ನವದೆಹಲಿ: ಅಕ್ಟೋಬರ್ 15ರಂದು ನಡೆಯಲಿರುವ ಶಾಂಘೈ ಕೋಆಪರೇಶನ್ ಆರ್ಗನೈಸೇ ಷನ್ (Shanghai Cooperation Organisation) ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಭಾರತ ಶುಕ್ರವಾರ (ಅ.04) ಘೋಷಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಘೋಷಣೆ ಹೊರಡಿಸಿದ್ದಾರೆ. ದಿ.ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಕೊನೆಯ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದಾರೆ. 2015ರ ಡಿಸೆಂಬರ್ ನಲ್ಲಿ ಸ್ವರಾಜ್ ಇಸ್ಲಾಮಾಬಾದ್ ಗೆ ಭೇಟಿ ನೀಡಿದ್ದರು.
ಅಕ್ಟೋಬರ್ 15 ಮತ್ತು 16ರಂದು ಪಾಕಿಸ್ತಾನ ಎಸ್ ಸಿಒ ಕೌನ್ಸಿಲ್ ಶೃಂಗ ಸಭೆ ಆಯೋಜಿಸಿದೆ. ಇಸ್ಲಾಮಾಬಾದ್ ಆಯೋಜಿಸಿರುವ ಈ ಶೃಂಗ ಸಭೆಗೆ ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವರ ತಂಡ ಭಾಗಿಯಾಗಲಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೇವಲ ಎಸ್ ಸಿಒ ಶೃಂಗದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಸ್ ಸಿಒ ಶೃಂಗದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು.
SCO ಶೃಂಗದಲ್ಲಿ ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಜಕ್ ಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ.