Advertisement
ನಿಧನರಾದ ಸಹೋದರಿಯ ವೈಕುಂಠ ಸಮಾರಾಧನೆ ಮುಗಿಯುವವರೆಗೆ ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರುವುದಿಲ್ಲ ಎಂದು ಹೇಳಲಾಗುತ್ತಿತ್ತಾದರೂ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುನ್ನವೇ ಅವರು ಬಿಜೆಪಿ ಸೇರಬೇಕು ಎಂಬ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕುರಿತು ಅಮಿತ್ ಶಾ ಅವರೊಂದಿಗೆ ಚರ್ಚಿಸಲು ದಿಲ್ಲಿಗೆ ತೆರಳುತ್ತಿದ್ದಾರೆ. ಅಮಿತ್ ಶಾ ಜತೆಗಿನ ಮಾತುಕತೆ ಬಳಿಕ ಬಿಜೆಪಿ ಸೇರುವ ದಿನಾಂಕ ನಿಗದಿಯಾಗಲಿದೆ.
ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 180 ಎಕ್ರೆ ಅರಣ್ಯ ಪ್ರದೇಶ ಕಬಳಿಸಿದ ಅಳಿಯ ವಿ.ಜಿ. ಸಿದ್ಧಾರ್ಥನ ಅಕ್ರಮಕ್ಕೆ ಬೆಂಬಲ ನೀಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಬಾರದೆಂದು ಪ್ರಧಾನಿ ಮೋದಿಗೆ ಪತ್ರ ಬರೆಯಲಾಗುವುದು ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ತಿಳಿಸಿದ್ದಾರೆ. ವಿ.ಜಿ. ಸಿದ್ಧಾರ್ಥ ಕಾನೂನುಬಾಹಿರವಾಗಿ ಅರಣ್ಯ ಕಬಳಿಸಿದ್ದಾರೆ. ಅಳಿಯನನ್ನು ಉಳಿಸಲು ಯತ್ನಿಸಿರುವ ಎಸ್.ಎಂ. ಕೃಷ್ಣ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಸ್ಥಾನದ ಮೇಲೆ ಕಣ್ಣಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಕಾಳಧನದ ವಿರುದ್ಧ ಸಮರ ಸಾರಿರುವ ಪ್ರಧಾನಿ ಅವರು ಕೃಷ್ಣ ಅಂತಹವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.