ಮೈಸೂರು: ಉದ್ಯಮಗಳ ಮುಂದೆ ಪಾಲಿಕೆ ತೆರಿಗೆ ಬಾಕಿ ಬೋರ್ಡ್ ಹಾಕಿರುವ ಮೈಸೂರು ಪಾಲಿಕೆ ನಡೆಗೆ ಶಾಸಕ ಸಾರಾ ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಪಾಲಿಕೆ ತುಘಲಕ್ ದರ್ಬಾರ್ ನಡೆಯುತ್ತಿದೆ. ಮೈಸೂರಿನಲ್ಲಿ ನಿಯಮ ಮೀರಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿಯೂ ಈ ಮಟ್ಟದ ಟ್ಯಾಕ್ಸ್ ಹಾಕುತ್ತಿಲ್ಲ. ಆದರೆ ಮೈಸೂರಿನಲ್ಲಿ ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಹೆಚ್ಚುವರಿ ತೆರಿಗೆ ವಸೂಲಿಗೆ ಅಧಿಕಾರ ಕೊಟ್ಟವರು ಯಾರು? ಈಗಾಗಲೇ ಮೈಸೂರಿನಲ್ಲಿ 8 ಚಿತ್ರಮಂದಿರ ಮುಚ್ಚಿದೆ, ಉದ್ಯಮಗಳು ನಾಶವಾಗುತ್ತಿದೆ. ಪಾಲಿಕೆ ಮನಸ್ಸೊ ಇಚ್ಚೆ ಟ್ಯಾಕ್ಸ್ ಹಾಕಿದರೆ ಸಾರ್ವಜನಿಕರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ನನ್ನ ಕನ್ವೆನ್ಶನ್ ಹಾಲ್ ಗೆ ನಿಯಮದ ಪ್ರಕಾರ 4 ಲಕ್ಷ ರೂ. ತೆರಿಗೆ ವಿಧಿಸಬೇಕು. ಆದರೆ ಮೈಸೂರು ಪಾಲಿಕೆ 8.75 ಲಕ್ಷ ತೆರಿಗೆ ವಿಧಿಸಿದೆ. ಅಧಿಕ ತೆರಿಗೆ ವಸೂಲಿ ಬಗ್ಗೆ ಸಾಕಷ್ಟು ಉದ್ಯಮಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಹಾಗಾಗಿ ಕಳೆದ 5-6 ವರ್ಷದಿಂದ ತೆರಿಗೆ ಕಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಎಷ್ಟೊಂದು ಸಮೃದ್ಧ : ಜೆಡಿಎಸ್ ಗೆ ಬಿಜೆಪಿ ಟಾಂಗ್
ನಿಯಮದಂತೆ ತೆರಿಗೆ ವಿಧಿಸಿದರೆ ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದರೆ ನೀವು ಕಾನೂನು ಬಾಹಿರವಾಗಿ ದಬ್ಬಾಳಿಕೆ ಮಾಡಿದರೆ ತಪ್ಪು, ಅಲ್ಲದೇ ಟ್ಯಾಕ್ಸ್ ಕಟ್ಟಿಲ್ಲ ಎಂದು ಬೋರ್ಡ್ ಹಾಕಿ ಅವಮಾನಿಸುವುದು ಸರಿಯಲ್ಲ. ಇದರಿಂದ ಶಾಂತಿ ಭಂಗವಾದರೆ ಕಾನೂನು ಸುವ್ಯವಸ್ಥೆ ಹಾಳಾದರೆ ಪಾಲಿಕೆಯೇ ನೇರ ಹೊಣೆಯಾಗುತ್ತದೆ ಎಂದು ಶಾಸಕ ಸಾರಾ ಮಹೇಶ್ ಎಚ್ಚರಿಕೆ ನೀಡಿದರು