ಹೊಸದಿಲ್ಲಿ : ರಯಾನ್ ಮರ್ಡರ್ ಕೇಸಿನಲ್ಲಿ ಹರಿಯಾಣ ಪೊಲೀಸರಿಂದ ತಪ್ಪಾಗಿ ಕೊಲೆ ಆರೋಪ ಹೊರಿಸಲ್ಪಟ್ಟಿದ ಬಸ್ ಚಾಲಕ ಅಶೋಕ್ ಕುಮಾರ್ ಗೆ ಇಂದು ಮಂಗಳವಾರ, ಗುರುಗ್ರಾಮ ಜಿಲ್ಲಾ ನ್ಯಾಯಾಲಯ ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿತು.
ರಯಾನ್ ಮರ್ಡರ್ ಕೇಸಿಗೆ ಸಂಬಂಧಪಟ್ಟು ತನಿಖೆ ನಡೆಸುತ್ತಿರುವ ಸಿಬಿಐ, ಕೊಲೆ ಆರೋಪಿ ಬಸ್ ಚಾಲಕ ಅಶೋಕ್ ಕುಮಾರ್ ವಿರುದ್ಧ ಯಾವುದೇ ಸಾಕ್ಷ್ಯ ಸಲ್ಲಿಸದಿರುವುದನ್ನು ಗುರುಗ್ರಾಮ ಜಿಲ್ಲಾ ನ್ಯಾಯಾಲಯ ಪರಿಗಣಿಸಿತು.
ಮಾತ್ರವಲ್ಲದೆ ಆರೋಪಿ ಬಸ್ ಚಾಲಕ ಅಶೋಕನನ್ನು ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿ, “ಇದು ಸಾವು ಬದುಕಿನ ಪ್ರಶ್ನೆ; ಆದುದರಿಂದ ನಾವು 50,000 ರೂ. ಬಾಂಡ್ ಆಧಾರದಲ್ಲಿ ಬಸ್ ಚಾಲಕ ಅಶೋಕ್ ಗೆ ಜಾಮೀನು ಬಿಡುಗಡೆ ಮಂಜೂರು ಮಾಡುತ್ತಿದ್ದೇವೆ” ಎಂದು ಹೇಳಿತು.
“ಅಶೋಕ್ ಗೆ ಸಂವಿಧಾನದ 21ನೇ ವಿಧಿಯಡಿ (ಬದುಕುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕು) ಜಾಮೀನು ಮಂಜೂರಾಗಿದೆ. ರಯಾನ್ ಮರ್ಡರ್ ಕೇಸಿನಲ್ಲಿ ಸಿಬಿಐ ಮತ್ತು ಹರಿಯಾಣ ಪೊಲೀಸರು ಪತ್ತೆ ಹಚ್ಚಿದ ಸಂಗತಿಗಳಲ್ಲಿ ಹಲವಾರು ವ್ಯತ್ಯಾಸ, ವೈರುಧ್ಯಗಳಿವೆ. ಅಂತೆಯೇ ಕೊಲೆ ಆರೋಪಿ, ಬಸ್ ಚಾಲಕ ಅಶೋಕ್‌ಗೆ ಸಂಶಯದ ಲಾಭ ನೀಡಲಾಗಿದೆ’ ಎಂದು ಅಶೋಕ್ ಅವರ ವಕೀಲ ಅನಿಲ್ ಶರ್ಮಾ ಹೇಳಿದರು.
ನ್ಯಾಯಾಲಯವು ನಿನ್ನೆ ಸೋಮವಾರ ಕೊಲೆ ಆರೋಪಿ ಅಶೋಕ್ ಕುಮಾರ್ ಅವರ ಜಾಮೀನು ಕೋರಿಕೆ ಅರ್ಜಿ ಮೇಲಿನ ಆದೇಶವನ್ನು ಕಾಯ್ದಿರಿಸಿತ್ತು.