ಭಾರತೀಯ ಚಿತ್ರರಂಗದಲ್ಲೇ ಇದೊಂದು ದಾಖಲೆ. ಇಷ್ಟು ವರ್ಷಗಳ ಇತಿಹಾಸದಲ್ಲಿ, ಯಾವುದೇ ಭಾಷೆಯಲ್ಲೂ 86ನೇ ವಯಸ್ಸಿನ ಹಿರಿಯರೊಬ್ಬರು ಚಿತ್ರ ನಿರ್ದೇಶಿಸಿರುವ ಉದಾಹರಣೆ ಇರಲಿಲ್ಲ. ಈಗ ಅಂಥದ್ದೂದು ಸಾಹಸ ಮತ್ತು ದಾಖಲೆಯನ್ನು ಹಿರಿಯ ನಿರ್ದೇಶಕ ಭಗವಾನ್ (ದೊರೈ-ಭಗವಾನ್ ಖ್ಯಾತಿಯ) ಸದ್ದಿಲ್ಲದೆ ಮಾಡಿದ್ದಾರೆ. 22 ವರ್ಷಗಳ ನಂತರ ಭಗವಾನ್ ನಿರ್ದೇಶಿಸುತ್ತಿರುವ “ಆಡುವ ಗೊಂಬೆ’ ಕಳೆದ ವರ್ಷವೇ ಪ್ರಾರಂಭವಾಗಿತ್ತು. ಇದೀಗ ಅದು ಸಂಪೂರ್ಣವಾಗಿದ್ದು, ದಸರಾ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಇದು ಅವರ 50ನೇ ಚಿತ್ರ.
1996ರಲ್ಲಿ ಬಿಡುಗಡೆಯಾದ “ಬಾಳೊಂದು ಚದುರಂಗ’ ಚಿತ್ರವೇ ಕೊನೆ. ಅದಾದ ನಂತರ ಭಗವಾನ್ ಅವರು ಯಾವೊಂದು ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ಈ ಕುರಿತು ಮಾತನಾಡುವ ಅವರು, “ಆ ನಂತರ ನಾನು ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪ್ರಿನ್ಸಿಪಾಲ್ ಆದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ದೊರೆಯಿತು. ಕ್ರಮೇಣ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಬದಲಾಯಿತು. ಹಾಗಾಗಿ ನಿರ್ದೇಶನ ಬಿಟ್ಟು ಅನೇಕ ವಿದ್ಯಾರ್ಥಿಗಳನ್ನು ಬೇರೆ ಬೇರೆ ಭಾಗಗಳಲ್ಲಿ ತಯಾರು ಮಾಡುವ ಅವಕಾಶ ಸಿಕ್ಕಿತು. ಹೀಗಿರುವಾಗಲೇ ಸತೀಶ್ ಮತ್ತು ವೇಣುಗೋಪಾಲ್ ಎಂಬ ಶಿಷ್ಯಂದಿರಿಬ್ಬರು ಬಂದು, ಒಂದು ಚಿತ್ರ ನಿರ್ದೇಶನ ಮಾಡಿ ಎಂದರು. ನೀವು ಚಿತ್ರ ಮಾಡಿದರೆ ನಿರ್ಮಾಣ ಮಾಡುತ್ತೇವೆ, ಇಲ್ಲವಾದರೆ ಹೆಜ್ಜೆ ಇಡುವುದಿಲ್ಲ ಎಂದರು. ಅವರ ಪ್ರೀತಿ ನೋಡಿ ಒಪ್ಪಿದೆ. ತಲೆಯಲ್ಲಿ ಒಂದಿಷ್ಟು ಐಡಿಯಾಗಳು ಇದ್ದವು. ಅವನ್ನೆಲ್ಲಾ ಕ್ರೋಢೀಕರಿಸಿ ಒಂದು ಕಥೆ ಮಾಡಿದೆ.
ಇನ್ನೇನು ಶುರು ಮಾಡಬೇಕು ಎನ್ನುವಷ್ಟರಲ್ಲಿ “ರಾಜ್‌ಕುಮಾರ’ ಚಿತ್ರದ ಗೊಂಬೆ ಹಾಡು ಜನಪ್ರಿಯವಾಗಿತ್ತು. ಈ ಚಿತ್ರದಲ್ಲೂ ವಿಧಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ “ಆಡುವ ಗೊಂಬೆ’ ಅಂತ ಹೆಸರಿಟ್ಟೆ. ಕೊನೆಗೆ ಕಸ್ತೂರಿ ನಿವಾಸ ಕ್ರಿಯೇಷನ್ಸ್ ಎಂಬ ಸಂಸ್ಥೆಯಡಿ ಚಿತ್ರ ಶುರುವಾಯಿತು. ಕಳೆದ ಡಿಸೆಂಬರ್‌ನಲ್ಲಿ ಶುರುವಾಯಿತು. ಫೆಬ್ರವರಿಗೆ ಮುಗಿದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಮಾಹಿತಿ ಕೊಡುತ್ತಾರೆ ಭಗವಾನ್.
ಈ ಚಿತ್ರಕ್ಕೆ ಯಾರನ್ನ ಹಾಕಿಕೊಳ್ಳಬೇಕು ಎಂಬ ಪ್ರಶ್ನೆ ಬಂದಾಗ, ಉತ್ತರವಾಗಿದ್ದು ಅನಂತ್ ನಾಗ್. “ಅನಂತ್ ನನ್ನ ಫೇವರೇಟ್ ನಟ. ನಾನು ಚಿತ್ರ ಮಾಡಬೇಕು ಎಂದು ಹೊರಟರೆ ಮೊದಲು ತಲೆಗೆ ಬರುವ ನಟರೆಂದರೆ ಅದು ಅನಂತ್ ನಾಗ್. ಇದುವರೆಗೂ ನಾವಿಬ್ಬರೂ ಒಂಬತ್ತು ಚಿತ್ರ ಮಾಡಿದ್ದೀವಿ. ನಮ್ಮಿಬ್ಬರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ನನ್ನ ಮಾತಿಗೆ ಇಲ್ಲ ಎನ್ನುವುದಿಲ್ಲ ಎಂಬ ಧೃಡವಾದ ನಂಬಿಕೆ ಇದೆ. ಅನಂತ್ ನಾಗ್ ಒಬ್ಬರಾದರೆ ಇನ್ನೊಬ್ಬರು ಲಕ್ಷ್ಮೀ. ಅವರಿಬ್ಬರನ್ನು ಪೇರ್ ಮಾಡಿದ್ದೇ ನಾವಲ್ಲವೇ. ಹಾಗಾಗಿ ಅನಂತ್ ನಾಗ್ ಮತ್ತು ಲಕ್ಷ್ಮೀ ಅವರ ಜೊತೆಗೆ ಮಾಡೋಣ ಅಂತ ಆಯ್ತು. ಅನಂತ್ ನಾಗ್ ಅವರನ್ನು ಕೇಳಿದಾಗ, ಯಾವಾಗ ಮುಹೂರ್ತ ಎಂದರು. ಕಥೆ, ರೇಟ್ ಯಾವುದೂ ಕೇಳಲಿಲ್ಲ. ಅಷ್ಟು ನಂಬಿಕೆ. ಅವರು ಕೇಳಿದ್ದು ಒಂದೇ ಪ್ರಶ್ನೆ. “ನಿಮಗೆ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ವಿಶ್ವಾಸ ಇದೆಯಾ’ ಎಂದು. ನಾನು ಕಥೆ ಮಾಡಿದ್ದೇ ನಿಮ್ಮನ್ನು ಮನಸ್ಸಿನಲ್ಲಿಟ್ಟುಕೊಂಡು ಅಂದೆ. ಅದಾದ ಮೇಲೆ ಅವರು ಏನೂ ಕೇಳಲಿಲ್ಲ. ಎಷ್ಟು ದಿನ ಕಾಲ್‌ಶೀಟ್ ಬೇಕು ಅಂತ ಕೇಳಿದ್ದು ಬಿಟ್ಟರೆ, ಇನ್ನೇನು ಇದುವರೆಗೂ ಕೇಳಿಲ್ಲ. ನಂತರ ಲಕ್ಷ್ಮೀ ಅವರನ್ನು ಸಂಪರ್ಕಿಸಿದೆ. ಅವರು ಕಿರುತೆರೆಯಲ್ಲಿ ಬಿಝಿಯಾಗಿದ್ದರಿಂದ ಸಾಧ್ಯವಾಗಲಿಲ್ಲ. ಕೊನೆಗೆ ಅವರ ಜಾಗಕ್ಕೆ ಯಾರು ಎಂದು ಯೋಚಿಸಿದಾಗ, ಸುಧಾ ಬೆಳವಾಡಿ ಅವರ ಹೆಸರು ಬಂತು. ಕೊನೆಗೆ ಸುಧಾ ಅವರನ್ನು ಕೇಳಿದೆ. ಅವರು ನನ್ನ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಇನ್ನು ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿ¨ªಾರೆ. ಅವರೆಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಲು ಭಗವಾನ್ ಅವರು ಮರೆಯುವುದಿಲ್ಲ.
ಅದರಲ್ಲೂ ಅನಂತ್ ನಾಗ್ ಅವರ ಬಗ್ಗೆ ಮೆಚ್ಚಿ ಮಾತನಾಡುವ ಅವರು, “ಅನಂತ್ ಅವರಿಗೆ ಒಂದು ಬೌಂಡ್ ಸ್ಕ್ರಿಪ್ಟ್ ಕೊಟ್ಟಿದ್ದೆ. ಅವರು ಅದನ್ನು ಪೂರ್ತಿಯಾಗಿ ಓದಿ ಹಲವು ಸಲಹೆಗಳನ್ನು ಕೊಟ್ಟರು. ಸಂಭಾಷಣೆಗಳನ್ನು ತಿದ್ದಿದರು. ಒಟ್ಟಿನಲ್ಲಿ ಗುಲಾಬಿ ಹೂನಲ್ಲಿದ್ದ ಮುಳ್ಳನ್ನೆಲ್ಲಾ ತೆಗೆದು, ಒಂದು ಸುಂದರವಾದ ಹೂವು ಕೊಟ್ಟರು. ಆ ಸ್ಕ್ರಿಪ್ಟ್ನ ಇನ್ನೂ ಜೋಪಾನವಾಗಿ ಎತ್ತಿಟ್ಟಿದ್ದೀನಿ’ ಎನ್ನುತ್ತಾರೆ ಭಗವಾನ್. ಎಲ್ಲಾ ಸರಿ, ಈ ಚಿತ್ರದ ಕಥೆ ಏನು ಎಂದರೆ, “ಅಣ್ಣಾವ್ರು ಹಾಡಿರುವ ಒಂದು ಹಾಡಿನಂತೆ, “ವಿಧಿಯಾಟವೇನೋ ಬಲ್ಲವರು ಯಾರು? ನಾಳೆಯು ಏನೆಂದು ಹೇಳುವವರ್ಯಾರು’ ಎಂಬಂತೆ ವಿಧಿಯು ಚಿತ್ರದ ಮೂರು ಪ್ರಮುಖ ಪಾತ್ರಗಳ ಜೀವನದಲ್ಲಿ ಆಡುತ್ತದೆ. “ಮೇಲಿರೋನು ನಮ್ಮನ್ನು ಆಡಿಸಿದಂತೇನೇ ಆಡಬೇಕು’ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ’ ಎನ್ನುತ್ತಾರೆ ಭಗವಾನ್.
“ಆಡುವ ಗೊಂಬೆ’ ಚಿತ್ರದ ಇನ್ನೊಂದು ವಿಶೇಷವೆಂದರೆ, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಮತ್ತು ವಿಜಯ್ ರಾಘವೇಂದ್ರ ತಲಾ ಒಂದೊಂದು ಹಾಡನ್ನು ಹಾಡಿದ್ದಾರೆ.