ಪುಣೆ: ಪ್ರಸಕ್ತ ಐಪಿಎಲ್‌ನಲ್ಲಿ ಪುಣೆ ತಂಡ ತನ್ನ ನಾಯಕನನ್ನು ಬದಲಾಯಿಸಿ ಸುದ್ದಿಯಾಯಿತಷ್ಟೇ ಅಲ್ಲ, ತಂಡದ ಹೆಸರನ್ನೂ ಒಂದು ಅಕ್ಷರದ ಮಟ್ಟಿಗೆ ಕಿರಿದುಗೊಳಿಸಿ ಅಚ್ಚರಿ ಹುಟ್ಟಿಸಿತು. ರೈಸಿಂಗ್ ಪುಣೆ ಸೂಪರ್ “ಜೈಂಟ್ಸ್’ನಿಂದ “ಎಸ್’ ಅಕ್ಷರವನ್ನು ತೆಗೆದು “ಜೈಂಟ್’ ಎಂದಷ್ಟೇ ಉಳಿಸಿಕೊಂಡಿತು.
ಇದಕ್ಕೇನು ಕಾರಣ ಎಂಬುದು ಈ ವರೆಗೆ ತಿಳಿದಿರಲಿಲ್ಲ. ಈಗ ಪುಣೆ ಫ್ರಾಂಚೈಸಿ ಮಾಲಕ ಸಂಜೀವ ಗೊಯೆಂಕಾ ಈ ಗುಟ್ಟನ್ನು ಬಯಲು ಗೊಳಿಸಿದ್ದಾರೆ. “ಜೈಂಟ್ಸ್’ನಿಂದ ಎಸ್ ಅಕ್ಷರವನ್ನು ತೆಗೆದು ಹಾಕುವಂತೆ ಸೂಚಿಸಿದ್ದು ಒಬ್ಬ ಜೋತಿಷಿ ಯಂತೆ. ಇದರಿಂದ ತಂಡದ ಅದೃಷ್ಟ ಖುಲಾಯಿಸ ಲಿದೆಯೆಂದು ಆತ ಸಲಹೆ ನೀಡಿದ್ದನಂತೆ!
“ತಂಡದ ಹೆಸರಿನ ಕೊನೆಯಲ್ಲಿರುವ ಎಸ್ ಅಕ್ಷರ ತೆಗೆದದ್ದೇ ಆದರೆ ಈ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಸಲಹೆ ಈ ಜ್ಯೋತಿಷಿಯಿಂದ ಬಂತು. ಆದರೆ ನನಗೆ ಇದರಲ್ಲೆಲ್ಲ ನಂಬಿಕೆ ಇರಲಿಲ್ಲ. ಒಂದಂತೂ ನಿಜ, ಕಳೆದ ವರ್ಷ ನಮ್ಮ ನಿರ್ವಹಣೆ ಉತ್ತಮ ಮಟ್ಟದಲ್ಲಿರಲಿಲ್ಲ. ಹೀಗಾಗಿ ಆತನ ಸಲಹೆಯನ್ನು ಪಾಲಿಸಿ ನೋಡೋಣ ಎಂಬ ನಿರ್ಧಾರಕ್ಕೆ ಬಂದೆವು. ಎಸ್ ತೆಗೆದ ಬಳಿಕ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ…’ ಎಂದು ಗೊಯೆಂಕಾ ಹೇಳಿದ್ದಾರೆ.
ಕಳೆದ ವರ್ಷ “ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್’ ಹೆಸರಿನೊಂದಿಗೆ ಮೊದಲ ಐಪಿಎಲ್ ಆಡಿದ್ದ ಪುಣೆ ತಂಡ 10 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿತ್ತು.
ಧೋನಿ ಕೆಳಗಿಳಿಸಲು ಕಾರಣ?
ಧೋನಿಯನ್ನು ಪುಣೆ ತಂಡದ ನಾಯಕತ್ವದಿಂದ ಕೆಳಗಿಳಿಸಲು ಇಂಥದೇ ಏನಾದರೂ ಕಾರಣ ಇದ್ದಿರಬಹುದೇ? ಇದು ಈಗ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ಆದರೆ ಈ ಪ್ರಶ್ನೆ ಸಂಜೀವ ಗೊಯೆಂಕಾ ಅವರಿಗೆ ಎದುರಾಗಲಿಲ್ಲ. ಬದಲು, ಧೋನಿ ಗಿಂತ ಸ್ಮಿತ್ ಹೆಚ್ಚಿನ “ಕ್ರಿಕೆಟ್ ಬುದ್ಧಿಶಕ್ತಿ’ ಯುಳ್ಳ ಆಟಗಾರ ಎಂದು ಹೇಳಿದರು. ಅವರ ಈ ಹೇಳಿಕೆ ಬೇರೊಂದು ವಿವಾದ ವನ್ನು ಹುಟ್ಟುಹಾಕಲೂಬಹುದು!