Advertisement

ಬಿಡುಗಡೆಗೆ ಸಿದ್ದವಾದ ‘ಪಂಪ’: ಆಗಸ್ಟ್ ನಲ್ಲಿ ತೆರೆಗೆ

02:00 PM Jul 18, 2022 | Team Udayavani |

ಕನ್ನಡ ಸಾಹಿತ್ಯ ಮತ್ತು ಚರಿತ್ರೆಯಲ್ಲಿ ಆದಿಕವಿ “ಪಂಪ’ ಎಂಬ ಹೆಸರನ್ನು ಎಲ್ಲರೂ ಕೇಳಿರುತ್ತೀರಿ. ಈಗ ಇದೇ “ಪಂಪ’ ಎಂಬ ಹೆಸರಿನಲ್ಲೇ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು “ಪಂಪ’ ಅಂತಿದ್ದರೂ, ಆದಿಕವಿ ಪಂಪನಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿಷಯಗಳಿರುವುದರಿಂದ ಮತ್ತು ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಸಿನಿಮಾಕ್ಕೆ “ಪಂಪ’ ಅಂಥ ಟೈಟಲ್‌ ಇಟ್ಟುಕೊಂಡಿದೆ.

Advertisement

“ಕೀ (ಕೆ.ಇ.ಇ) ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ವಿ. ಲಕ್ಷ್ಮೀಕಾಂತ್‌ (ಕಾಲವಿ) ನಿರ್ಮಾಣದಲ್ಲಿ ಮೂಡಿಬಂದಿರುವ “ಪಂಪ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಎಸ್‌. ಮಹೇಂದರ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಪಂಪ’ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇತ್ತೀಚೆಗಷ್ಟೇ “ಪಂಪ’ನ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿತು.

ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್‌. ಮಹೇಂದರ್‌, “ಇದೊಂದು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಶೈಲಿಯ ಕನ್ನಡ ಸಿನಿಮಾ. “ಪಂಪ’ ಎನ್ನುವುದು ಸಿನಿಮಾದಲ್ಲಿ ಪಂಚಳ್ಳಿ ಪರಶಿವಮೂರ್ತಿ ಎನ್ನುವ ಕನ್ನಡ ಉಪನ್ಯಾಸಕನ ಹೆಸರಿನ ಸಂಕ್ಷಿಪ್ತ ರೂಪ. ಆ ಉಪನ್ಯಾಸಕನ ಸುತ್ತ ಕನ್ನಡ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಸಾಗುತ್ತದೆ. ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕನ್ನಡದ ವಿಷಯವನ್ನು ಇಟ್ಟುಕೊಂಡು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಈ ಸಿನಿಮಾ ನಿರ್ದೇಶಿಸಿದ್ದೇನೆ’ ಎಂದರು.

ಇದನ್ನೂ ಓದಿ:ಮೊದಲ ಏಕದಿನ ಶತಕದಲ್ಲೇ ಹೊಸ ದಾಖಲೆ ಬರೆದ ರಿಷಭ್ ಪಂತ್

ನಿರ್ಮಾಪಕ ವಿ. ಲಕ್ಷ್ಮೀಕಾಂತ್‌ (ಕಾಲವಿ), ಸಂಗೀತ ನಿರ್ದೇಶಕ ಹಂಸಲೇಖ “ಪಂಪ’ ಸಿನಿಮಾ ನಿರ್ಮಾಣವಾದ ಹಿಂದಿನ ಕಥೆಯನ್ನು ಮೆಲುಕು ಹಾಕಿದರು.

Advertisement

“ಪಂಪ’ ಸಿನಿಮಾದಲ್ಲಿ ಅಭಿನಯಿಸಿರುವ ನಟ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಆದಿತ್ಯ ಶೆಟ್ಟಿ, ರವಿ ಭಟ್‌, ಕೃಷ್ಣಾ ಭಟ್‌ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಇನ್ನುಳಿದಂತೆ ರಾಘವ ನಾಯಕ್‌, ಅರವಿಂದ್‌, ಭಾವನಾ ಭಟ್‌, ರೇಣುಕಾ, ಶ್ರೀನಿವಾಸ್‌ ಪ್ರಭು, ಪೃಥ್ವಿರಾಜ್‌, ಮಹಾದೇವ ಹೆಜ್ಜಾಜಿ, ಮುಂತಾದವರು “ಪಂಪ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ ಬಾಬು ಛಾಯಾಗ್ರಹಣ, ಮೋಹನ್‌ ಕಾಮಾಕ್ಷಿ ಸಂಕಲನವಿದೆ.

ಸದ್ಯ ನಿಧಾನವಾಗಿ “ಪಂಪ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಆಗಸ್ಟ್‌ ವೇಳೆಗೆ “ಪಂಪ’ನನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next