ದಾಂಡೇಲಿ : ನಾಡಿನ ಬುಡಕಟ್ಟು ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಜೋಯಿಡಾ ತಾಲೂಕಿನ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ್ ಅವರು ವಿಧಾನ ಪರಿಷತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಆಗ್ರಹಿಸಿರುವುದರ ಜೊತೆಗೆ ಎಸ್.ಎಲ್.ಘೋಟ್ನೇಕರ್ ಅವರು ವಿಧಾನ ಪರಿಷತ್ ಸಭಾಪತಿಗಳಿಗೆ ನೀಡಿದ ಮನವಿಯಲ್ಲಿ ಜೊಯಿಡಾ ತಾಲೂಕಿನ ದಟ್ಟ ಕಾಡಿನಲ್ಲಿ ವಾಸವಾಗಿರುವ ಕುಣಬಿ ಜನಾಂಗದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದವರಾಗಿದ್ದಾರೆ. ಇಲ್ಲಿಯ ಸಮೃದ್ದ ಕಾಡು ಹಾಗೂ ಜೀವವೈವಿಧ್ಯತೆಗಳ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುಣಬಿಗಳಿದ್ದಾರೆ.
ಇದನ್ನೂ ಓದಿ :ನಿತ್ಯ ಸ್ನಾನ ಮಾಡದ ಹೆಂಡತಿಗೆ ತಲಾಖ್ ನೀಡಲು ಮುಂದಾದ ಪತಿ
ನೆರೆಯ ಗೋವಾ ರಾಜ್ಯದಲ್ಲಿ 2003ರಲ್ಲಿಯೇ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ ರಾಜ್ಯದಲ್ಲಿರುವ ಕುಣಬಿ ಸಮುದಾಯದವರಿಗೆ ಅನ್ಯಾಯವಾಗಿದೆ. ಈ ಹಿನ್ನಲೆಯಲ್ಲಿ ಈ ನೆಲದ ಮೂಲಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುತ್ತಿರುವ ಆರ್ಥಿಕವಾಗಿ ತೀರಾ ಹಿಂದುಳಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಎಸ್.ಎಲ್.ಘೋಟ್ನೇಕರ್ ಅವರು ಒತ್ತಾಯಿಸಿದ್ದಾರೆ.
ಕುಣಬಿ ಸಮುದಾಯದ ಪರವಾಗಿ ಧ್ವನಿಯೆತ್ತಿರುವ ಎಸ್.ಎಲ್.ಘೋಟ್ನೇಕರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.