019 | Team Udayavani |

ತಿರುವನಂತಪುರ: ಇಬ್ಬರು ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ಕರೆ ನೀಡಿದ್ದ ಹರತಾಳ ಹಿಂಸೆಗೆ ತಿರುಗಿದ್ದು, ದೇವರ ನಾಡಿನ ಅಲ್ಲಲ್ಲಿ ಬೀದಿ ಕಾಳಗ ನಡೆದಿದೆ. ಹರತಾಳಕ್ಕೆ ಹೈರಾಣಾದ ಕೇರಳದಲ್ಲಿ ಇಬ್ಬರು ಅಸುನೀಗಿದ್ದಾರೆ. ದಾಂಧಲೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ 99 ಬಸ್‌ಗಳು ಹಾನಿಗೀಡಾಗಿವೆ. 

Advertisement

ಅಲ್ಲಲ್ಲಿ ಪ್ರತಿಭಟನೆ, ಧರಣಿ, ಕಲ್ಲು ತೂರಾಟ ನಡೆಸಲಾಗಿದೆ. ಇದರ ಜತೆಗೆ ತಮಿಳುನಾಡಿನಲ್ಲಿ ಕೂಡ ಪ್ರತಿಭಟನೆ ನಡೆದಿದೆ. ಅಂಗಡಿ ಮುಂಗಟ್ಟುಗಳಿಗೆ, ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವೆಡೆ ಮಾಧ್ಯಮ ಸಿಬಂದಿ ಮೇಲೆ ಕೂಡ ಹಲ್ಲೆ ನಡೆದಿದೆ. ಈ ನಡುವೆ ಬುಧವಾರ ಗಾಯ ಗೊಂಡಿದ್ದ ಶಬರಿಮಲೆ ಕರ್ಮ ಸಮಿತಿಯ ಕಾರ್ಯಕರ್ತ ಚಂದ್ರ ಉಣ್ಣಿತ್ತಾನ್‌ ಅವರು ಗುರು ವಾರ ಅಸುನೀಗಿದ್ದಾರೆ. ಕೇರಳದಾ ದ್ಯಂತ 745 ಮಂದಿಯನ್ನು ಬಂಧಿಸ ಲಾಗಿದ್ದು, 628 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. 559 ಪ್ರಕರಣ ಗಳು ದಾಖಲಾಗಿದೆ.

ಹಿಂಸಾತ್ಮಕ ಹರತಾಳ
ಹರತಾಳದಿಂದಾಗಿ ಇಡೀ ಕೇರಳ ಅಕ್ಷರಶಃ ಸ್ಥಬ್ಧವಾಗಿತ್ತು. ಕೇರಳದ ಬಹುತೇಕ ಕಡೆಗಳಲ್ಲಿ ಪ್ರತಿ ಭಟನೆ, ಮೆರವಣಿಗೆ ನಡೆಸ ಲಾಗಿದೆ. ಅಲ್ಲದೆ ಉದ್ರಿಕ್ತರು ವಾಹನ ಗಳ ಮೇಲೆ ದಾಳಿ, ಹಲ್ಲೆ ನಡೆಸಿ ದ್ದಾರೆ. ತಿರುವನಂತಪುರದ ನಡು ಮಾಂಗಾಡ್‌ ಠಾಣೆ ಮೇಲೆ ಬಾಂಬ್‌ ದಾಳಿ ನಡೆಸಲಾಗಿದೆ. ಬ್ಯಾಂಕ್‌ ಒಂದನ್ನು ಮುಚ್ಚಿಸುವ ನಿಟ್ಟಿನಲ್ಲಿ ನಡೆದ ವಾಗ್ವಾದ ಹಿಂಸಾತ್ಮಕವಾದ ಬಳಿಕ ಈ ಘಟನೆ ನಡೆದಿದೆ. ತ್ರಿಶ್ಶೂರ್‌ನಲ್ಲಿ ಎನ್‌ಡಿಎಫ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾ ಮಾರಿ ನಡೆದಿದ್ದು, ಮೂವರು ಬಿಜೆಪಿ ಕಾರ್ಯಕರ್ತರಿಗೆ ಇರಿಯ ಲಾಗಿದೆ. ಪಾಲಕ್ಕಾಡ್‌ನ‌ಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ರಸ್ತೆಯಲ್ಲಿ ಕಾಳಗ ನಡೆದಿದೆ. ಪೊಲೀಸರು ಅವರನ್ನು ಚದುರಿಸಲು ಅಶ್ರುವಾಯು ಸಿಡಿಸಿದ್ದಾರೆ. ಕೆಲವೆಡೆ ಮಾಧ್ಯಮ ಸಿಬಂದಿ ಮೇಲೂ ಹಲ್ಲೆ ನಡೆಸಲಾಗಿದೆ.     

ಕಾಸರಗೋಡು ಜಿಲ್ಲೆಯಲ್ಲಿ ಗಲಭೆ
ಕಾಸರಗೋಡು ಜಿಲ್ಲೆಯ ಉಪ್ಪಳ, ಮಂಜೇಶ್ವರ, ಬಂದ್ಯೋಡು, ಬದಿಯಡ್ಕಗಳಲ್ಲಿ ಭಾರಿ ಪ್ರಮಾಣದ ಗಲಾಟೆ ನಡೆದಿದೆ. ಹಲವರು ಗಾಯಗೊಂಡಿದ್ದಾರೆ. ಮೀಪುಗುರಿ ನಿವಾಸಿ ಬಿಜೆಪಿ ನಾಯಕ ಗಣೇಶ್‌ ಎಂಬುವರಿಗೆ ಅಪರಿಚಿತರು ಚೂರಿಯಿಂದ ಇರಿದಿದ್ದಾರೆ. ಹಲವು ಭಾಗಗಳಲ್ಲಿ ಸಿಪಿಎಂ, ಸಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. 

ವಿಶೇಷ ಸೌಲಭ್ಯಕ್ಕೆ ಸಮಿತಿ ಆಕ್ಷೇಪ
ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ಮಹಿಳೆಯರಿಗೆ ವಿಶೇಷ ರಕ್ಷಣಾ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದಕ್ಕೆ ಹೈಕೋರ್ಟ್‌ ನೇಮಕ ಮಾಡಿದ್ದ ಮೂವರು ಸದಸ್ಯರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದಾಗಿ ಭಕ್ತರ ಹಕ್ಕುಗಳಿಗೆ ಭಂಗ ತಂದಂತಾಗಿದೆ ಎಂದು ಹೇಳಿದೆ. ಗುರುವಾರವಷ್ಟೇ ಕೇರಳ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. 

Advertisement

ಕರ್ನಾಟಕ ಬಸ್‌ಗಳ ಮೇಲೆ ಕಲ್ಲು
ಕೇರಳದ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಡಿಪೋಗಳಿಗೆ ಸೇರಿದ ಬಸ್‌ಗಳ ಕಲ್ಲು ತೂರಾಟ ನಡೆಸಲಾಗಿದೆ. ಹೀಗಾಗಿ, ರಾಜ್ಯ ಸಾರಿಗೆ ಸಂಸ್ಥೆ ತಾತ್ಕಾಲಿಕವಾಗಿ ಸಾರಿಗೆ ಸಂಸ್ಥೆ ಕೇರಳಕ್ಕೆ ತೆರಳುವ ಬಸ್‌ ಸೇವೆ ರದ್ದು ಮಾಡಿ, ರಾತ್ರಿ ವೇಳೆಗೆ ಮತ್ತೆ ಶುರು ಮಾಡಿದೆ. 

745 ಬಂಧಿತರ ಸಂಖ್ಯೆ
628 ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ
99 ಬಸ್‌ಗಳಿಗೆ ಹಾನಿ
31 ಗಾಯಗೊಂಡ ಪೊಲೀಸರು
03 ಬಿಜೆಪಿ ಕಾರ್ಯಕರ್ತರಿಗೆ ಇರಿತ

Advertisement

Udayavani is now on Telegram. Click here to join our channel and stay updated with the latest news.

Next