ಸಾಗರ : ಉಳುವವನೆ ಹೊಲದೊಡೆಯ ಹೋರಾಟ ನಡೆದ ಐತಿಹಾಸಿಕ ಕಾಗೋಡು ಗ್ರಾಮದಲ್ಲಿ ಬುಧವಾರ ಜನಾಂದೋಲನಗಳ ಮಹಾಮೈತ್ರಿ ಒಕ್ಕೂಟದಿಂದ ಕರ್ನಾಟಕ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆಗಳ ವಾಪಾಸಾತಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾಕ್ಕೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದಿದ್ದರೆ ೨೦೨೦ರ ಭೂಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ಈತನಕ ಅದನ್ನು ವಾಪಾಸ್ ಪಡೆಯದೇ ರೈತವಿರೋಧಿ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಾಗೋಡು ನೆಲದಲ್ಲಿ ನಡೆದ ಉಳುವವನೇ ಹೊಲದೊಡೆಯ ಕಾಯ್ದೆ ಭೂಹೀನರಿಗೆ ಭೂಮಿಹಕ್ಕು ಕೊಡಿಸಿದ್ದರೆ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳ್ಳವನೇ ಭೂಮಿ ಒಡೆಯ ಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದರು.
ಇದು ನಾಡಿಗೆ ದ್ರೋಹ ಬಗೆಯುವ ಕೆಲಸ. ಇದನ್ನು ಸಮಗ್ರ ಶಕ್ತಿ ಮತ್ತು ತಿಳುವಳಿಕೆಯಿಂದ ವ್ಯವಸ್ಥಿತವಾದ ಹೋರಾಟ ಮಾಡಿ, ಜನಾಭಿಪ್ರಾಯ ರೂಪಿಸಿ ಕಾಯ್ದೆ ಹಿಂದಕ್ಕೆ ಪಡೆಯುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಸಂಘಟನಾಶಕ್ತಿ ಮೂಲಕ ಇಂತಹ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕಾಗಿದೆ. ನಾವು ಹಿಂದೆ ಕಿತ್ತುಕೋ ಹಂಚಿಕೋ ಚಳುವಳಿ ಮಾಡಿದ್ದೇವು. ಅದಕ್ಕೆ ಪ್ರೇರಣೆ ಕಾಗೋಡು ಸತ್ಯಾಗ್ರಹ. ಈ ಕಾಯ್ದೆ ಜಾರಿಗೆ ಬಂದರೆ ಸಣ್ಣ ಮತ್ತು ಅತಿಸಣ್ಣ ರೈತರು ಭೂಮಿ ಕಳೆದುಕೊಳ್ಳುತ್ತಾರೆ. ರೈತರು ನೆಮ್ಮದಿಯ ಜೀವನ ಮಾಡಬೇಕಾದರೆ ಇಂತಹ ಕಾಯ್ದೆ ವಿರೋಧಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾಗೋಡಿನಿಂದ ಜುಂಜಪ್ಪನಗುಡ್ಡೆವರೆಗೆ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದೆ ಎಂದರು.
ಇದನ್ನೂ ಓದಿ : ಗೋವಾ: ಅತಂತ್ರ ಫಲಿತಾಂಶದ ಸಮೀಕ್ಷೆ ಹಿನ್ನೆಲೆ; ಜೋರಾಯಿತು ರಾಜಕೀಯ ಪಕ್ಷಗಳ ರೆಸಾರ್ಟ್ ರಾಜಕಾರಣ
ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಸಿಗಂದೂರು ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನಾತ್ಮಕವಾಗಿ ಧ್ವನಿ ಎತ್ತದೆ ಹೋದರೆ ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ರಾಜ್ಯದಾದ್ಯಂತ ಸಂಚಲಿಸಲಿರುವ ಈ ಜನಜಾಗೃತಿ ಜಾಥಾಕ್ಕೆ ರೈತರು, ಸಂಘಸಂಸ್ಥೆಗಳು ಹೆಚ್ಚಿನ ಬೆಂಬಲ ನೀಡಬೇಕು. ರಾಜ್ಯ ಸರ್ಕಾರ ಮುಂದಿನ ಮೂರು ದಿನಗಳಲ್ಲಿ ಮೂರು ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯ ಸರ್ಕಾರದ ಮೂರು ಕರಾಳ ಕಾಯ್ದೆಗಳು ಉಳುಮೆ ಮಾಡುವ ರೈತನ ಆತ್ಮಸ್ಥೈರ್ಯ ಕುಗ್ಗಿಸುವಂತದ್ದಾಗಿದೆ. ತಕ್ಷಣ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯಿದೆ, ಗೋಹತ್ಯ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ ರದ್ದುಪಡಿಸುವ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರಾಜ್ಯ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ಸಾಮಾಜಿಕ ಹೋರಾಟಗಾರ ರಾಜಪ್ಪ ಮಾಸ್ತರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಬಿ.ಸೇನಾಪತಿ ಗೌಡ, ಅರುಣಕುಮಾರ್ ಕಸವೆ, ವಾಮದೇವ ಗೌಡ, ಗಾಯತ್ರಿ, ರೇವತಿ ಸುರೇಶ್, ಜಯಂತ್ ಯಲಕುಂದ್ಲಿ, ಚಂದ್ರಪ್ಪ, ಕನ್ನಪ್ಪ ಕಾಗೋಡು, ಮನೋಹರ, ಎನ್.ಡಿ.ವಸಂತಕುಮಾರ್, ರಮೇಶ್ ಐಗಿನಬೈಲು, ರವಿ ಬಿಳಿಸಿರಿ, ಗಾಮಪ್ಪ ಸೂರನಗದ್ದೆ ಇನ್ನಿತರರು ಹಾಜರಿದ್ದರು.