ಶಬರಿಮಲೆ: ಕೇರಳ ಸರಕಾರದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಹರಿವರಾಸನಂ ಪ್ರಶಸ್ತಿ-2020 ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಜ.15ರಂದು ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರಧಾನ ಮಾಡಲಾಯಿತು.
ಪ್ರತೀವರ್ಷ ಧಾರ್ಮಿಕ, ಸಾಮರಸ್ಯ ಹಾಗೂ ರಾಷ್ಟ್ರೀಯ ಐಕ್ಯತೆಗೆ ಕಾರಣರಾದವರಿಗೆ ಈ ಪ್ರಶಸ್ತಿಯನ್ನು ಕೇರಳ ಸರಕಾರ ನೀಡುತ್ತಿದೆ. ಪ್ರಶಸ್ತಿಯು 1 ಲಕ್ಷ ನಗದು,ಪ್ರಮಾಣ ಪತ್ರ ಹಾಗೂ ಫಲಕ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಇಳಯರಾಜ ಅವರಿಗೆ ಪೂಜಾ ಸಂಗೀತಗಾರ ಎಂಬ ಬಿರುದು ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯನ್ನು ಈವರೆಗೆ ಡಾ.ಕೆ.ಜೆ.ಯೇಸುದಾಸ್,ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್.ಚಿತ್ರಾ ,ಪಿ.ಸುಶೀಲಾಎಂ.ಜಿ.ಶ್ರೀ ಕುಮಾರ್, ಗಂಗೈ ಅಮರನ್ ಅವರಿಗೆ ನೀಡಲಾಗಿದೆ.
ಕನ್ನಡ ಸೇರಿದಂತೆ ದಕ್ಷಿಣದ ಚಲನಚಿತ್ರೋದ್ಯಮದ ಅದೆಷ್ಟೋ ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಎಷ್ಟೋ ಅದ್ಭುತ ಗೀತೆಗಳನ್ನು ನೀಡಿ, ಸಂಗೀತ ನಿಧಿ ಎಂದು ಹೆಸರುವಾಸಿಯಾಗಿರುವ ಇಳಯರಾಜಾ ಅವರಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿವೆ.
ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪುರಸ್ಕಾರ ಪದ್ಮವಿಭೂಷಣಕ್ಕೂ ಭಾಜನರಾಗಿದ್ದಾರೆ. ಆದರೆ, ಶಬರಿಮಲೆ ಬೆಟ್ಟದ ಮೇಲೆ ನೆಲೆಸಿರುವ ಅಯ್ಯಪ್ಪ ಕುರಿತ “ಹರಿವಾಸನಂ”ಗೀತೆ ಅಯ್ಯಪ್ಪ ಭಕ್ತರನ್ನು ಭಕ್ತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಗೀತೆಯಾಗಿದೆ, ಅಯ್ಯಪ್ಪ ಭಕ್ತರು ನಿತ್ಯವೂ ಪಠಿಸುವ ಪವಿತ್ರ ಗೀತೆ ಎಂಬ ಶ್ಲಾಘನೆಗೊಳಗಾಗಿದೆ. ಈ ಹಿನ್ನಲೆಯಲ್ಲಿ ಇಳಯರಾಜ ಅವರಿಗೆ “ಹರಿವರಾಸನಂ” ಪ್ರಶಸ್ತಿ ಲಭಿಸಿರುವುದು ಹಾಗೂ ಶಬರಿಮಲೆಯಲ್ಲಿ ಅದನ್ನು ಅವರು ಪಡೆದುಕೊಂಡಿರುವುದು ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿದೆ.
-ಪ್ರವೀಣ್ ಚೆನ್ನಾವರ