ಗುರುಗ್ರಾಮ : ಇಲ್ಲಿನ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್‌ನ ಕೊಲೆ ಪ್ರಕರಣದ ತನಿಖೆಯನ್ನು ಹರಿಯಾಣ ಸರಕಾರ ಸಿಬಿಐಗೆ ಒಪ್ಪಿಸಿದೆ.
ಕೊಲೆಗೀಡಾದ ಬಾಲಕನ ಹೆತ್ತವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ತಮ್ಮ ಸರಕಾರದ ನಿರ್ಧಾರವನ್ನು ಪ್ರಕಟಿಸಿದರು.
ಮುಂದಿನ ಮೂರು ತಿಂಗಳ ಮಟ್ಟಿ ರಯಾನ್ ಶಾಲೆಯ ಆಡಳಿತೆಯನ್ನು ಹರಿಯಾಣ ಸರಕಾರ ವಹಿಸಿಕೊಳ್ಳಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಈ ಮೂರು ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿ ವಿನಯ್ ಪ್ರತಾಪ್ ಸಿಂಗ್ ಅವರು ಶಾಲೆಯ ಪ್ರಭಾರ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಖಟ್ಟರ್ ಹೇಳಿದರು.
ಕಳೆದ ಶುಕ್ರವಾರ 2ನೇ ತರಗತಿ ಬಾಲಕ ಪ್ರದ್ಯುಮ್ನ ರಯಾನ್ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಲ್ಪಟ್ಟು ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿತ್ತು.
ಈ ಅಮಾನುಷ ಕೊಲೆ ಪ್ರಕರಣದ ಸಂಬಂಧ ಶಾಲೆಯ ಬಸ್ ಚಾಲಕ ಅಶೋಕ್ ಕುಮಾರ್ ನನ್ನು ಮುಖ್ಯ ಆರೋಪಿ ಎಂದು ಪೊಲೀಸರು ಬಂಧಿಸಿದ್ದಾರೆ.