ಸುಬ್ರಹ್ಮಣ್ಯ : ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಕೆಂದ್ರ ಸರಕಾರಗಳು ಮೀನುಗಾರಿಕೆ ಇಲಾಖೆಗೆ ಹೆಚ್ಚು ಅನುದಾನ ನೀಡುವ ಮೂಲಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸುತ್ತಿವೆ. ಕರ್ನಾಟಕವು ಮೀನುಗಾರಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಮೀನಿನ ಉತ್ಪನ್ನ, ಮಾರುಕಟ್ಟೆ, ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲು ಸಭೆ ನಡೆಸಲಾಗಿದೆ. ಬೋಟಿನಲ್ಲೆ ಮೀನಿನ ಸಂಸ್ಕರಣೆ ಮಾಡುವ ಬಗ್ಗೆ ಯೋಜನೆ ರೂಪಿಸಿ ಜನರಿಗೆ ಗುಣಮಟ್ಟದ ಮೀನು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮಂಗಳೂರಿನಿಂದ ವಿಮಾನ ಮೂಲಕ ಬೆಂಗಳೂರಿಗೆ ಮೀನು ರವಾನಿಸಲು ಸರಕಾರದಿಂದ ಅನುಮತಿ ಸಿಕ್ಕಿದೆ. ಇಲಾಖೆ ವತಿಯಿಂದ ಬೆಂಗಳೂರು ನಗರದಲ್ಲಿ ಮೀನಿನ ಊಟದ ಮನೆಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
9 ರಿಂದ 4 ಕ್ಕೇರಿದ ರಾಜ್ಯ
ಪ್ರಧಾನಮಂತ್ರಿ ಮತ್ಸéಸಂಪದ ಯೋಜನೆ ಮೂಲಕ ಬೇರೆ ಬೇರೆ ಯೋಜನೆ ಅಡಿಯಲ್ಲಿ ಒಳನಾಡು ಮೀನುಗಾರಿಕೆಗೆ ಹೆಚ್ಚು ಅನುದಾನ ಒದಗಿಸಲಾಗುತ್ತಿದೆ. ಈ ಹಿಂದೆ ನಮ್ಮ ರಾಜ್ಯ 9ನೇ ಸ್ಥಾನದಲ್ಲಿತ್ತು. ಪ್ರಸ್ತುತ 4ನೇ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಒಂದನೇ ಸ್ಥಾನ ಪಡೆಯುವ ಗುರಿ ಇದೆ. ಈ ಸಂಬಂಧ ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಸಮ್ಮೇಳನ ಮಾಡಲಾಗಿದೆ. ಮೀನಿನ ವಿವಿಧ ಉತ್ಪನ್ನಗಳನ್ನು ಮಾಡುವ ಬಗ್ಗೆ ಯೋಜನೆ ಮಾಡಲಾಗಿದೆ. ಈಗಾಗಲೇ ದ.ಕ. ಜಿಲ್ಲೆಯ ಮೂಲ್ಕಿಯಲ್ಲಿ ಮೀನಿನಿಂದ ಬಯೋ ಡೀಸೆಲ್ ಉತ್ಪಾದನೆ ಮಾಡುವ ಬಗ್ಗೆ ಚಿಂತಿಸಲಾಗಿದೆ. ಯೋಜನಾ ವರದಿ ಬರಬೇಕಿದೆ. ಬಂದ ಕೂಡಲೇ ಯೋಜನೆ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ : ಡಾ| ಕೃಷ್ಣಮೂರ್ತಿ ನಿಗೂಢ ಸಾವು: ಕುಂದಾಪುರ ಪೊಲೀಸರು ಬದಿಯಡ್ಕಕ್ಕೆ