Advertisement

ಗಾನಯಾನಕ್ಕೆ ವಿದಾಯ ಹೇಳಿದ ಎಸ್‌.ಜಾನಕಿ

06:35 AM Oct 29, 2017 | |

ಮೈಸೂರು: ಎಳವೆಯಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಯನ ಆರಂಭಿಸಿದ್ದ ದಕ್ಷಿಣ ಭಾರತದ ಗಾನಕೋಗಿಲೆ ಎಸ್‌.ಜಾನಕಿ ಅವರು ಶನಿವಾರ ಮೈಸೂರಿನಲ್ಲೇ ತಮ್ಮ ಗಾನಯಾನಕ್ಕೆ ವಿದಾಯ ಹೇಳಿದರು.

Advertisement

ಎಸ್‌.ಜಾನಕಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಬಯಲುರಂಗ
ಮಂದಿರದಲ್ಲಿ ಆಯೋಜಿಸಿದ್ದ ಜಾನಕಿ ಅವರ ಗಾನಯಾನದ ಕೊನೆಯ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಂಗೀತ ಪ್ರೇಮಿಗಳು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ನೀಡಲಾದ ಸನ್ಮಾನ ಸ್ವೀಕರಿಸಿ, ಮನತುಂಬಿ ಮಾತನಾಡಿದ ಜಾನಕಿ ಅವರು, “ಕೇವಲ ಹತ್ತು ವರ್ಷದ ಬಾಲಕಿಯಾಗಿದ್ದಾಗ ಮೈಸೂರಿನಲ್ಲಿಯೇ ಗಾಯನ ಆರಂಭಿಸಿದ್ದ ನೆನಪು. ಇಲ್ಲಿಯವರೆಗೆ ಅನೇಕ ವೈವಿಧ್ಯಮಯ ಹಾಡುಗಳನ್ನು ಹಾಡಿದ್ದು,ನನ್ನ ಈ ಗಾಯನ ಪಯಣ ಸಂತೃಪ್ತಿ ಕೊಟ್ಟಿದೆ.ಇನ್ನು ಸಾಕು. ಇನ್ನು ಮುಂದೆ ನಾನು ಹಾಡುವುದಿಲ್ಲ. ಇದೇ ನನ್ನ ಕಡೇ ಸಂಗೀತ

ಕಾರ್ಯಕ್ರಮ’ ಎಂದು ಭಾರವಾದ ಹೃದಯದಿಂದ ವಿದಾಯ ಘೋಷಿಸಿದರು. ಮೈಸೂರಿನ ಅನೇಕ ಸಾಹಿತಿಗಳು ಬರೆದ ಗೀತೆಗಳನ್ನು ಹಾಡಿರುವೆ. ಇಲ್ಲಿಯ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿರುವೆ. ಈ ಕ್ಷಣಗಳೆಲ್ಲ ನನ್ನ ಪಾಲಿಗೆ ಅವಿಸ್ಮರಣೀಯ. ಮೈಸೂರಿನಲ್ಲೇ ಸಂಗೀತ ಕಾರ್ಯಕ್ರಮ ನೀಡಬೇಕೆಂಬ ಕಳೆದ ಒಂದು ದಶಕಗಳ ಆಸೆ ಇದೀಗ ಈಡೇರಿದೆ ಎಂದು ಸಂತಸಪಟ್ಟರು.

14 ವರ್ಷದವಳಿದ್ದಾಗ ಮೈಸೂರಿನಲ್ಲಿ ಹಾಡು ಹೇಳಿದ್ದೆ. ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ ಅವರ ಸಾರಥ್ಯದಲ್ಲಿ 1952ರಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್‌ ಅವರೊಂದಿಗೆ ಸೇರಿ ಹಾಡು ಹೇಳಿದ್ದೆ. ಆಗ ಜಿ.ಕೆ. ವೆಂಕಟೇಶ್‌ ಯಾರು ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ.

Advertisement

ಮೈಸೂರಿನಲ್ಲಿ ಆ ಕಾರ್ಯಕ್ರಮ ನಡೆದ ಸ್ಥಳ ಕೂಡ ನೆನಪಿಗೆ ಬರುತ್ತಿಲ್ಲ. ನಾಲ್ಕು ರಸ್ತೆ ಕೂಡುವ ವೃತ್ತವೊಂದರಲ್ಲಿ ಅವತ್ತು ಸಂಗೀತ ಕಾರ್ಯಕ್ರಮ ನಡೆದಿತ್ತು. ಅಲ್ಲಿಂದ ಆರಂಭವಾದ ಗಾನಯಾನದಲ್ಲಿ ಈ 60 ವರ್ಷಗಳ ಸುದೀರ್ಘ‌ ಕಾಲದಲ್ಲಿ ವಿವಿಧ ಬಗೆಯ ಹಾಡುಗಳನ್ನು ಹಾಡಿರುವೆ. ಈ ಸುದೀರ್ಘ‌ ಗಾನಯಾನದಿಂದ ನನಗೆ ದಣಿವಾಗಿದೆ. ಇನ್ನು ಸಾಕು ಎಂದಾಗ ಇಡೀ ಸಭಾಂಗಣ ಮೌನ ತಳೆದಿತ್ತು.

ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ನಂತರ “ಇಂದು ಎನಗೆ ಗೋವಿಂದಾ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ’, “ಆಸೆಯ ಭಾವ… ಬದುಕಿನ ಜೀವ’… ಹೀಗೆ ಭಕ್ತಿಗೀತೆ, ಪ್ರೇಮಗೀತೆಗಳು, ಶಾಸಿOಉàಯಗೀತೆಗಳನ್ನು ಹಾಡಿ ತಮ್ಮ ಅಭಿಮಾನಿಗಳಿಗೆ ತಮ್ಮ ಕಂಠಸಿರಿಯನ್ನು ಉಣಬಡಿಸಿದರು. ಹಿರಿಯ ಕಲಾವಿದರಾದ ರಾಜೇಶ್‌, ಶಿವರಾಂ,ಜಯಂತಿ, ಶೈಲಶ್ರೀ, ಭಾರತಿ ವಿಷ್ಣುವರ್ಧನ್‌, ಪ್ರತಿಮಾ ದೇವಿ, ಹೇಮಾಚೌಧರಿ, ಹರಿಣಿ,ಸಂಗೀತ ನಿರ್ದೇಶಕ ರಾಜನ್‌, ನಟರಾದ ಅನಿರುದ್ಧ ಶರಣ್‌, ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ಸಂಸದ ಸಿ.ಎಸ್‌ .ಪುಟ್ಟರಾಜು, ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next