Advertisement

ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಮೇಳ ಸಹಕಾರಿ: ಸಚಿವ ಎಸ್. ಟಿ. ಸೋಮಶೇಖರ್

08:27 PM Mar 27, 2022 | Team Udayavani |

ಬೆಂಗಳೂರು : ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಲು ಯುವಕ/ಯುವತಿಯರು ಕಂಪನಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಹಲವಾರು ಪ್ರತಿಷ್ಠಿತ ಕಂಪನಿಗಳನ್ನು ಒಂದೇ ಸೂರಿನಡಿ ತಂದಿರುವ ಉದ್ಯೋಗ ಮೇಳ ಕಾರ್ಯಕ್ರಮ ನಿರುದ್ಯೋಗಿಗಳಿಗೆ ಅತ್ಯಂತ ಸಹಕಾರಿ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಇಂದು ಕುಂಬಳಗೋಡಿನ ಶ್ರೀರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿಗಳು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಐಟಿಐ ಕಾಲೇಜು ನಿರ್ಮಿಸಲು ಜಮೀನು ಮಂಜೂರಾತಿಗೆ ಎರಡು ದಿನಗಳೊಳಗೆ ಕ್ರಮ ವಹಿಸುವುದಾಗಿ ತಿಳಿಸಿದ್ದು, ಉದ್ಯೋಗಾಧಾರಿತ ತರಬೇತಿಗೆ ಅವರ ಬದ್ಧತೆಯನ್ನು ತೋರುತ್ತದೆ ಎಂದು ಶ್ಲಾಘಿಸಿದರು.

ನಂತರ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ರವರು ಭಾರತದ ಯುವಜನತೆಯು ನಮಗೆ ದೊರೆತಿರುವಂತಹ ಒಂದು ಶಕ್ತಿ. ಯುವಜನತೆಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 70ಕ್ಕು ಹೆಚ್ಚು ಕಂಪನಿಗಳು ಭಾಗವಹಿಸಿದ್ದು 2450 ಜನ ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಹೇಳಿಕೆ ತಿರುಚಿ, ಮಠಾಧೀಶರಿಗೆ ಬಿಜೆಪಿಯಿಂದಲೇ ಅವಮಾನ : ಆಂಜನೇಯ ಆರೋಪ

Advertisement

ಮೇಳದಲ್ಲಿ 1465 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, 109 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 338 ಅಭ್ಯರ್ಥಿಗಳು ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂದು ಜಿ.ಪಂ ಯೋಜನಾ ನಿರ್ದೇಶಕರಾದ ಎನ್. ಆರ್. ಉಮೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ, ಕುಂಬಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್. ಆಶಾ, ಉಪಾಧ್ಯಕ್ಷರಾದ ಎನ್ ನರಸಿಂಹಮೂರ್ತಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಿ. ಎಲ್. ಕೃಷ್ಣಮೂರ್ತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next