Advertisement

ಟಿಪ್ಪು ಪ್ರಭಾವಿತ ಕ್ರೂರಿ, ಕನ್ನಡ ವಿರೋಧಿ: ಸಾಹಿತಿ ಎಸ್‌.ಎಲ್‌. ಬೈರಪ್ಪ

11:16 PM Nov 13, 2022 | Team Udayavani |

ಮೈಸೂರು: ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎನ್ನುವವರು ಟಿಪ್ಪುವಿನ ಕೊಡುಗೆ ಮತ್ತು ಸಾಧನೆ ಏನೆಂಬುದನ್ನು ಓದಿ ತಿಳಿದುಕೊಳ್ಳಲಿ ಎಂದು ಹಿರಿಯ ಸಾಹಿತಿ ಎಸ್‌.ಎಲ್‌. ಬೈರಪ್ಪ ಚಾಟಿ ಬೀಸಿದರು.

Advertisement

ಅಯೋಧ್ಯಾ ಪ್ರಕಾಶನದ ಸಹಯೋಗದಲ್ಲಿ ರವಿವಾರ ರಂಗಾಯಣದ ಭೂಮಿಗೀತದಲ್ಲಿ ಆಯೋಜಿಸಲಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ “ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಟಿಪ್ಪು ಆಳ್ವಿಕೆ ಮೊದಲು ಮೈಸೂರು ಅರಸರು ಕನ್ನಡದಲ್ಲೇ ಆಡಳಿತ ನಡೆಸುತ್ತಿದ್ದರು. ಟಿಪ್ಪು ಆಡಳಿತ ಆರಂಭವಾದಾಗ ಪರ್ಶಿಯನ್‌ ಭಾಷೆ ಬಳಕೆಗೆ ಬಂತು. ಆತ ಹಲವು ಊರುಗಳಿಗೆ, ಕಂದಾಯ ಆಡಳಿತ ಪದಗಳಿಗೆ ಪರ್ಯಾಯವಾಗಿ ಪರ್ಶಿಯನ್‌ ಹೆಸರುಗಳನ್ನು ಇಟ್ಟಿದ್ದು, ಅವು ಇಂದಿಗೂ ಚಾಲ್ತಿಯಲ್ಲಿವೆ ಎಂದು ಹೇಳಿದರು.

ಯಾವುದೇ ಒಂದು ಊರಿನ ಹೆಸರು ಆ ಭಾಗದ ಐತಿಹಾಸಿಕ, ಪರಂಪರೆ ಮತ್ತು ಸಂಸ್ಕೃತಿಯ ಹಿನ್ನೆಲೆ ಹೊಂದಿರುತ್ತವೆ. ಇಂತಹ ಊರಿನ ಹೆಸರುಗಳನ್ನೇ ಬದಲಿಸಿದರೆ ಆ ಭಾಗದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ನಾಶ ಮಾಡಿದಂತೆ. ಇದೇ ಕೆಲಸವನ್ನು ಟಿಪ್ಪು ಮಾಡಿದ್ದು ಎಂದು ವಿವರಿಸಿದರು.

ಕೀಟಲೆ ಮಾಡುವ ಉದ್ದೇಶದಿಂದಲೇ ಕೆಲವರು ಟಿಪ್ಪು ಜಯಂತಿ ಆಚರಣೆ ಆರಂಭಿಸಿದರು. ಈಗ ಕೆಲವರು 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ರೀತಿ ಮಾತನಾಡುವವರು ಅವನ ಕೊಡುಗೆ ಮತ್ತು ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು. ಮೊನ್ನೆ ಬೆಂಗಳೂರಿನಲ್ಲಿ ಕೆಂಪೇಗೌಡ ಅವರ ಪ್ರತಿಮೆ ಅನಾವರಣ ನೋಡಿ ಈ ರೀತಿ ಹೇಳುತ್ತಿದ್ದಾರೆ.

ಆದರೆ ಕೆಂಪೇಗೌಡರು ಬೃಹತ್‌ ಬೆಂಗಳೂರು ನಿರ್ಮಾತೃ. ಕುಡಿಯುವ ನೀರಿಗಾಗಿ ನೂರಾರು ಕೆರೆ ಕಟ್ಟಿಸಿ, ವ್ಯವಸ್ಥಿತವಾದ ನಗರ ನಿರ್ಮಾಣ ಮಾಡಿದರು. ಆ ಉದ್ದೇಶಕ್ಕಾಗಿ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆದರೆ ಕ್ರೂರಿ, ಮತಾಂಧ, ಕನ್ನಡ ವಿರೋಧಿಯಾದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಾಮರಸ್ಯ ವೇದಿಕೆಯ ವಾದಿರಾಜ್‌ ಮಾತನಾಡಿ, ಐ.ಎಂ. ಮುತ್ತಣ್ಣ, ಡಾ| ಎಸ್‌.ಎಲ್‌. ಬೈರಪ್ಪ, ಪ್ರತಾಪ ಸಿಂಹ, ಚಿಮೂ, ಪ್ರಧಾನ ಗುರುದತ್‌ ಮೊದಲಾದವರು ಟಿಪ್ಪು ನಿಜಸ್ವರೂಪವನ್ನು ಬಯಲಿಗೆ ತರಲು ಶ್ರಮಿಸಿದ್ದಾರೆ. ನಾವು ಬರೆದಿರುವುದು ಕಾಲ್ಪನಿಕ ಅಲ್ಲ, ಆಧಾರ ಯುಕ್ತವಾಗಿದೆ. ಆದರೆ ಸಂಜಯ್‌ ಖಾನ್‌ ಕಾಲ್ಪನಿಕ ಎಂದು ಒಪ್ಪಿದರೆ, ಗಿರೀಶ್‌ ಕಾರ್ನಾಡ್‌ ಲಾವಣಿ ಕೇಳಿ ಬರೆದೆ ಎಂದು ಜಾರಿಕೊಂಡಿದ್ದರು ಎಂದು ಹೇಳಿದರು.

ಅದ್ಭುತ ರಂಗಕೃತಿ: ರೋಹಿತ್‌ ಚಕ್ರತೀರ್ಥ
ಚಿಂತಕ ರೋಹಿತ್‌ ಚಕ್ರತೀರ್ಥ ಮಾತನಾಡಿ, ಇದೊಂದು ಅದ್ಭುತ ರಂಗಕೃತಿ. ಟಿಪ್ಪು ಕುರಿತು ಅನೇಕ ಕೃತಿಗಳು ಹೊರಬಂದಿವೆ. ಆದರೆ ಮೊದಲ ಬಾರಿಗೆ ಬೈರಪ್ಪ ಅವರ ಆವರಣ ಕೃತಿಯನ್ನು ಓದಿದ ಅನೇಕರು ಟಿಪ್ಪುವಿನ ಬಗೆಗಿನ ನಿಲುವನ್ನು ಬದಲಿಸಿಕೊಂಡರು. ಆದರೆ ಕೃತಿ ವಿರುದ್ಧವಾಗಿ ಹೇಳಿಕೆ ನೀಡುವವರ್ಯಾರೂ ಈ ಕೃತಿಯನ್ನು ಓದಿಲ್ಲ. ಇದು ಎಡಪಂಥದ ನಿಲುವು ಎಂದು ಟೀಕಿಸಿದರು.

ಲೇಖಕ ಅಡ್ಡಂಡ ಸಿ. ಕಾರ್ಯಪ್ಪ, ಅಯೋಧ್ಯಾ ಪ್ರಕಾಶನದ ಶಶಾಂಕ್‌ ಭಟ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next