Advertisement

Dharwad; ಸ್ಥಾವರ ಸಂಸ್ಕೃತಿಗೆ ಮೊರೆ ಹೋಗುವುದು ಸಲ್ಲ: ಸಾಣೇಹಳ್ಳಿ ಶ್ರೀ

04:18 PM Jun 14, 2024 | Team Udayavani |

ಧಾರವಾಡ: ಬಸವ ಪರಂಪರೆಯವರು ಸ್ಥಾವರಗಳಿಗೆ ಮೊರೆ ಹೋಗುತ್ತಿರುವುದು ತಪ್ಪಬೇಕು ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

ಇಲ್ಲಿನ ಚನ್ನಬಸವೇಶ್ವರ ನಗರದಲ್ಲಿನ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜರುಗಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರು- ಚಿಂತನೆ ಹಾಗೂ ಲಿಂಗಾಯತ ಭವನದ ಎರಡನೇ ಮಹಡಿ ಮಹಾದಾನಿ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಸಭಾಭವನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಿಶ್ವಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ನಡೆ-ನುಡಿಯನ್ನು ಕಲಿಸಿದವರು. ನಡೆ-ನುಡಿ ಒಂದೇ ಆಗಿರಬೇಕು. ಅಂತರ ಇರಬಾರದು. ವೈದಿಕ ಪರಂಪರೆಯನ್ನು ತೊಲಗಿಸಲು, ಧರ್ಮಕ್ಕೆ ಹೊಸ ರೂಪ‌ಕೊಟ್ಟವರು ಬಸವಣ್ಣನವರು. ಧರ್ಮಕ್ಕೆ ಭಯ ಅಲ್ಲ ಬೇಡ ಭಕ್ತಿ‌ ಸಾಕು ಎಂದು ಸಾರಿದರು.

ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶ್ರಮಿಸಲು ಕರೆ ನೀಡಿದ‌ ಬಸವಣ್ಣನವರು, ಜಾತಿ ಭೂತ ಓಡಿಸಬೇಕು. ಕಾಯಕವೇ ಕೈಲಾಸ, ಕಾಯವೇ ಕೈಲಾಸ ಎಂದವರು ಬಸವಣ್ಣ. ಸಮಾನತೆ ಬೆಳೆಸಲು ಜಾಗೃತಿ‌ ಮೂಡಿಸಿದವರು‌ ಸಮಾಜಕ್ಕೆ ‌ಕೊಟ್ಟಿದ್ದು ಅತಿ ಸರಳ ಬದುಕು. ಅವರ ವಚನಗಳು ಶಾಲಾ-ಕಾಲೇಜುಗಳಲ್ಲಿ ಪಠಿಸಲು ಸರಕಾರ ಆದೇಶಿಸಬೇಕು. ಬಸವಣ್ಣನವರ ಎಲ್ಲ ಬೋಧನೆಗಳನ್ನು ಬಿಂಬಿಸುವ ಬಸವ ಭವನ ನಿರ್ಮಾಣ ಮಾಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಇಂತಹ ಬಸವಣ್ಣನವರ ಬೋಧಿಸಿದ ಮೌಲ್ಯಗಳ ಆಚರಣೆಯೇ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಕ್ಕೆ ಸಾರ್ಥಕ ಎಂದರು.

Advertisement

ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ಬಸವಣ್ಣನವರು ಸಾರ್ವಕಾಲಕ್ಕೂ ಪ್ರಸ್ತುತ ಎನಿಸುತ್ತಾರೆ. ಅವರು ತೋರಿಸಿದ ಸನ್ಮಾರ್ಗದಲ್ಲಿ‌ ನಾವೆಲ್ಲರೂ ಸಾಗಬೇಕು. ಲಿಂಗಾಯತ‌ ಭವನದ ಮೊದಲ ಮಹಡಿಗೆ ತ್ಯಾಗ ವೀರ ಶಿರಸಂಗಿ‌ ಲಿಂಗರಾಜರ ಹೆಸರಿಟ್ಟಿರುವುದು ಆ ಮಹಾನ ವ್ಯಕ್ತಿಗೆ ಸಲ್ಲಿಸಿದ ಅತಿ ದೊಡ್ಡ ಗೌರವ ಎಂದರು.

ಚಿತ್ತರಗಿ ಗುರುಮಹಾಂತ ಮಹಾಸ್ವಾಮಿಗಳು, ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು,‌ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ‌ ಸಾನಿಧ್ಯ ವಹಿಸಿದ್ದರು.

ಜಿಲ್ಲಾ ‌ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಶಿವಶರಣ ಕಲಬಶೆಟ್ಟರ್, ಎಸ್.ಬಿ.ಗೋಲಪ್ಪನವರ, ಬಿ.ವೈ.ಪಾಟೀಲ, ಸಿದ್ದಣ್ಣ ಕಂಬಾರ, ಮಲ್ಲನಗೌಡ ಪಾಟೀಲ, ಶಿವಾನಂದ ಕವಳಿ, ಶಂಕರ ಕುಂಬಿ, ವಿಜಯಲಕ್ಷ್ಮಿ ‌ಕಲ್ಯಾಣಶೆಟ್ಟರ್, ಸಂಧ್ಯಾ ಅಂಬಡಗಟ್ಟಿ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next