ಗುರುಗ್ರಾಮ : ಇಲ್ಲಿನ ರಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ನಡೆದ
2ನೇ ತರಗತಿ ವಿದ್ಯಾರ್ಥಿ ಪ್ರಧುಮನ್‌ನ ಭೀಕರ ಹತ್ಯೆಯ ಬಳಿಕ ಗುರುಗ್ರಾಮ ಹೊತ್ತಿ ಉರಿದಿದ್ದು ಭಾನುವಾರ ವ್ಯಾಪಕ ಪ್ರತಿಭಟನೆ ನಡೆದ ಬಗ್ಗೆ ವರದಿಯಾಗಿದೆ.
ಹತ್ಯೆ ಖಂಡಿಸಿ ಭಾನುವಾರ ಶಾಲಾ ಆವರಣ ಮತ್ತು ನಗರದಲ್ಲಿ ಭಾರೀ ಸಂಖ್ಯೆಯ ಜನರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಮದ್ಯದಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಬಾಲಕ ಪ್ರಧುಮನ್‌ನ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಟಾಯ್ಲೆಟ್‌ನಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್‌ನನ್ನು ವಶಕ್ಕೆಪಡೆದಿದ್ದು, ಲೈಂಗಿಕ ದೌರ್ಜನ್ಯ ನಡೆಸಲು ಹೋಗಿ ಮಗುವನ್ನು ಕೊಂದಿದ್ದಾಗಿ ಆತ ಬಾಯ್ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದರು.
ತಪ್ಪಿತಸ್ಥರು ಯಾರೇ ಇರಲಿ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡುವುದು ಖಚಿತ ಎಂದು ಹರಿಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ.