Advertisement

ಶಬರಿಮಲೆ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ

06:00 AM Oct 14, 2018 | Team Udayavani |

ತಿರುವನಂತಪುರ: ಮುಂದಿನ ಬುಧವಾರ (ಅ.17) ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿರುವಂತೆಯೇ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಹೋರಾಟ ಬಿರುಸಾಗಿದೆ. ಮಹಿಳೆಯರೇನಾದರೂ ದೇಗುಲ ಪ್ರವೇಶಕ್ಕೆ ಯತ್ನಿಸಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೇರಳದಲ್ಲಿರುವ ಶಿವಸೇನೆ ಘಟಕ ಬೆದರಿಕೆ ಹಾಕಿದೆ. ಈ ನಡುವೆ ಹೋರಾಟಗಾರ್ತಿ ತೃಪ್ತಿ ದೇಸಾಯಿ, ಸದ್ಯದಲ್ಲೇ ತಾವು ದೇಗುಲ ಪ್ರವೇಶಿಸುವುದಾಗಿ ಹೇಳಿರುವುದು ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. 

Advertisement

ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದರೆ ತನ್ನ ಮಹಿಳಾ ಘಟಕದ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳದ ಶಿವಸೇನೆ ಘಟಕ ಶನಿವಾರ ಎಚ್ಚರಿಕೆ ನೀಡಿದೆ.  “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಶಿವಸೇನೆ ನಾಯಕ ಪೆರಿಂಗಮ್ಮಲ ಅಜಿ, “ಅ.17, 18ರಂದು ಪಕ್ಷದ ಮಹಿಳಾ ಘಟಕದ ಸದಸ್ಯರು ಪಂಪಾ ನದಿಯನ್ನು ಸುತ್ತುವರಿಯಲಿದ್ದಾರೆ. ದೇಗುಲ ಪ್ರವೇಶಕ್ಕೆ ಮಹಿಳೆಯರು ಪ್ರವೇಶಿಸಿದರೆ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ’ ಎಂದಿದ್ದಾರೆ ಮತ್ತೂಂದೆಡೆ ಸೆ.28ರಂದು ಘೋಷಣೆ ಮಾಡಿದ್ದಂತೆ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡುವ ಮಾತುಗಳನ್ನಾಡಿರುವುದು ಕೂಡ ಕೇರಳ ಸರ್ಕಾರಕ್ಕೆ, ದೇಗುಲದ ಆವರಣ ಮತ್ತು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸುವ ಅನಿವಾರ್ಯತೆ ಒದಗಿ ಬಂದಿದೆ. 

ಬೃಹತ್‌ ಪ್ರತಿಭಟನೆ: ಕೊಚ್ಚಿಯಲ್ಲಿ ಶನಿವಾರ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದು, ತೃಪ್ತಿ ದೇಸಾಯಿ ಅವರನ್ನು ದೇಗುಲ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಪಂದಳಂ ರಾಜಮನೆತನದ ಶಶಿಕುಮಾರ್‌ ವರ್ಮಾ ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಕೈಗೊಂಡಿರುವ ಪಾದಯಾತ್ರೆ ಶನಿವಾರ ಕೊಲ್ಲಂ ಜಿಲ್ಲೆ ಪ್ರವೇಶಿಸಿದೆ. ತೃಪ್ತಿ ದೇಸಾಯಿ ಪ್ರವೇಶಕ್ಕೆ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಆಕ್ಷೇಪ ಮಾಡಿದ್ದಾರೆ. “ಅವರು ಅಯ್ಯಪ್ಪ ಭಕ್ತರು ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಅವರ ಆಗಮನ ಬೆಂಕಿಗೆ ತುಪ್ಪ ಸುರಿದಂತೆ ಆಗಲಿದೆ’ ಎಂದಿದ್ದಾರೆ. ಅ.15ರಂದು ತಿರುವನಂತಪುರದಲ್ಲಿ ಮುಕ್ತಾಯವಾಗಲಿರುವ ಯಾತ್ರೆಗೆ ಜನಬೆಂಬಲ ಸಿಕ್ಕಿದೆ ಎಂದು ಹೇಳಿದ್ದಾರೆ.

ಶಬರಿಗೆ ಬಂದರೆ ಹುಲಿ ಹಿಡಿದೀತು ಜೋಕೆ!
ದೇಗುಲ ಪ್ರವೇಶ ಮಾಡಬೇಕೆಂಬ ಆತುರದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ದೂರಬೇಡಿ ಎಂದು ದೇವಸ್ವಂ ಬೋರ್ಡ್‌ ಮಾಜಿ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‌ ಹೇಳಿದ್ದಾರೆ. ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿರುವುದು “ಶಬರಿಮಲೆಯನ್ನು ಥಾಯ್ಲೆಂಡ್‌ ಆಗಿ ಪರಿವರ್ತಿಸುವ ಕ್ರಮವಾಗಿದೆ’ ಎಂದು ಅವರು ಬಣ್ಣಿಸಿದ್ದಾರೆ. ಮಹಿಳೆಯರು ದೇಗುಲ ಪ್ರವೇಶಿಸುವುದಿದ್ದರೆ ಪ್ರವೇಶಿಸಲಿ. ಅಂಥ ಪ್ರಯತ್ನ ಮಾಡಬಾರದು ಎನ್ನುವುದು ಮನವಿ. ಒಂದು ವೇಳೆ ಬಂದರೆ ಹುಲಿ ಅಥವಾ ಮನುಷ್ಯನಿಂದ ಹಿಡಿಯಲ್ಪಡಲಿದ್ದಾರೆ’ ಎಂದು ಹೇಳುವ ಮೂಲಕ ಕಿರುಕುಳಕ್ಕೆ ಒಳಗಾದರೆ ಆಕ್ಷೇಪವೆತ್ತಬೇಡಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next