Advertisement

ಶಬರಿಮಲೆ ಸಮಸ್ಯೆ: ಪ್ರಧಾನಿ ಮಧ್ಯಪ್ರವೇಶಕ್ಕೆ  ಖಾದರ್‌ ಆಗ್ರಹ

04:53 AM Jan 04, 2019 | Team Udayavani |

ಮಂಗಳೂರು: ಶ್ರೀ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಇತ್ಯರ್ಥ ಮಾಡಬೇಕಿದೆ. ಆದರೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಈ ವಿಚಾರವನ್ನು ಜೀವಂತವಾಗಿಡುವ ಕಾರಣಕ್ಕಾಗಿ ಕೇಂದ್ರ ಸರಕಾರ ಮೌನತಾಳಿದಂತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ವಿಚಾರದಲ್ಲಿ ಜನರ ಭಾವನೆ, ಧಾರ್ಮಿಕ ಸಂಸ್ಕೃತಿ ಉಳಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವಾಗ ರಾಜ್ಯ ಸರಕಾರ ಅದನ್ನು ಪಾಲನೆ ಮಾಡಲೇಬೇಕಾಗುತ್ತದೆ. ಈ ಮೂಲಕ ಉದ್ಭವಿಸಿದ ಬಿಕ್ಕಟ್ಟನ್ನು ಸರಕಾರದ ಮಟ್ಟದಲ್ಲಿ ಪರಿಹರಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದೆ ಎಂದರು.

ಮೌನವೇಕೆ?
ಕೇಂದ್ರ ಸರಕಾರಕ್ಕೆ ನಿಜಕ್ಕೂ ಶಬರಿಮಲೆ ವಿಚಾರದಲ್ಲಿ ಕಾಳಜಿ ಇದ್ದರೆ ಅಧ್ಯಾದೇಶ ಹೊರಡಿಸಬೇಕಿತ್ತು. ಸಂಸತ್‌ನಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿತ್ತು. ಇಲ್ಲದಿದ್ದರೆ ಧಾರ್ಮಿಕ ಮುಖಂಡರನ್ನು ಕರೆಸಿ ಅವರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ಗೆ ಸಂದೇಶವನ್ನಾದರೂ ಸಲ್ಲಿಸಬಹುದಿತ್ತು. ಆದರೆ ಕೇಂದ್ರ ಮೌನವಾಗಿರುವುದು ಯಾವುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನೇಕ ಪ್ರಕರಣಗಳಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿದ ಉದಾಹರಣೆ ಇದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೂಡ ಸಂಸತ್‌ನಲ್ಲಿ ಈ ಬಗ್ಗೆ ಮಾತನಾಡದೆ ಇಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದರು. ಅಯ್ಯಪ್ಪಸ್ವಾಮಿ ದೇಗುಲವು ಹಿಂದೂ-ಮುಸ್ಲಿಂ ಸಹೋದರತೆ ಸಂಸ್ಕೃತಿಯ ಜಾಗ. ಇಷ್ಟೊಂದು ಮಹತ್ವದ ಪ್ರದೇಶದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕೇಂದ್ರದ್ದು. ಜನರು ಹೊಡೆದಾಡಿಕೊಂಡಿರುವಾಗ ಮೌನವಾಗಿ ನೋಡುತ್ತಿರುವುದು ಕೇಂದ್ರಕ್ಕೆ ಶೋಭೆ ತರಲಿದೆಯೇ? ಎಂದವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next